ADVERTISEMENT

ಗುರು–ಶಿಷ್ಯರ ಸಮ್ಮಿಲನ, ನೆನಪುಗಳ ಸಂಭ್ರಮ

ನ್ಯೂ ಇಂಗ್ಲಿಷ್‌ ಶಾಲೆಯಲ್ಲಿ ‘ಸುವರ್ಣ ಗುರುವಂದನೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 14:21 IST
Last Updated 3 ಜುಲೈ 2019, 14:21 IST
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಸುವರ್ಣ ಗುರುವಂದನೆ ಕಾರ್ಯಕ್ರಮವನ್ನು ನ್ಯೂ ಎಜುಕೇಷನ್‌ ಟ್ರಸ್ಟ್‌ನ ಅಧ್ಯಕ್ಷ ಡಿ.ಆರ್‌. ಇಂಗಳಗಿ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಸುವರ್ಣ ಗುರುವಂದನೆ ಕಾರ್ಯಕ್ರಮವನ್ನು ನ್ಯೂ ಎಜುಕೇಷನ್‌ ಟ್ರಸ್ಟ್‌ನ ಅಧ್ಯಕ್ಷ ಡಿ.ಆರ್‌. ಇಂಗಳಗಿ ಉದ್ಘಾಟಿಸಿದರು   

ಹುಬ್ಬಳ್ಳಿ: ಅವರೆಲ್ಲ ವಿದ್ಯೆ ಕಲಿಸಿದ ಗುರುಗಳನ್ನು, ತಾವು ಆಡಿ ಬೆಳೆದ ಶಾಲೆಯ ಸುಂದರ ಕ್ಷಣಗಳನ್ನು, ನೋವು–ನಲಿವುಗಳನ್ನು ಪರಸ್ಪರ ಹಂಚಿಕೊಂಡು ಖುಷಿಪಟ್ಟರು. ದಿನ‍ಪೂರ್ತಿ ‘ವಿದ್ಯಾರ್ಥಿಗಳಾಗಿ’ದ್ದರು. 50 ವರ್ಷಗಳ ಬಳಿಕ ಒಂದೆಡೆ ಸೇರಿ ಚದುರಿ ಹೋಗಿದ್ದ ನೆನಪುಗಳನ್ನು ಒಂದುಗೂಡಿಸಿದರು.

ಈ ಸುಂದರ ಚಿತ್ರಣಕ್ಕೆ ಸಾಕ್ಷಿಯಾಗಿದ್ದು ಹಳೇ ಹುಬ್ಬಳ್ಳಿಯಲ್ಲಿರುವ ನ್ಯೂ ಎಜುಕೇಷನ್‌ ಟ್ರಸ್ಟ್‌ನ ನ್ಯೂ ಇಂಗ್ಲಿಷ್‌ ಶಾಲೆ. ಈ ಶಾಲೆಯಲ್ಲಿ 1968–69ರಲ್ಲಿ ಎಸ್ಸೆಸ್ಸೆಲ್ಸಿ ಓದಿದ ವಿದ್ಯಾರ್ಥಿಗಳೆಲ್ಲರೂ ಸೇರಿ ಬುಧವಾರ ‘ಸುವರ್ಣ ಗುರುವಂದನೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಆಗ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ ಅನೇಕರು ಈಗ ಉದ್ಯಮಿಗಳಾಗಿದ್ದಾರೆ. ವೈದ್ಯರು, ಎಂಜಿನಿಯರ್‌ಗಳು, ಶಿಕ್ಷಕರಾಗಿದ್ದಾರೆ. ಅವರು ತಮಗೆ ಪಾಠ ಹೇಳಿಕೊಟ್ಟ ಶಿಕ್ಷಕರನ್ನು ಸ್ಮರಿಸಿದರು. ಶಾಲಾ ದಿನಗಳ ತುಂಟಾಟ, ಗುರುಗಳಿಗೆ ನೀಡುತ್ತಿದ್ದ ಗೌರವ, ಈಗ ಬದಲಾದ ಗುರು–ಶಿಷ್ಯರ ಬಾಂಧವ್ಯಗಳ ಬಗ್ಗೆ ಮಾತನಾಡಿದರು.

ADVERTISEMENT

ಅವರಿಗೆ ಪಾಠ ಹೇಳಿಕೊಟ್ಟ ಶಿಕ್ಷಕರಾದ ‌ಕೆ.ಜಿ. ಮೊಕಾಶಿ, ಕೆ.ವಿ. ರಾಯಚೂರ, ಕುಸುಮಾ ಕುಲಕರ್ಣಿ, ರಜನಿ ವಿ. ದೇಶಪಾಂಡೆ, ಜಿ.ಬಿ. ಭುಜಂಗ ಮತ್ತು ಆರ್‌.ಜಿ. ಕವಠೇಕರ ಅವರನ್ನೇ ಅತಿಥಿಗಳನ್ನಾಗಿ ಮಾಡಿದ್ದು ವಿಶೇಷವಾಗಿತ್ತು. ಹಳೇ ವಿದ್ಯಾರ್ಥಿಗಳೆಲ್ಲ ಸೇರಿ ಶಾಲೆಗೆ ಐದು ಕಂಪ್ಯೂಟರ್‌ಗಳನ್ನು ಉಡುಗೊರೆಯಾಗಿ ನೀಡಿದರು.

ಹಳೇ ವಿದ್ಯಾರ್ಥಿ ಜಿ.ಆರ್‌. ಗಜೇಂದ್ರಗಡ ‘ಉತ್ತಮ ಶಿಕ್ಷಕರು ಸಿಕ್ಕರೆ ಮಾತ್ರ ಮನುಷ್ಯ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ. ಹಿಂದೆ ಶಿಕ್ಷಕರು ಕಠಿಣ ಶಿಕ್ಷೆ ಕೊಡುತ್ತಿದ್ದರು. ಅಷ್ಟೇ ಪ್ರೀತಿಯಿಂದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಗುರು–ಶಿಷ್ಯರ ಬಾಂಧವ್ಯದ ಗಟ್ಟಿತನ ಸಡಿಲಗೊಳ್ಳುತ್ತಿದೆ’ ಎಂದರು.

ಲೇಖಕ ಸರಜೂ ಕಾಟ್ಕರ್‌ ಕೂಡ ನ್ಯೂ ಇಂಗ್ಲಿಷ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದವರು. ಆ ನೆನಪುಗಳನ್ನು ಹಂಚಿಕೊಂಡ ಅವರು ‘70ರ ದಶಕದಲ್ಲಿ ಹುಬ್ಬಳ್ಳಿಯಲ್ಲಿ ಲ್ಯಾಮಿಂಗ್ಟನ್‌ ಶಾಲೆಯ ಪ್ರಭಾವ ಹೆಚ್ಚಿತ್ತು. ಆದರೂ, ಅನೇಕರು ಇದೇ ಶಾಲೆಯಲ್ಲಿ ಓದಲು ಬಯಸುತ್ತಿದ್ದರು. ನ್ಯೂ ಇಂಗ್ಲಿಷ್‌ ಶಾಲೆಯಲ್ಲಿ ಒಂದೇ ವರ್ಷ ಓದಿದರೂ ನನಗೆ ಸಾಕಷ್ಟು ನೆನಪುಗಳು ಇವೆ. ಉತ್ತಮ ಸಂಸ್ಕಾರವನ್ನು ಮತ್ತು ಗೆಳೆಯರನ್ನು ಕೊಟ್ಟ ಶಾಲೆ ಇದು’ ಎಂದು ಹೆಮ್ಮೆ ವ್ಯಕ್ತಪಡಿಸಿದರು.

‘ಮೆಕಾಲೆ ಶಿಕ್ಷಣವನ್ನು ಬಲವಾಗಿ ವಿರೋಧಿಸಿದ್ದ ಲೋಕಮಾನ್ಯ ತಿಲಕರು 1884ರಲ್ಲಿ ಪುಣೆಯಲ್ಲಿ ನ್ಯೂ ಎಜುಕೇಷನ್‌ ಟ್ರಸ್ಟ್ ಪ್ರಾರಂಭಿಸಿದರು. ಆಗ ಈ ಶಾಲೆ ಕೂಡ ಆರಂಭವಾಯಿತು. ರಾಷ್ಟ್ರೀಯ ಚಿಂತನೆಯ ವಿಚಾರಗಳ ಮೇಲೆಯೇ ಶಿಕ್ಷಣ ಪದ್ಧತಿ ಇರಬೇಕೆಂಬುದು ತಿಲಕರ ಆಶಯವಾಗಿತ್ತು’ ಎಂದರು.

ನ್ಯೂ ಎಜುಕೇಷನ್‌ ಟ್ರಸ್ಟ್‌ನ ಅಧ್ಯಕ್ಷ ಡಿ.ಆರ್‌. ಇಂಗಳಗಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎ.ಡಿ. ಕುಲಕರ್ಣಿ, ಗೌರವ ಕಾರ್ಯದರ್ಶಿ ಶ್ರೀಕಾಂತ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.