ADVERTISEMENT

ಕೊರೊನಾ ಭೀತಿಯಲ್ಲೇ ‘ಬಣ್ಣ’ದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 10:44 IST
Last Updated 14 ಮಾರ್ಚ್ 2020, 10:44 IST
ರಂಗಪಂಚಮಿ ಅಂಗವಾಗಿ ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿ ಶುಕ್ರವಾರ ಯುವತಿಯರು ಬಣ್ಣದಲ್ಲಿ ಮಿಂದೆದ್ದರು –ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ರಂಗಪಂಚಮಿ ಅಂಗವಾಗಿ ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿ ಶುಕ್ರವಾರ ಯುವತಿಯರು ಬಣ್ಣದಲ್ಲಿ ಮಿಂದೆದ್ದರು –ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ‘ವಾಣಿಜ್ಯ ನಗರಿ’ಯಲ್ಲಿ ಶುಕ್ರವಾರ ರಂಗ ಪಂಚಮಿಯ ಸಂಭ್ರಮ ಇತ್ತಾದರೂ ಕೊರೊನಾ ಸೋಂಕಿನ ಭೀತಿಗೆ ಜನ ನಿರೀಕ್ಷಿತ ಪ್ರಮಾಣದಲ್ಲಿ ಮನೆಬಿಟ್ಟು ಹೊರಗೆ ಬಾರದ ಕಾರಣ ಕಳೆಗುಂದಿತ್ತು.

ಪ್ರತೀ ವರ್ಷ ಓಣಿಓಣಿಯಲ್ಲಿಯೂ ರಂಗಿನಾಟ ಎಲ್ಲೇ ಮೀರಿರುತ್ತಿತ್ತು. ಈ ವರ್ಷ ಜನರೇ ಇಲ್ಲದೆ ಹಬ್ಬ ಕಳೆಗುಂದಿತ್ತು. ಆದರೂ, ಇದ್ದಷ್ಟು ಮಂದಿ ರಂಗು-ರಂಗಿನ ಬಣ್ಣದೊಂದಿಗೆ ಮೈ-ಮನ ದಣಿಯುವಷ್ಟು ಕುಣಿದು ಕುಪ್ಪಳಿಸಿದರು. ಕೆಲವರು ಮುಖಕ್ಕೆ ಮಾಸ್ಕ್‌ ಧರಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಬೆಳಿಗ್ಗೆಯಿಂದ ಸಂಜೆ ವರೆಗೂ ಪರಸ್ಪರ ಮುಖಕ್ಕೆ ಬಣ್ಣ ಹಚ್ಚುತ್ತಾ ಹೋಳಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಬೆಳಿಗ್ಗೆ ಮನೆಯಂಗಳದಲ್ಲಿ ಆರಂಭವಾದ ಬಣ್ಣದಾಟ, ಮಧ್ಯಾಹ್ನದ ಏರು ಬಿಸಿಲಿನ ವೇಳೆಗೆ ಪ್ರಮುಖ ಬೀದಿಗಳನ್ನು ಆವರಿಸಿತ್ತು. ಮಕ್ಕಳು ಪಿಚಕಾರಿ ಮೂಲಕ ಬಣ್ಣ ಎರಚಿ ಸಂತೋಷ ಪಟ್ಟರು. ಬಹುತೇಕ ಬೀದಿಗಳಲ್ಲಿ ಮಕ್ಕಳು ಬಕೆಟ್‌ಗಳಲ್ಲಿ ಬಣ್ಣದ ನೀರು ತುಂಬಿಟ್ಟುಕೊಂಡು, ರಸ್ತೆಯಲ್ಲಿ ಸಾಗುವವರಿಗೆ ಎರಚಿ ಹೋಳಿ ಶುಭಾಶಯ ಕೋರಿದರು. ಚಿಕ್ಕ ಪ್ಲಾಸ್ಟಿಕ್‌ ಚೀಲದಲ್ಲಿ ಬಣ್ಣದ ನೀರು ತುಂಬಿಕೊಂಡು ಹೋಗಿ–ಬರುವವರ ಮೇಲೆ ಎಸೆಯುತ್ತಿದ್ದರು.ಪರಸ್ಪರ ಅಂಗೈಯಲ್ಲಿ ಬಣ್ಣ ತುಂಬಿ ಮುಖಕ್ಕೆ ಹಚ್ಚಿ ಸಂಭ್ರಮಿಸಿದರು.

ADVERTISEMENT

ಕೊರೊನಾ ಭೀತಿಯಿಂದ ಮನೆಯಲ್ಲಿಯೇ ಇದ್ದ ಹಲವರನ್ನು ಸ್ನೇಹಿತರು ಬಲವಂತವಾಗಿ ಎಳೆದು ತಂದು ಮುಖಕ್ಕೆ ಬಣ್ಣ ಹಚ್ಚಿದರು. ಯುವ ಜನರ ದಂಡು ಬೈಕ್, ಸ್ಕೂಟಿ ಮೇಲೆ ಕೂತು ಕೇಕೇ ಹಾಕುತ್ತಾ ಹಲಗಿ ಬಾರಿಸುತ್ತಾ ನಗರ ಪ್ರದಕ್ಷಿಣೆ ಹಾಕಿದರು.

ಹಳೇಹುಬ್ಬಳ್ಳಿ, ಚನ್ನಪೇಟೆ, ಬಂಗಾರಪೇಟೆ, ಮ್ಯಾದರ ಓಣಿ, ಕಂಚಗಾರ ಗಲ್ಲಿ, ಸಿದ್ಧಾರೂಢಮಠ ರಸ್ತೆ, ಜಂಗ್ಲಿಪೇಟೆ, ಮಹಾವೀರ ಗಲ್ಲಿಗಳಲ್ಲಿ ಮಕ್ಕಳದ್ದೇ ಕಾರುಬಾರಾಗಿತ್ತು.

ಲತ್ತಿಪೇಟೆ, ಕರ್ಜಗಿ ಓಣಿ, ಹಳೇಹುಬ್ಬಳ್ಳಿ ಭಾಗದ ಪ್ರಮುಖ ಓಣಿಗಳಲ್ಲಿ ಮಹಿಳೆಯರು ಮನೆಯ ಮಾಳಿಗೆ ಮೇಲೆ ನಿಂತು, ಬಣ್ಣದ ನೀರನ್ನು ಎರಚುವ ಮೂಲಕ ಸಂಭ್ರಮಿಸಿದರು.

ತಾಡಪತ್ರಿ ಗಲ್ಲಿ, ಅಕ್ಕಿಪೇಟೆ, ಬಾಗಾರಪೇಟೆ, ನಾರಾಯಣ ಸೋಫಾ, ಮೂರುಸಾವಿರಮಠ ರಸ್ತೆ, ಮಹಾವೀರ ಗಲ್ಲಿ, ರಾಧಾಕೃಷ್ಣಗಲ್ಲಿ, ಗಣೇಶನಗರ, ಹಿರೇಪೇಟೆ, ವಿಠ್ಠಲಪೇಟೆ, ವೀರಾಪುರಓಣಿ, ಅಗಸರ ಓಣಿ, ದೇಶಪಾಂಡೆನಗರ, ಗೋಪನಕೊಪ್ಪ, ಹೆಗ್ಗೇರಿ, ಸಿದ್ಧಾರೂಢ ಮಠ ರಸ್ತೆ ಹಾಗೂ ಇತರೆಡೆ ಕಾಮಣ್ಣನ ಮೂರ್ತಿಗಳನ್ನು ದಹನ ಮಾಡಲಾಯಿತು. ಮ್ಯಾದಾರ ಓಣಿಯಲ್ಲಿ ಬಿದಿರಿನಿಂದ ನಿರ್ಮಿಸಲಾದ ಮೂವತ್ತು ಅಡಿ ಎತ್ತರದ ಬೃಹದಾಕಾರದ ಕಾಮಣ್ಣನ ಮೂರ್ತಿಯನ್ನು ಜಗ್ಗಲಿಗೆ, ವಾದ್ಯದ ಮೂಲಕ ಮೆರವಣಿಗೆ ನಡೆಸಿ, ಮತ್ತೆ ಮ್ಯಾದಾರ ಓಣಿಗೆ ತಂದು ದಹನ ಮಾಡಲಾಯಿತು.

ನಗರದ ಬಹುತೇಕ ಹೋಟೆಲ್‌, ಅಂಗಡಿ-ಮುಂಗಟ್ಟುಗಳು ಬಂದ್‌ ಆಗಿದ್ದವು. ಮುಂಜಾಗ್ರತ ಕ್ರಮವಾಗಿ ನಗರ ಸಾರಿಗೆ ಬಸ್‌ ಹಾಗೂ ಬಿಆರ್‌ಟಿಎಸ್ ಚಿಗರಿ ಸಂಚಾರವನ್ನು ಸಂಜೆಯವರೆಗೆ ಸ್ಥಗಿತಗೊಳಿಸಲಾಗಿತ್ತು. ದೂರದ ಊರುಗಳಿಂದ ನಗರಕ್ಕೆ ಬಂದಿದ್ದ ಪ್ರಯಾಣಿಕರು ಪರದಾಡಿದರು. ಕೆಲವರು ದುಪ್ಪಟ್ಟು ಹಣ ನೀಡಿ ಆಟೊ ರಿಕ್ಷಾದಲ್ಲಿ ಸಂಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.