ಹುಬ್ಬಳ್ಳಿ: ‘ತರಾತುರಿಯಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಸರ್ಕಾರ ಏನು ಸಾಧಿಸಲು ಹೊರಟಿದೆ?’ ಎಂದು ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪ್ರಶ್ನಿಸಿದರು.
‘ಮೊದಲು ಜಾತಿಪಟ್ಟಿಯಲ್ಲಿ ಆದ ಗೊಂದಲ ನಿವಾರಿಸಬೇಕು. ಜನರಿಂದ ಆಕ್ಷೇಪಣೆ ಆಹ್ವಾನಿಸಿ, ಹತ್ತು ದಿನ ಕಾಲಾವಕಾಶ ನೀಡಬೇಕು. ಆ ನಂತರ ಕಾನೂನು ತಜ್ಞರ ಸಮಿತಿ ರಚಿಸಿ, ಸಮಾಜದ ಹಿರಿಯರ ಜತೆ ಚರ್ಚಿಸಿ ಜಾತಿ ಸಮೀಕ್ಷೆ ನಡೆಸಬೇಕು. ಇದು ಏಳು ಕೋಟಿ ಕನ್ನಡಿಗರ ಭವಿಷ್ಯದ ಪ್ರಶ್ನೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಹುಬ್ಬಳ್ಳಿಯ ಏಕತಾ ಸಮಾವೇಶಕ್ಕೂ, ಪಂಚಮಸಾಲಿ ಸಮಾಜಕ್ಕೂ ಸಂಬಂಧ ಇಲ್ಲ. ಅದು ಸಣ್ಣ ಸಮಾಜದವರ ಸಮಾವೇಶ. ಕೆಲ ಸ್ವಾಮೀಜಿಗಳು ಭಾಗವಹಿಸಿದ್ದರು. ಪುರೋಹಿತರಿಗೆ ಕಾವಿ ಬಟ್ಟೆ ಹಾಕಿ, ಕೂರಿಸಲಾಗಿತ್ತು’ ಎಂದರು.
‘ಶಾಸಕ ವಿಜಯಾನಂದ ಕಾಶಪ್ಪನವರ ಅವರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆ ಸಮಾವೇಶದಲ್ಲಿ ಭಾಗವಹಿಸಿದ್ದರು. ನಮ್ಮ ಸಮಾಜದವರು ಪಂಚಮಸಾಲಿ ಪೀಠಗಳು ಹೇಳುವುದನ್ನು ಮಾತ್ರ ಕೇಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.