ADVERTISEMENT

ಜಿಲ್ಲೆಯಲ್ಲಿ ತಗ್ಗಿದ ಬಾಲ್ಯವಿವಾಹ ಪ್ರಮಾಣ

ಶಾಲಾ–ಕಾಲೇಜುಗಳಲ್ಲಿ ಜಾಗೃತಿ; ಆರೋಗ್ಯ ಇಲಾಖೆಯಿಂದಲೂ ಸಹಕಾರ

ಗೌರಮ್ಮ ಕಟ್ಟಿಮನಿ
Published 25 ಜೂನ್ 2025, 5:50 IST
Last Updated 25 ಜೂನ್ 2025, 5:50 IST

ಹುಬ್ಬಳ್ಳಿ: ನಿರಂತರ ಜಾಗೃತಿಯಿಂದಾಗಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬಾಲ್ಯವಿವಾಹಗಳ ಸಂಖ್ಯೆ ಇಳಿಮುಖವಾಗಿದೆ. ಗ್ರಾಮೀಣ ಭಾಗದಲ್ಲಿ ಮಕ್ಕಳು, ಪಾಲಕರಲ್ಲೂ ಜಾಗೃತಿ ಮೂಡಿಸಿದ ಪರಿಣಾಮ ಬಾಲಕಿಯರು ಧೈರ್ಯ ತೋರಿ, ಬಾಲ್ಯವಿವಾಹ ತಡೆಯಲು ಮುಂದಾಗುತ್ತಿದ್ದಾರೆ. 

2022ರ ಮೇ ತಿಂಗಳಿನಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 14 ಬಾಲ್ಯವಿವಾಹಗಳಾಗಿದ್ದು, 82 ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಮತ್ತು 56 ಪ್ರಕರಣಗಳು ದಾಖಲಾಗಿವೆ.

‘ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮದ ಜಾಗೃತಿ ಮೂಡಿಸುತ್ತಿರುವುದರಿಂದ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆಯಾಗಿವೆ. 18 ವರ್ಷದೊಳಗಿನ ಹೆಣ್ಣುಮಕ್ಕಳು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರೆ ಕೂಡಲೇ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆಯವರಿಗೂ ತಿಳಿಸಲಾಗಿದೆ. ಬಾಲಕಿಯನ್ನು ಕಿಮ್ಸ್‌ನಲ್ಲಿರುವ ಸಖಿ ಒನ್‌ ಕೇಂದ್ರದಲ್ಲಿ ಇರಿಸಿ, ಆಪ್ತಸಮಾಲೋಚನೆ ನಡೆಸಲಾಗುತ್ತದೆ. ನಂತರ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾಧಿಕಾರಿ ನೀತಾ ವಡ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬಾಲ್ಯವಿವಾಹ ನಡೆಯುತ್ತಿರುವ ಕುರಿತು ಮಾಹಿತಿ ಸಿಕ್ಕ ತಕ್ಷಣ ಕಾರ್ಯಪ್ರವೃತ್ತರಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಪೊಲೀಸರು, ಪಿಡಿಒ, ಸಿಡಿಪಿಒ ಸಿಬ್ಬಂದಿಯೊಂದಿಗೆ (ಅಂಗನವಾಡಿ ಮೇಲ್ವಿಚಾರಕಿ) ಸ್ಥಳಕ್ಕೆ ಧಾವಿಸುತ್ತೇವೆ. ಪಾಲಕರಿಗೆ ತಿಳಿ ಹೇಳಿ ಮದುವೆ ನಿಲ್ಲಿಸಿ ಅವರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಕರೆದುಕೊಂಡು ಬಂದು 18 ವರ್ಷ ತುಂಬುವವರೆಗೆ ಮದುವೆ ಮಾಡುವುದಿಲ್ಲ ಎಂದು ಅವರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳುತ್ತೇವೆ. ಒಂದು ವೇಳೆ ಮದುವೆಯಾಗಿದ್ದರೆ, ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸುತ್ತೇವೆ. ನ್ಯಾಯಾಲಯದ ತೀರ್ಪಿನಂತೆ ದಂಡ, ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮಕ್ಕಳು ಒಪ್ಪಿದ್ದಲ್ಲಿ ಮಾತ್ರ ಮನೆಗೆ ಕಳಿಸಿಕೊಡಲಾಗುತ್ತದೆ, ಇಲ್ಲದಿದ್ದಲ್ಲಿ ಮಕ್ಕಳ ಸಮಿತಿ ಕೇಂದ್ರದಲ್ಲೇ ಅವರಿಗೆ ಕೆಲದಿನ ವಸತಿ ಸೌಲಭ್ಯ ಒದಗಿಸಿ, ಆಪ್ತಸಮಾಲೋಚನೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

ಸಹಾಯವಾಣಿ ನೆರವು: 

2023ರ ಸೆಪ್ಟೆಂಬರ್‌ 1ರಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕವೇ ಸಹಾಯವಾಣಿ 1098 ನಿರ್ವಹಿಸುತ್ತಿದೆ. ರೈಲ್ವೆ ನಿಲ್ದಾಣ ಹಾಗೂ ಪ್ರಯಾಣದ ಸಂದರ್ಭದಲ್ಲಿ ರೈಲಿನಲ್ಲಿ ತೊಂದರೆಗೊಳಗಾದ ಮಕ್ಕಳ ನೆರವಿಗೆ ಧಾರವಾಡ ಹಾಗೂ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಸಹಾಯವಾಣಿ ಇದ್ದು, 24 ಗಂಟೆಯೂ ಸೇವೆ ನೀಡುತ್ತಿದೆ. ಅಗತ್ಯವಿದ್ದಲ್ಲಿ ಬಾಲಮಂದಿರಲ್ಲಿ ಅವರನ್ನು ಇರಿಸಿ ಶಿಕ್ಷಣ ನೀಡಲಾಗುತ್ತಿದೆ. ಮಕ್ಕಳು ಸಂಕಷ್ಟದಲ್ಲಿದ್ದರೆ ಈ ಸಂಖ್ಯೆಗೆ ಕರೆ ಮಾಡಬಹುದು.

‘2023ರಿಂದ ಇಲ್ಲಿಯವರೆಗೆ ಒಟ್ಟು 970 ಕರೆಗಳು ಮಕ್ಕಳ ಸಹಾಯವಾಣಿಗೆ ಬಂದಿವೆ. ಅದರಲ್ಲಿ ಬಾಲ್ಯವಿವಾಹ, ಅತ್ಯಾಚಾರ, ಬಾಲಕಾರ್ಮಿಕರು, ಪಾಲಕರು ಬಿಟ್ಟು ಹೋದ ಮಕ್ಕಳು, ಟಿಸಿ ಸಮಸ್ಯೆ, ದೈಹಿಕ ಹಿಂಸೆ, ಮಕ್ಕಳ ಮೇಲಿನ ದೌರ್ಜನ್ಯ, ವಸತಿ ಸೌಲಭ್ಯ, ಕೌಟುಂಬಿಕ ಸಮಸ್ಯೆ, ಏಕಪಾಲಕರು ಹಾಗೂ ಬೇರೆ ರಾಜ್ಯದಿಂದ ಬಂದ ಮಗು ತಪ್ಪಿಸಿಕೊಂಡಲ್ಲಿ, ಪಾಲಕರಿಂದ ನಿರ್ಲಕ್ಷ್ಯಕ್ಕೊಳಗಾದ ಮಕ್ಕಳು, ನಿಂದನೆಗೆ ಒಳಗಾದ ಮಕ್ಕಳು, ಭಿಕ್ಷಾಟನೆ ಸೇರಿದಂತೆ ವಿವಿಧ ಸಂಕಷ್ಟಕ್ಕೆ ಸಿಲುಕಿದ ಮಕ್ಕಳು ಕರೆ ಮಾಡಿದ್ದಾರೆ. ಈ ತರ ಸಂಸ್ಯೆಗೆ ಸಿಲುಕಿರುವ ಮಕ್ಕಳು ಕರೆ ಮಾಡಿದ್ದಲ್ಲಿ ಅವರಿಗೆ ಬಾಲಮಂದಿರದಲ್ಲಿ ರಕ್ಷಣೆ ನೀಡಲಾಗುವುದು. ಜೊತೆಗೆ ಶಿಕ್ಷಣ, ವಸತಿ ಸೌಲಭ್ಯವೂ ನೀಡಲಾಗುತ್ತದೆ‘ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾಧಿಕಾರಿ ನೀತಾ ವಡ್ಕರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.