
ಹುಬ್ಬಳ್ಳಿ: ನಗರದ ಚಿಟಗುಪ್ಪಿ ಆಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್)ಯ ಪ್ರಾದೇಶಿಕ ಸ್ವಾಸ್ಥ್ಯ ಕೇಂದ್ರ ಶನಿವಾರ ಉದ್ಘಾಟನೆಯಾಯಿತು.
ಘಟಕ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಈ ಭಾಗದಲ್ಲಿ ಸಿಜಿಎಚ್‌ಎಸ್ ಕೇಂದ್ರ ತೆರೆಯಬೇಕು ಎನ್ನುವುದು ಸಾಕಷ್ಟು ಮಂದಿಯ ಒತ್ತಾಯವಾಗಿತ್ತು. ಅವರ ಬೇಡಿಕೆಯಂತೆ ಕೇಂದ್ರ ಸರ್ಕಾರ ಪಾಲಿಕೆ ಸಹಯೋಗದಲ್ಲಿ ಘಟಕ ತೆರೆದಿದ್ದು, ಫಲಾನುಭವಿಗಳಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಗದಗ, ಹಾವೇರಿ, ಧಾರವಾಡ ಭಾಗದ ಕೇಂದ್ರ ಸರ್ಕಾರಿ ನೌಕರರು, ನಿವೃತ್ತರು ಹಾಗೂ ಅವರ ಅವಲಂಬಿತರ ಪ್ರಯೋಜನ ಪಡೆದುಕೊಳ್ಳಬಹುದು’ ಎಂದರು.
‘ದೇಶದಲ್ಲಿ ಅಂದಾಜು 50 ಲಕ್ಷ ಮಂದಿ ಈ ಯೋಜನೆ ಅಡಿಯಲ್ಲಿ ಬರುತ್ತಾರೆ. ರಾಜ್ಯದಲ್ಲಿ ಸುಮಾರು 1.75 ಲಕ್ಷ ಮಂದಿಯಿದ್ದು, ಹುಬ್ಬಳ್ಳಿ ಕೇಂದ್ರದ ವ್ಯಾಪ್ತಿಯಲ್ಲಿ 50 ಸಾವಿರ ಮಂದಿಯಿದ್ದಾರೆ. ಯಾವುದಾದರೂ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲದಿದ್ದಾಗ, ಖಾಸಗಿ ಆಸ್ಪತ್ರೆಗೆ ತೋರಿಸಬೇಕೆಂದರೆ ಈ ಕೇಂದ್ರದ ಸಿಫಾರಸ್ಸು ಬೇಕಾಗುತ್ತದೆ. ಫಲಾನುಭವಿಗಳಿಗೆ ಕೇಂದ್ರದಿಂದ ಶೀಘ್ರ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು’ ಎಂದು ಹೇಳಿದರು.
‘ದೀರ್ಘಕಾಲಿನ ಪರಿಣಾಮ ಬೀರುವ ಕಾಯಿಲೆಗಳನ್ನು ಮುಂಜಾಗ್ರತಾ ಚಿಕಿತ್ಸೆ ಮೂಲಕ ತಡೆಗಟ್ಟಬಹುದು. ಇತ್ತೀಚಿಗೆ ವಿಜ್ಞಾನ ಸಂಶೋಧನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಕ್ಯಾನ್ಸರ್ ರೋಗವನ್ನು ಸಹ ಶೇ 70ರಷ್ಟು ಗುಣಪಡಿಸಬಹುದಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ, ಔಷಧೋಪಚಾರ ಪಡೆಯಬೇಕು. ಕೆಲವು ರೋಗಕ್ಕೆ ಚಿಕಿತ್ಸೆ ವೆಚ್ಚ ದುಬಾರಿಯಾದರೂ, ಸರ್ಕಾರದ ಯೋಜನೆಯಲ್ಲಿ ಅದರ ಪ್ರಯೋಜನ ಪಡೆಯಬಹುದು’ ಎಂದು ಹೇಳಿದರು.
ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ‘ಕೇಂದ್ರ ಸರ್ಕಾರದ ಅಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದವರಿಗೆ ಈ ಕೇಂದ್ರ ಪ್ರಯೋಜನಕಾರಿಯಾಗಿದೆ’ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡಿದರು. ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಡಾ.ಶ್ರೀಧರ ದಂಡಪ್ಪನವರ, ಬೆಂಗಳೂರಿನ ಸಿಜಿಎಚ್‌ಎಸ್ ಮುಖ್ಯಸ್ಥೆ ಡಾ.ಗಂಗಮ್ಮ, ನಿರ್ದೇಶಕ ಎಚ್.ಎಸ್.ಪ್ರಸನ್ನ ಇದ್ದರು.