ಹುಬ್ಬಳ್ಳಿ: ‘ಇಲ್ಲಿನ ಉಣಕಲ್‌ನಲ್ಲಿರುವ ಪುರಾತನ ಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿ ಕುರಿತು ಜುಲೈ 31ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದ್ದು, ₹25 ಕೋಟಿ ಅನುದಾನಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ದೇವಸ್ಥಾನಕ್ಕೆ ಅನೇಕ ಗಣ್ಯರು ಭೇಟಿ ನೀಡುತ್ತಿದ್ದು, ಅದರ ಪ್ರಖ್ಯಾತಿ ಹೆಚ್ಚುತ್ತಿದೆ. ಹಾಗಾಗಿ, ದೇಗುಲವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಪುರಾತತ್ವ ಇಲಾಖೆ ಕ್ರಮವಹಿಸಬೇಕು. ಹು–ಧಾ ಮಹಾನಗರ ಪಾಲಿಕೆಯೊಂದಿಗೆ ಜಂಟಿ ಸಮೀಕ್ಷೆ ನಡೆಸಬೇಕು. ಈ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದರು.
‘ಉಣಕಲ್ ಸಾಯಿನಗರದಲ್ಲಿ ಬಾಕಿ ಉಳಿದ 300 ಮೀಟರ್ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಭೂ ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪರಿಹಾರ ಮೊತ್ತವನ್ನು ಸಂದಾಯ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೀದಿ ದೀಪಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಪಾಲಿಕೆ ಆಯುಕ್ತರಿಗೆ ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು, ಹು–ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪುರಾತತ್ವ ಇಲಾಖೆ ಆಯುಕ್ತ ರಮೇಶ ಮೂಲಿಮನಿ, ಪಾಲಿಕೆ ಸದಸ್ಯರಾದ ಉಮೇಶಗೌಡ ಕೌಜಗೇರಿ, ಬೀರಪ್ಪ ಖಂಡೇಕರ ಇದ್ದರು.
ರಕ್ಷಣಾ ಇಲಾಖೆಗೆ ಪರ್ಯಾಯ ಜಾಗ
ವಿಶ್ವೇಶ್ವರ ನಗರದಲ್ಲಿರುವ ರಕ್ಷಣಾ ಇಲಾಖೆಗೆ ಸೇರಿದ ಏಳು ಎಕರೆ ಜಾಗಕ್ಕೆ ಪರ್ಯಾಯವಾಗಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಭೂಮಿ ನೀಡುವ ಕುರಿತು ಜುಲೈ 31ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ತೀರ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.