ADVERTISEMENT

ಹುಬ್ಬಳ್ಳಿಯ ‘ಗ್ರೀನ್‌ ಕಾರಿಡಾರ್‌’ಗೆ ಕೇಂದ್ರ ಸರ್ಕಾರದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 16:37 IST
Last Updated 25 ಆಗಸ್ಟ್ 2023, 16:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಕೇಂದ್ರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನೀಡುವ 2022ನೇ ಸಾಲಿನ ‘ಅತ್ಯುತ್ತಮ ರಾಷ್ಟ್ರೀಯ ಸ್ಮಾರ್ಟ್‌ ಸಿಟಿ ಪ್ರಶಸ್ತಿ’ ಪಟ್ಟಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ್ದು, ‘ನವೀನ ಕಲ್ಪನೆ ಪ್ರಶಸ್ತಿ’ ವಿಭಾಗದಲ್ಲಿ ನಗರದ ರಾಜಕಾಲುವೆಯ ಗ್ರೀನ್‌ ಕಾರಿಡಾರ್‌ ಯೋಜನೆಗೆ ಪ್ರಥಮ ಸ್ಥಾನ ದೊರಕಿದೆ.

ಸೆ. 7ರಂದು ಇಂದೋರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಹಾಗೂ ಇತರರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಬಳಕೆಗೆ ಯೋಗ್ಯವಲ್ಲದ, ಸದಾ ಗಬ್ಬುವಾಸನೆ ಬೀರುತ್ತಿದ್ದ ನಗರದ 9 ಕಿ.ಮೀ. ರಾಜಕಾಲುವೆಯನ್ನು ಅಭಿವೃದ್ಧಿ ಪಡಿಸಲು, ಸ್ಮಾರ್ಟ್‌ಸಿಟಿ ಯೋಜನೆಯಡಿ ₹210 ಕೋಟಿ ವೆಚ್ಚದ ಯೋಜನೆ ರೂಪಿಸಿ, ಮೊದಲ ಹಂತದಲ್ಲಿ 5 ಕಿ.ಮೀ. ನಾಲಾ ಅಭಿವೃದ್ಧಿಪಡಿಸಿ ಗ್ರೀನ್‌ ಕಾರಿಡಾರ್‌ ಮಾಡಿದ್ದೇವೆ. ಅದರ ಐದು ನಿಮಿಷದ ವಿಡಿಯೊ ಸಿದ್ಧಪಡಿಸಿ ಪಿಪಿಟಿ ಮೂಲಕ ಕೇಂದ್ರ ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗಿತ್ತು. ದೇಶದ 42 ಸ್ಮಾರ್ಟ್‌ಸಿಟಿಗಳಿಂದ ವಿವಿಧ ಯೋಜನೆಗಳಿಗೆ ಸಂಬಂಧಿಸಿ 70 ಪ್ರಸ್ತಾವಗಳು ‘ನವೀನ ಕಲ್ಪನೆ ಪ್ರಶಸ್ತಿ’ ವಿಭಾಗಕ್ಕೆ ಹೋಗಿದ್ದವು. ವಿನೂತನ ಕಲ್ಪನೆಯಲ್ಲಿ ಕಾರ್ಯರೂಪಕ್ಕೆ ಬಂದ ನಮ್ಮ ರಾಜಕಾಲುವೆ ಅಭಿವೃದ್ಧಿಯ ಗ್ರೀನ್‌ ಕಾರಿಡಾರ್‌ ಯೋಜನೆ ಮೊದಲ ಬಹುಮಾನಕ್ಕೆ ಪುರಸ್ಕೃತವಾಗಿದೆ’ ಎಂದು ಉಪಪ್ರಧಾನ ವ್ಯವಸ್ಥಾಪಕ ಚನ್ನಬಸವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಉಣಕಲ್‌ ಕೆರೆಯಿಂದ ಹಳೇಹುಬ್ಬಳ್ಳಿ ಸೇತುವೆವರೆಗಿನ ಐದು ಕಿ.ಮೀ. ರಾಜಕಾಲುವೆಯನ್ನು ಮೊದಲ ಹಂತದಲ್ಲಿ ₹130 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕಾಲುವೆಗೆ ಸಮಾನಾಂತರವಾಗಿ ಸೈಕಲ್‌ ಪಾತ್‌ ಹಾಗೂ ಪಾದಚಾರಿ ಮಾರ್ಗ ನಿರ್ಮಿಸಲಾಗಿದೆ. ಸುತ್ತಲಿನ ನಿವಾಸಿಗಳು ಕಾಲುವೆಗೆ ತ್ಯಾಜ್ಯ ಹಾಗೂ ನಿರುಪಯುಕ್ತ ವಸ್ತುಗಳು ಹಾಕದಂತೆ ಸುತ್ತಲೂ ಕಬ್ಬಿಣದ ಬೇಲಿಹಾಕಿ, ಗಬ್ಬು ವಾಸನೆ ಬೀರುತ್ತಿದ್ದ ನಾಲಾವನ್ನು ಶುಚಿಯಾಗಿಡಲಾಗಿದೆ. ವಿದ್ಯುತ್‌ ದೀಪಗಳನ್ನು ಅಳವಡಿಸಿ, ಮಕ್ತ ಸಂಚಾರ ಪಥವನ್ನಾಗಿ ಮಾಡಲಾಗಿದೆ. ಹಳೇಹುಬ್ಬಳ್ಳಿಯಿಂದ ಗಬ್ಬೂರುವರೆಗಿನ ನಾಲ್ಕು ಕಿ.ಮೀ. ಕಾರಿಡಾರ್‌ ಕಾಮಗಾರಿಯನ್ನು ₹80 ಕೋಟಿ ವೆಚ್ಚದಲ್ಲಿ  ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.