ADVERTISEMENT

ಧಾರವಾಡ ಜಿಲ್ಲೆಯಲ್ಲಿ ಚಿಕುನ್‌ಗುನ್ಯಾ ಹೆಚ್ಚಳ, ಆಸ್ಪತ್ರೆಗಳಿಗೆ ಅಲೆದಾಟ

ಹುಬ್ಬಳ್ಳಿಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ

ಬಸವರಾಜ ಹವಾಲ್ದಾರ
Published 9 ಅಕ್ಟೋಬರ್ 2018, 20:00 IST
Last Updated 9 ಅಕ್ಟೋಬರ್ 2018, 20:00 IST
   

ಹುಬ್ಬಳ್ಳಿ:ಧಾರವಾಡ ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ನಿಯಂತ್ರಣದಲ್ಲಿದ್ದ ಚಿಕುನ್‌ಗುನ್ಯಾ ಪೀಡಿತರ ಸಂಖ್ಯೆಯಲ್ಲಿ ಈ ವರ್ಷ ತೀವ್ರ ಹೆಚ್ಚಳವಾಗಿದೆ. ಪೀಡಿತರ ಸಂಖ್ಯೆ ಸೆಪ್ಟೆಂಬರ್‌ ಅಂತ್ಯಕ್ಕೆ ಹಿಂದಿಗಿಂತ ಐದು ಪಟ್ಟಿಗೂ ಹೆಚ್ಚು ಹೆಚ್ಚಾಗಿದೆ. ಈ ವರ್ಷದ ಇನ್ನೂ ಮೂರು ತಿಂಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ.

ಜಿಲ್ಲೆಯಲ್ಲಿ 2016ರಲ್ಲಿ ಆರು, 2017ರಲ್ಲಿ 11 ಇದ್ದ ಚಿಕುನ್‌ಗುನ್ಯಾ ಪೀಡಿತರ ಸಂಖ್ಯೆ ಈ ಬಾರಿ 62ಕ್ಕೆ ಹೆಚ್ಚಾಗಿದೆ. ಅದರಲ್ಲೂ ಅರ್ಧಕ್ಕಿಂತ ಹೆಚ್ಚು ಮಂದಿ ಹುಬ್ಬಳ್ಳಿ–ಧಾರವಾಡದವರೇ ಹೆಚ್ಚಾಗಿದ್ದಾರೆ ಎಂಬುದು ಗಮನಾರ್ಹ ಸಂಗತಿ.

ಜಿಲ್ಲೆಯಲ್ಲಿ ಡೆಂಗಿ ಜ್ವರದ ಹಾವಳಿಯೂ ಹೆಚ್ಚಿದೆ. ಸೆಪ್ಟೆಂಬರ್‌ ಅಂತ್ಯದವರೆಗೆ 83 ಮಂದಿ ಡೆಂಗಿ ಪೀಡಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಂಕಿ–ಅಂಶಗಳು ಹೇಳುತ್ತವೆ.

ADVERTISEMENT

ಹುಬ್ಬಳ್ಳಿ–ಧಾರವಾಡದಲ್ಲಿಯೇ ಹೆಚ್ಚು

ಜಿಲ್ಲೆಯಲ್ಲಿ 2017ರಲ್ಲಿ 172 ಮಂದಿ ಡೆಂಗಿ ಪೀಡಿತರಾಗಿದ್ದರೆ, ಹುಬ್ಬಳ್ಳಿ–ಧಾರವಾಡದಲ್ಲಿ 128 ಮಂದಿ ಪೀಡಿತರಿದ್ದರು. ಜಿಲ್ಲೆಯಲ್ಲಿ 11 ಮಂದಿ ಡೆಂಗಿ ಪೀಡಿತರಾಗಿದ್ದರೆ, ಅದರಲ್ಲಿ ಅವಳಿ ನಗರದವರು ಏಳು ಮಂದಿ ಇದ್ದರು.

2018ರ ಸೆಪ್ಟೆಂಬರ್‌ ಅಂತ್ಯದವರೆಗೆ ಜಿಲ್ಲೆಯಲ್ಲಿ ಚಿಕುನ್‌ಗುನ್ಯಾ ಪೀಡಿತರ ಸಂಖ್ಯೆ 62 ಮಂದಿ ಇದ್ದರೆ, ಅದರಲ್ಲಿ 32 ಮಂದಿ ಅವಳಿ ನಗರದವರಾಗಿದ್ದಾರೆ. 83 ಮಂದಿ ಡೆಂಗಿ ಪೀಡಿತರಾಗಿದ್ದರೆ, ಅದರಲ್ಲಿ 54 ಮಂದಿ ಹುಬ್ಬಳ್ಳಿ–ಧಾರವಾಡದವರಿದ್ದಾರೆ.

ಅವಳಿ ನಗರದಲ್ಲಿ ಎಂಟರಿಂತ ಹತ್ತು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತದೆ. ಹೀಗಾಗಿ, ಜನರು ಅನಿವಾರ್ಯವಾಗಿ ನಿರು ಸಂಗ್ರಹಿಸಿಡುತ್ತಾರೆ. ಕೆಲವೊಮ್ಮೆ ನೀರು ಸಂಗ್ರಹಿಸಿದ ಟ್ಯಾಂಕ್‌ಗಳ ಮೇಲೆ ಮುಚ್ಚುವುದಿಲ್ಲ. ಜತೆಗೆ ರಾಜನಾಲಾದಲ್ಲಿ ನೀರು ಸರಾಗವಾಗಿ ಹರಿದುಹೋಗುವುದಿಲ್ಲ. ಗಟಾರುಗಳ ಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲ. ಅದರಿಂದ ಎರಡೂ ಜ್ವರ ಪೀಡಿತರ ಸಂಖ್ಯೆ ಹೆಚ್ಚಿದೆ ಎಂದು ಶಂಕಿಸಲಾಗಿದೆ.

ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ

‘ಡೆಂಗಿ ಹಾಗೂ ಚಿಕುನ್‌ಗುನ್ಯಾ ಸೊಳ್ಳೆಗಳಿಂದಲೇ ಬರುವುದರಿಂದ ಅವುಗಳ ನಿಯಂತ್ರಣಕ್ಕೆ ವ್ಯಾಪಕ ಕ್ರಮಕೈಗೊಳ್ಳಲಾಗಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ಎಂ. ದೊಡ್ಡಮನಿ.

‘ಡೆಂಗಿ ಅಥವಾ ಚಿಕುನ್‌ಗುನ್ಯಾ ಪೀಡಿತರು ಕಂಡು ಬಂದರೆ, ಅವರ ಮನೆ ಸುತ್ತಲಿನ ನೂರು ಮನೆಗಳಲ್ಲಿ ನೀರು ಬಳಕೆ, ಸ್ವಚ್ಛತೆ, ಸೊಳ್ಳೆಗಳ ಹಾವಳಿ ಮುಂತಾದವುಗಳ ಬಗ್ಗೆ ಸಮೀಕ್ಷೆ ಮಾಡಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರಿಗೂ ನಿತ್ಯ 25 ಮನೆಗಳ ಸರ್ವೆ ಮಾಡುವಂತೆ ಸೂಚಿಸಲಾಗಿದೆ’ ಎಂದರು.

‘ಪ್ರತಿ ತಿಂಗಳು ಮೂರನೇ ಶುಕ್ರವಾರ ಲಾರ್ವಾ ಸಮೀಕ್ಷೆ ಮಾಡಲಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆದಿದೆ’ ಎಂದು ಹೇಳಿದರು.

ಮುಂಜಾಗ್ರತೆಯೊಂದೇ ಮದ್ದು

ಡೆಂಗಿ ಹಾಗೂ ಚಿಕುನ್‌ಗುನ್ಯಾಕ್ಕೆ ನಿಗದಿತ ಚಿಕಿತ್ಸೆ ಇಲ್ಲ. ಹಾಗಾಗಿ, ಜ್ವರ ಬರದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವುದೇ ಉತ್ತಮ ಎನ್ನುತ್ತಾರೆ ದೊಡ್ಡಮನಿ ಅವರು.

‘ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕು. ರಾತ್ರಿ ವೇಳೆ ಮಚ್ಚರದಾನಿ ಬಳಸಬೇಕು. ಜ್ವರ ಬಂದರೆ ಕೂಡಲೇ ವೈದ್ಯರ ಬಳಿ ತೋರಿಸಬೇಕು. ಅವಶ್ಯವಿದ್ದರೆ ರಕ್ತ ತಪಾಸಣೆ ಮಾಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.