ADVERTISEMENT

ಧಾರವಾಡ| ಮಾಡಿದ ಕಾರ್ಯಕ್ರಮ ಪರಿಶೀಲಿಸಿರಿ: ಬಸವಪ್ರಭು ಹೊಸಕೇರಿ

​ಪ್ರಜಾವಾಣಿ ವಾರ್ತೆ
Published 19 ಮೇ 2025, 14:15 IST
Last Updated 19 ಮೇ 2025, 14:15 IST
ಬಸವಪ್ರಭು ಹೊಸಕೇರಿ
ಬಸವಪ್ರಭು ಹೊಸಕೇರಿ   

ಧಾರವಾಡ: ‘ಕರ್ನಾಟಕ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಮೂಲಕ ಕಳೆದ ಮೂರು ವರ್ಷದ ಅವಧಿಯಲ್ಲಿ ಕಲೆ, ಸಾಹಿತ್ಯ, ಸಂಗೀತ, ನಾಡು-ನುಡಿ ಸೇರಿದಂತೆ ಭೌತಿಕ, ಬೌದ್ಧಿಕವಾಗಿ ಸಂಘವನ್ನು ಅಭಿವೃದ್ಧಿ ಪಡಿಸಲು ಶ್ರಮಿಸಿದ್ದೇವೆ’ ಎಂದು ಚಂದ್ರಕಾಂತ ಬೆಲ್ಲದ ಬಣದ ಕಾರ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಬಸವಪ್ರಭು ಹೊಸಕೇರಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಡಳಿತ ಮಂಡಳಿಯು ದತ್ತಿಗೆ ಮಾತ್ರ ಸೀಮಿತ, ನಿಷ್ಕ್ರಿಯವಾಗಿದೆ ಎಂದು ವಿರೋಧಿ ತಂಡದವರು ಟೀಕಿಸುತ್ತಿದ್ದಾರೆ. ನಾವು ಮಾಡಿದ ಕಾರ್ಯಕ್ರಮಗಳು ದಾಖಲೆಗಳು ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿದ್ದು, ಪರಿಶೀಲಿಸಬೇಕು’ ಎಂದರು.

‘ಸಂಘವು ಯುವ ಸಮ್ಮೇಳನ, ಹಳಗನ್ನಡ ಕಾವ್ಯ ರಸಸ್ವಾದ, ನಾಥ ಪಂಥಗಳು, ಧರೆಗೆ ದೊಡ್ಡವರು, ಸಂತಾನೋತ್ಪತ್ತಿ ವಿಸ್ಮಯ ಗೋಷ್ಠಿಗಳು ಸೇರಿದಂತೆ ರಾಜ್ಯೋತ್ಸವ ಅಂಗವಾಗಿ ನವೆಂಬರ್ ತಿಂಗಳರ್ಪೂತಿ ನಾಟಕಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಶಿಕ್ಷಣ ಮಂಟಪದಿಂದ 72 ಶಾಲೆಗಳ 3,500 ಮಕ್ಕಳಿಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ ಕುರಿತು ಕಾರ್ಯಾಗಾರ, ಸಂಘದ ಆವರಣದಲ್ಲಿ ಸಿರಿಗನ್ನಡ ಪುಸ್ತಕ ಮಳಿಗೆ ಸ್ಥಾಪನೆ, ಕಲಾ ಗ್ಯಾಲರಿ ನಿರ್ಮಾಣ, ಸುಸಜ್ಜಿತ ಗ್ರಂಥಾಲಯ ನಿರ್ಮಾಣ, ವಾಗ್ಭೂಷಣ ಪತ್ರಿಕೆ ಪುನರಾರಂಭ, ಒಳನಾಡ-ಹೊರನಾಡು ಹಾಗೂ ಗಡಿನಾಡು ಸಮ್ಮೇಳನ ಯಶಸ್ವಿಯಾಗಿ ನಡೆಸಿದ್ದೇವೆ’ ಎಂದರು.

‘ಸರ್ಕಾರ ಹೇಳಿದಂತೆ ಸಂಘಕ್ಕೆ 5 ಎಕರೆ ಜಾಗ ಪಡೆಯುವ ಪ್ರಯತ್ನ ನಡೆದಿದೆ. ವಾರ್ಷಿಕ ₹60 ಲಕ್ಷ ಅನುದಾನ ತಂದಿದ್ದು, ಇರುವ ಅನುದಾನದಲ್ಲೇ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಿದ್ದೇವೆ. ಚಿಂತನೆ, ಮುಂದಾಲೋಚನೆ ಹಾಗೂ ಯೋಜನೆ ಇಲ್ಲದೆ ಅನುದಾನ ತರುವ ವಿಷಯವಾಗಿ ಸಂಘದ ಕಾರ್ಯಗಳನ್ನು ಟೀಕಿಸುವುದು ಸರಿಯಲ್ಲ’ ಎಂದರು.

ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಚಂದ್ರಕಾಂತ ಬೆಲ್ಲದ ಮಾತನಾಡಿ, ‘ಕರ್ನಾಟಕ ವಿದ್ಯಾವರ್ಧಕ ಸಂಘದ ಮತದಾರರು ಚುನಾವಣೆಯಲ್ಲಿ ಯಾರಿಗೆ ವಯಸ್ಸಾಗಿದೆ? ಯಾರು ಕ್ರಿಯಾಶೀಲರಾಗಿದ್ದಾರೆ? ಎಂದು ಮೋಹನ ಲಿಂಬಿಕಾಯಿ ಅವರಿಗೆ ತೋರಿಸಲಿದ್ದಾರೆ’ ಎಂದು ಹೇಳಿದರು.

ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಸಂಜೀವ ಕುಲಕರ್ಣಿ, ಸತೀಶ ತುರಮರಿ, ವಿಶ್ವೇಶ್ವರಿ ಹಿರೇಮಠ, ಧನವಂತ ಹಾಜವಗೋಳ, ವೀರಣ್ಣ ಒಡ್ಡೀನ, ಶೈಲಜಾ ಅಮರಶೆಟ್ಟಿ, ಗುರು ಹಿರೇಮಠ, ಮಹೇಶ ಹೊರಕೇರಿ, ಶಿವಾನಂದ ಭಾವಿಕಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

‘ಶಾಶ್ವತ ಅನುದಾನಕ್ಕಾಗಿ ಪತ್ರ’

ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ ಶಂಕರ ಹಲಗತ್ತಿ ಮಾತನಾಡಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಶಾಶ್ವತ ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಎಲ್ಲ ಶಾಸಕರು ಹಾಗೂ ಸಚಿವರಿಗೆ ಪತ್ರ ಬರೆದಿದ್ದೇವೆ ಎಂದರು. ‘ನಮ್ಮ ಆಡಳಿತ ಅವಧಿಯಲ್ಲಿ ವೈದ್ಯಕೀಯ ಸಾಹಿತ್ಯ ಸಮಾವೇಶ ಪಶು ವೈದ್ಯಕೀಯ ಸಾಹಿತ್ಯ ಸಮಾವೇಶ ಪರಿಸರ ಸಾಹಿತ್ಯ ಸಮಾವೇಶಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಪಾಟೀಲ ಪುಟ್ಟಪ್ಪ ಪ್ರಶಸ್ತಿ ರಾ.ಹ.ದೇಶಪಾಂಡೆ ಶಿರೂರ ಸಂಶೋಧನಾ ಪ್ರಶಸ್ತಿ ರಾಜೂರು ಸಂಶೋಧನಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಜಾರಿಗೊಳಿಸಿದ್ದೇವೆ ಮೂರು ವರ್ಷದ ಸಾಧನೆ ಹೆಮ್ಮೆ ತರಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.