ADVERTISEMENT

ದೂಳಿನಿಂದ ಮಿಂದೆದ್ದ ಚನ್ನಮ್ಮ ವೃತ್ತ

ಸಂಚಾರ ದಟ್ಟಣೆ: ಕಾಮಗಾರಿ ಹೆಸರಿನಲ್ಲಿ ನಿತ್ಯ ನರಕ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 5:14 IST
Last Updated 4 ಅಕ್ಟೋಬರ್ 2025, 5:14 IST
ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯಿಂದ ಸಂಚಾರ ಬಂದ್‌ ಆಗಿದೆ
ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯಿಂದ ಸಂಚಾರ ಬಂದ್‌ ಆಗಿದೆ   

ಹುಬ್ಬಳ್ಳಿ: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತವು ದಿನದಿಂದ ದಿನಕ್ಕೆ ತನ್ನ ಸ್ವರೂಪ ಕಳೆದುಕೊಳ್ಳುತ್ತಿದೆ. ವೃತ್ತದಲ್ಲಿ ಆರಕ್ಕೂ ಹೆಚ್ಚು ರಸ್ತೆಗಳಿಗೆ ಸಂಪರ್ಕಸೇತುವಾಗಿದ್ದ ಈ ವೃತ್ತದಲ್ಲಿ ಸದ್ಯ ಮೇಲ್ಸೇತುವೆ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳು ನಡೆದಿವೆ. ಇದರ ಪರಿಣಾಮ ವೃತ್ತವು ತನ್ನ ಸ್ವರೂಪ ಬದಲಿಸಿಕೊಂಡು, ದೂಳುಮಯವಾಗಿದೆ.

ಮೇಲ್ಸೇತುವೆ ನಿರ್ಮಾಣಕ್ಕಾಗಿ ಎಲ್ಲಿ ಬೇಕೆಂದಲ್ಲಿ ತಗ್ಗು ತೋಡಲಾಗಿದೆ. ಅಲ್ಲಲ್ಲಿ ಕಬ್ಬಿಣದ ಭಾರಿ ಗಾತ್ರದ ವಸ್ತುಗಳನ್ನು ಇಡಲಾಗಿದೆ. ಅಲ್ಲಲ್ಲಿ ಸಿಮೆಂಟ್‌ ಕಂಬಗಳನ್ನು ಅಳವಡಿಸಲಾಗಿದೆ. ರಸ್ತೆ ದಾಟಲು ಅಥವಾ ವೃತ್ತ ದಾಟಲು ಎಲ್ಲಿಯೂ ಸುಗಮವಾದ ವ್ಯವಸ್ಥೆಯೂ ಇಲ್ಲ. ವೇಗವಾಗಿ ಸಾಗುವ ವಾಹನಗಳಿಂದ ಅಪಘಾತಕ್ಕೀಡಾಗುವ ಭಯ ಕಾಡುತ್ತದೆ.

‘ಬೆಳಿಗ್ಗೆ ಮತ್ತು ಸಂಜೆ ವೇಳೆ ವಾಹನಗಳ ಸಂಚಾರದಿಂದ ದಟ್ಟಣೆ ಹೆಚ್ಚಾಗಿದೆ. ಅಲ್ಲದೇ ರಸ್ತೆಗಳನ್ನು ಅಗೆದಿರುವುದರಿಂದ ಪದೇ ಪದೇ ಅಪಘಾತ ಸಂಭವಿಸುತ್ತವೆ. ಇದೇ ಮಾರ್ಗದಲ್ಲಿ ದ್ವಿಚಕ್ರ ವಾಹನ, ಚಿಗರಿ ಬಸ್, ಬೇಂದ್ರೆ ಬಸ್‌, ಸಾರಿಗೆ ಸಂಸ್ಥೆಗಳ ಬಸ್‌ ಸೇರಿದಂತೆ ನೂರಾರು ಖಾಸಗಿ ವಾಹನಗಳು ಏಕಕಾಲದಲ್ಲಿ ಸಂಚರಿಸುವ ಮೂಲಕ ಪ್ರಯಾಣವನ್ನು ಮತ್ತಷ್ಟು ಅಸಹನೀಯಗೊಳಿಸಿವೆ. ಸಿಗ್ನಲ್ ದೀಪಗಳಿದ್ದರೂ ಪ್ರಯೋಜನವಿಲ್ಲದ ಸ್ಥಿತಿಯಲ್ಲಿವೆ’ ಎಂದು ಬ್ಯಾಂಕ್ ಉದ್ಯೋಗಿ ಪ್ರಶಾಂತ ಭಟ್ ತಿಳಿಸಿದರು.

ADVERTISEMENT

‘ಮೇಲ್ಸೇತುವೆ ಕಾಮಗಾರಿ ಶುರುವಾದ ದಿನದಿಂದ ಚನ್ನಮ್ಮ ವೃತ್ತದ ಸುತ್ತಮುತ್ತ ಅಲ್ಲದೇ ಹಳೆಯ ಬಸ್‌ ನಿಲ್ದಾಣದ ಸುತ್ತಮುತ್ತಲ ಅಂಗಡಿ ಮುಂಗಟ್ಟುಗಳಲ್ಲಿ ವಹಿವಾಟು ಸಂಪೂರ್ಣ ಹಿನ್ನಡೆಯಾಗಿದೆ. ಹೋಟೆಲ್‌, ಬೇಕರಿಗಳಿಗೆ ಯಾರೂ ಬರುತ್ತಿಲ್ಲ. ಸಣ್ಣಪುಟ್ಟ ಅಂಗಡಿಗಳಲ್ಲೂ ವ್ಯಾಪಾರ ನಡೆಯುತ್ತಿಲ್ಲ’ ಎಂದು ಅಂಗಡಿಯೊಂದರ ಮಾಲೀಕ ಬಸಣ್ಣ ತಿಳಿಸಿದರು.

ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಚಿವರು, ಶಾಸಕರು ಅಲ್ಲದೇ ಪ್ರಮುಖರು ಸೂಚಿಸಿದ್ದಾರೆ. ಆದರೆ, ಯಾವುದೇ ರೀತಿಯಲ್ಲಿ ಪ್ರಯೋಜನವಾಗಿಲ್ಲ. ಒಂದಿಲ್ಲೊಂದು ಕಾರಣದಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಈ ಸಮಸ್ಯೆಯನ್ನು ಬೇಗನೇ ನಿವಾರಿಸಬೇಕು’ ಎಂದು ಅವರು ಹೇಳಿದರು.

ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಮಳೆಯಿಂದ ರಸ್ತೆ ಎಲ್ಲ ಕೆಸರುಮಯಗೊಂಡು ಸಂಚಾರಕ್ಕೆ ಪರದಾಡುವಂತೆ ಆಗಿದೆ ಚಿತ್ರ– ಗುರು ಹಬೀಬ್
ಚನ್ನಮ್ಮ ವೃತ್ತದ ಎಲ್ಲೆಂದರಲ್ಲಿ ಮೂತ್ರ ವಿರ್ಸಜನೆ ಅನಧಿಕೃತವಾಗಿ ವಾಹನ ಪಾರ್ಕಿಂಗ್‌ ಮಾಡುವುದು ಸೇರಿದಂತೆ ಇಡೀ ವ್ಯವಸ್ಥೆಯೇ ಹದಗೆಟ್ಟು ಹೋಗಿದೆ. ಸಂಬಂಧಿಸಿದವರು ಕ್ರಮ ಗೈಗೊಳ್ಳಬೇಕು
ಪ್ರಸಾದ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.