ಹುಬ್ಬಳ್ಳಿ: ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯು ಮೂರು ವರ್ಷಗಳ ಹಿಂದೆಯೇ ಪ್ರೌಢಶಾಲೆಯಾಗಿ ಉನ್ನತೀಕಣಗೊಂಡಿತ್ತು. ಆದರೆ, ಪ್ರೌಢಶಾಲೆಗೆ ಸ್ವಂತ ಕಟ್ಟಡ ಇರಲಿಲ್ಲ. ಭಾನುವಾರ ಅದರ ಉದ್ಘಾಟನಾ ಕಾರ್ಯ ನೆರವೇರಿತು. ನೂತನ ಕಟ್ಟಡದಿಂದ ವಿದ್ಯಾರ್ಥಿಗಳು, ಗ್ರಾಮಸ್ಥರು ಹರ್ಷಗೊಂಡಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಶಾಲಾ ಕಟ್ಟಡಕ್ಕೆ ಮಂಜೂರಾತಿ ನೀಡಿದ್ದರು. ಆರ್.ಅಶೋಕ ಅವರು ಕಂದಾಯ ಸಚಿವರಾಗಿದ್ದಾಗ 2021-22ನೇ ಸಾಲಿನಲ್ಲಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದರು. ಆಗ ಅವರು ₹1 ಕೋಟಿ ವಿಶೇಷ ಅನುದಾನ ನೀಡಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವದ ಮೇರೆಗೆ ಎನ್‌ಟಿಪಿಸಿ ಕಂಪನಿಯ ಸಿಎಸ್‌ಆರ್ ನಿಧಿಯಿಂದ ₹31.4 ಲಕ್ಷ ಅನುದಾನ ಒದಗಿಸಿತ್ತು.
ಹೊಸ ಕಟ್ಟಡದಲ್ಲಿ ಒಟ್ಟು ಆರು ಕೊಠಡಿಗಳಿವೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ₹8 ಲಕ್ಷ ಅನುದಾನದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಹೊರಟ್ಟಿಯವರು ಎರಡು ಸ್ಮಾರ್ಟ್ ಬೋರ್ಡ್ ಒದಗಿಸಿದರೆ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು 20 ಕಂಪ್ಯೂಟರ್‌ಗಳನ್ನು ನೀಡಿದ್ದಾರೆ. ಶಾಸಕ ಎಂ.ಆರ್.ಪಾಟೀಲ ಅವರು ಮತ್ತು ಸ್ಥಳೀಯ ದಾನಿಗಳು ಸಹ ಶಾಲಾ ಕಟ್ಟಡ ನಿರ್ಮಾಣಕ್ಕೆ ನೆರವು ನೀಡಿದ್ದಾರೆ. ವಿವಿಧ ಸಿ.ಎಸ್.ಆರ್ ನಿಧಿ ಅಡಿ 40 ಡೆಸ್ಕ್‌ಗಳನ್ನು ಸಹ ಶಾಲೆಗೆ ನೀಡಲಾಗಿದೆ.
1952ರಲ್ಲಿ ಛಬ್ಬಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಆರಂಭವಾಗಿತ್ತು. ಛಬ್ಬಿ ಗ್ರಾಮ ಮತ್ತು ಪ್ಲಾಟ್‌ನ ವಿದ್ಯಾರ್ಥಿಗಳು ಇಲ್ಲಿ ಓದುತ್ತಾರೆ. ಇದು ಮಾದರಿ ಶಾಲೆಯಾಗಿದೆ.ಉಮೇಶ ಬೊಮ್ಮಕ್ಕನವರ ಶಿಕ್ಷಣಾಧಿಕಾರಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ
‘ಎಸ್‌ಇಪಿ ಜಾರಿ ಮಾಡುತ್ತೇವೆ’
ಹುಬ್ಬಳ್ಳಿ: ‘ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೆ ತರಲೆಂದೇ ಜನರು ಮತ ಹಾಕಿದ್ದಾರೆ. ಜಾರಿ ಮಾಡುತ್ತೇವೆ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಭಾನುವಾರ ತಾಲ್ಲೂಕಿನ ಛಬ್ಬಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ‘ರಾಜ್ಯದಲ್ಲಿ ಎನ್‌ಇಪಿ ಜಾರಿಯಾದರೆ ಬೇರೆಯವರು (ಕೇಂದ್ರ ಸರ್ಕಾರ) ಹಿಡಿತ ಸಾಧಿಸುತ್ತಾರೆ. ಮಕ್ಕಳಿಗೆ ಕರ್ನಾಟಕಕ್ಕೆ ಸಂಬಂಧಿತ ವಿಷಯಗಳು ಮರೆತುಹೋಗುತ್ತವೆ’ ಎಂದರು. ‘ಮಕ್ಕಳಿಗೆ ಮೊದಲು ರಾಜ್ಯದ ಸಂಸ್ಕೃತಿ ಪರಂಪರೆ ವ್ಯವಸ್ಥೆ ತಿಳಿಸಬೇಕು. ದೇಶದ ಬಗ್ಗೆ ತಿಳಿಸಬೇಕು. ದ್ವೇಷ ಕಲಿಸಬಾರದು. ಪ್ರಗತಿಗೆ ಜಾತಿ ಮೀರಿದ ಶಿಕ್ಷಣ ನೀಡಬೇಕು’ ಎಂದರು. ‘ಒಳಮೀಸಲಾತಿ ಜಾರಿ ನಂತರ 17500 ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.