ADVERTISEMENT

ಧಾರವಾಡ: 5ನೇ ವಾರ್ಡ್‌ನಲ್ಲಿ ಕಳ್ಳತನ; ನಿಗಾವಣೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

5ನೇ ವಾರ್ಡ್‌: ವಾರಕ್ಕೊಮ್ಮೆ ನೀರು ಪೂರೈಕೆ, ಹದಗೆಟ್ಟ ರಸ್ತೆಗಳು, ಸ್ವಚ್ಛತೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:10 IST
Last Updated 15 ಆಗಸ್ಟ್ 2025, 5:10 IST
ನಿತಿನ್‌ ಇಂಡಿ
ನಿತಿನ್‌ ಇಂಡಿ   

ಬಿ.ಜೆ.ಧನ್ಯಪ್ರಸಾದ್‌

ಧಾರವಾಡ: ನಗರದ ಐದನೇ ವಾರ್ಡ್‌ನಲ್ಲಿ ಕಳ್ಳತನ, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಇಡುವ ನಿಟ್ಟಿನಲ್ಲಿ ಕಣ್ಗಾವಲಿಗೆ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ಹಲವೆಡೆ ಕಾಂಕ್ರಿಟ್‌ ರಸ್ತೆ ನಿರ್ಮಿಸಲಾಗಿದೆ. ವಾರ್ಡ್‌ನ ಹಲವು ರಸ್ತೆಗಳು ಹದಗೆಟ್ಟಿವೆ, ಸ್ವಚ್ಛತೆ, ಬೀದಿದೀಪಗಳ ಸಮಸ್ಯೆ ಹಲವೆಡೆ ಇದೆ.

ಈ ವಾರ್ಡ್‌ನಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತದೆ. ನೀರು ಪೂರೈಕೆಯಾದಾಗ ವಾರಕ್ಕಾಗುವಷ್ಟು ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಕೆಲ ಸಲ ಮಣ್ಣುಮಿಶ್ರಿತ ನೀರು ಪೂರೈಕೆ ಆಗುತ್ತದೆ ಎಂಬ ದೂರುಗಳು ಇವೆ.

ADVERTISEMENT

ಮಣಿಕಂಠ ನಗರ, ಶಿವ ನಗರ ಸಹಿತ ಹಲವೆಡೆ ರಸ್ತೆಗಳು ಹದೆಗಟ್ಟಿವೆ. 24X7 ನೀರು ಪೂರೈಕೆ ಪೈಪ್‌ ಅಳವಡಿಕೆ ನಿಟ್ಟಿನಲ್ಲಿ ರಸ್ತೆ ಬದಿಗಳಲ್ಲಿ ಅಗೆದು ಮುಚ್ಚಿರುವ ಕಡೆಗಳಲ್ಲಿ ತಗ್ಗುಗಳಾಗಿವೆ. ಕಾಂಕ್ರಿಟ್‌ ರಸ್ತೆ ಅಗೆದು ವ್ಯವಸ್ಥಿತವಾಗಿ ಮುಚ್ಚದಿರುವ ಕಡೆ ಸಂಚಾರ ಪಡಿಪಾಟಲಾಗಿದೆ.

ಮದಿಹಾಳ, ಮಣಿಕಂಠ ನಗರ ಸಹಿತ ವಿವಿಧೆಡೆಗಳಲ್ಲಿ ಗಟಾರಗಳ ಸಮಸ್ಯೆ ಇದೆ. ಚರಂಡಿಗಳಲ್ಲಿ ಕಸ, ಕಡ್ಡಿ, ಕೊಳಕು ತುಂಬಿವೆ.

‘ಕೆಲವೊಮ್ಮೆ ನಳದಲ್ಲಿ ಮಣ್ಣುಮಿಶ್ರಿತ ನೀರು ಬರುತ್ತದೆ. ಕನಿಷ್ಠ ಮೂರು ದಿನಕ್ಕೊಮ್ಮೆಯಾದರೂ ನೀರು ಪೂರೈಸಲು ಸಂಬಂಧಪಟ್ಟವರು ಕ್ರಮ ವಹಿಸಬೇಕು’ ಎಂದು ಮದಿಹಾಳ ನಿವಾಸಿ ನೀಲಮ್ಮ ಸವಣೂರ ಒತ್ತಾಯಿಸಿದರು.

ಮದಿಹಾಳದ ಸರ್ಕಾರಿ ಪ್ರಾಥಮಿಕ ಶಾಲೆ (ನಂಬರ್‌ 3) ಹಿಂಭಾಗದಲ್ಲಿ ಬ್ಯಾಸ್ಕೆಟ್‌ ಬಾಲ್‌ ಅಂಗಳ ನಿರ್ಮಿಸಲಾಗಿದೆ. ಪಕ್ಕದಲ್ಲಿ ವ್ಯಾಯಾಮಕ್ಕೆ ಕೆಲವು ಪರಿಕರ ಅಳವಡಿಸಲಾಗಿದೆ. ನಿರ್ವಹಣೆ ಕೊರತೆಯಿಂದ ಕೆಲವು ಪರಿಕರಗಳು ಹಾಳಾಗಿವೆ.

ನಿವೇಶನಗಳಲ್ಲಿ, ರಸ್ತೆ ಬದಿಗಳಲ್ಲಿ ಕೆಲವೆಡೆ ಕಸ, ತ್ಯಾಜ್ಯ ಸುರಿಯಲಾಗಿದೆ. ಕೆಲವೆಡೆ ಬೀದಿದೀಪಗಳು ಹಾಳಾಗಿವೆ, ಕಂಬಗಳು ದುಃಸ್ಥಿತಿಯಲ್ಲಿವೆ, ತಂತಿಗಳು, ಕೇಬಲ್‌ಗಳು ಜೋತಾಡುತ್ತಿವೆ.

ಧಾರವಾಡದ ಮದಿಹಾಳ ಭಗತ್‌ಸಿಂಗ್‌ ವೃತ್ತದ ಬಳಿಯ ಕಂಬಕ್ಕೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿರುವುದು
ರಾಜು ಉಟಗಿ
ವಾರ್ಡ್ ಸಂಖ್ಯೆ 5ರ ನಕ್ಷೆ
ನೀರು ಸ್ವಚ್ಛತೆ ಬೀದಿದೀಪ ರಸ್ತೆ ಸಮಸ್ಯೆ ಇದೆ. ವರ್ಷಕ್ಕೊಮ್ಮೆ ಗಟಾರಗಳನ್ನು ಸ್ವಚ್ಛಗೊಳಿಸಬೇಕು. ಬೀದಿ ನಾಯಿಗಳ ಹಾವಳಿ ಇದೆ. ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕು.
ರಾಜು ಉಟಗಿ ನಿವಾಸಿ ಮದಿಹಾಳ
₹ 11 ಲಕ್ಷ ಅನುದಾನದಲ್ಲಿ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 24X7 ನೀರು ಪೂರೈಕೆ ಯೋಜನೆ ಕಾರ್ಯಗತವಾದರೆ ನೀರಿನ ಸಮಸ್ಯೆ ಪರಿಹಾರವಾಗಲಿದೆ.
ನಿತಿನ್‌ ಇಂಡಿ ಪಾಲಿಕೆ ಸದಸ್ಯ 5ನೇ ವಾರ್ಡ್‌

'ವಿದ್ಯುತ್‌ ಕಂಬ ಲೈನ್‌ ಬೀದಿದೀಪಕ್ಕೆ ₹ 23 ಲಕ್ಷ ಅನುದಾನ‘

ವಾರ್ಡ್‌ನ ಎಲ್ಲ ಕಡೆ ಎಲ್‌ಇಡಿ ಬೀದಿದೀಪ ಅಳವಡಿಸಲಾಗುತ್ತಿದೆ. ಅಶೋಕ ನಗರ ಮತ್ತು ಮಾಸ್ತೆಮ್ಮ ಮಣಿಕಂಠ ನಗರ ಹಾಗೂ ಮಲ್ಲಿಕಾರ್ಜುನ ನಗರದಲ್ಲಿ ನಗರ ವಿದ್ಯುತ್‌ ಕಂಬ ಲೈನ್‌ ಬೀದಿದೀಪ ಅಳವಡಿಕೆಗೆ ₹ 23 ಲಕ್ಷ ಮಂಜೂರಾಗಿದೆ. ರೇಣುಕಾ ನಗರದಲ್ಲಿ ಪಾರ್ಕ್‌ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ವಾರ್ಡ್‌ ವಿವಿಧೆ‌ಡೆ ಗಟಾರ ನಿರ್ಮಾಣ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದು ವಾರ್ಡ್‌ ಸದಸ್ಯ ನಿತಿನ್‌ ಇಂಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.