ADVERTISEMENT

ಸಮ್ಮೇಳನದ ನೆಪದಲ್ಲಿ ಶತಮಾನದ ಮರಕ್ಕೆ ‘ಮಹಾಮಜ್ಜನ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 12:12 IST
Last Updated 5 ಡಿಸೆಂಬರ್ 2018, 12:12 IST
ಧಾರವಾಡದ ಕಾಲೇಜು ರಸ್ತೆಯಲ್ಲಿರುವ ಶತಮಾನ ಕಂಡ ಮರ ಹಾಗೂ ಆವರಣವನ್ನು ಬುಧವಾರ ಸ್ವಚ್ಛಗೊಳಿಸಲಾಯಿತು
ಧಾರವಾಡದ ಕಾಲೇಜು ರಸ್ತೆಯಲ್ಲಿರುವ ಶತಮಾನ ಕಂಡ ಮರ ಹಾಗೂ ಆವರಣವನ್ನು ಬುಧವಾರ ಸ್ವಚ್ಛಗೊಳಿಸಲಾಯಿತು   

ಧಾರವಾಡ: ಪ್ರಕೃತಿಯ ಋತುಮಾನಗಳೊಂದಿಗೆ ಸಹಜವಾಗಿಯೇ ಬೆಳೆದು, ನೂರು ವರ್ಷಗಳಿಂದ ನೆರಳು, ಗಾಳಿ ನೀಡುತ್ತಿ‌ದ್ದ ಅರಳಿ ಮರಕ್ಕೆ ಬುಧವಾರ ‘ಮಹಾಮಜ್ಜನ’ ಭಾಗ್ಯ.

ಜ. 4ರಿಂದ ಜರುಗಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸ್ವಚ್ಛಗೊಳ್ಳುತ್ತಿರುವ ನಗರದಲ್ಲಿ ಶತಮಾನಕ್ಕೆ ಸಾಕ್ಷಿಯಾಗಿರುವ ಕಾಲೇಜು ರಸ್ತೆಯ ಡಯಟ್ ಆವರಣದ ಎದುರಿನ ಅರಳಿ ಮರದ ಖಾಂಡಕ್ಕೆ ನೀರು ಹಾಯಿಸಿ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿ ಸ್ವಚ್ಛಗೊಳಿಸಿದರು.

ಇಂಗ್ಲೆಂಡ್‌ನ ದೊರೆ ಭಾರತದ ಚಕ್ರಾಧಿಪತ್ಯ ಹೊಂದಿದ್ದ 7ನೇ ಎಡ್ವರ್ಡ್‌ ಅವರ ಪಟ್ಟಾಭಿಷೇಕದ ನೆನಪಿಗಾಗಿ 1ನೇ ಜನವರಿ 1903ರಂದು ಈ ಮರವನ್ನು ಡಯಟ್ ಆವರಣದ ಎದುರು ನೆಡಲಾಗಿತ್ತು. ಗಿಬ್ ದಂಪತಿ ಮತ್ತು ನೈಟ್‌ ಉಪಸ್ಥಿತಿಯಲ್ಲಿ ರೊದ್ದ ಶ್ರೀನಿವಾಸರಾಯರು ಈ ಗಿಡವನ್ನು ನೆಟ್ಟಿದ್ದರು.

ADVERTISEMENT

115 ವರ್ಷಗಳನ್ನು ಪೂರೈಸಿರುವ ಈ ಅರಳಿ ಮರದ ಕಟ್ಟೆಯನ್ನು ಶುಚಿಗೊಳಿಸಿದ ಅಧಿಕಾರಿಗಳು, ಅದಕ್ಕೆ ಬಣ್ಣ ಬಳಿದು ಅಂದಗೊಳಿಸಿದರು. ರಂಗಾಯಣದ ನೇತೃತ್ವದಲ್ಲಿ ಕಲಾವಿದರು ಬಣ್ಣ ಹಚ್ಚಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ.ಸತೀಶ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ರಂಗಾಯಣ ಆಡಳಿತಾಧಿಕಾರಿ ಕೆ.ಎಚ್. ಚನ್ನೂರ, ಆಹಾರ ಇಲಾಖೆಯ ಜಂಟಿನಿರ್ದೇಶಕ ಸದಾಶಿವ ಮರ್ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ. ರಂಗಣ್ಣವರ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಪ್ರಕಾಶ ಉಡುಕೇರಿ, ಎಸ್.ಎಸ್. ದೊಡ್ಡಮನಿ, ಎಫ್.ಬಿ. ಕಣವಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಎನ್.ಆರ್. ಬಾಳಿಕಾಯಿ, ಶ್ರೀಶೈಲ ರಾಚಣ್ಣವರ, ಬಸವರಾಜ ವಾಸನದ್, ವಿಜಯ ಮಹಾಂತೇಶ ಹೊಸಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.