ADVERTISEMENT

ನೈರುತ್ಯ ರೈಲ್ವೆಯಿಂದ ಸ್ವಚ್ಛತಾ ಅಭಿಯಾನ

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 14:57 IST
Last Updated 17 ಸೆಪ್ಟೆಂಬರ್ 2019, 14:57 IST
ಹುಬ್ಬಳ್ಳಿಯಲ್ಲಿ ಸೋಮವಾರ ನೈರುತ್ಯ ರೈಲ್ವೆಯು ಸ್ವಚ್ಛತಾ ಅಭಿಯಾನದ ಅಂಗವಾಗಿ ವಾಕಾಥಾನ್ ಹಮ್ಮಿಕೊಂಡಿತ್ತು
ಹುಬ್ಬಳ್ಳಿಯಲ್ಲಿ ಸೋಮವಾರ ನೈರುತ್ಯ ರೈಲ್ವೆಯು ಸ್ವಚ್ಛತಾ ಅಭಿಯಾನದ ಅಂಗವಾಗಿ ವಾಕಾಥಾನ್ ಹಮ್ಮಿಕೊಂಡಿತ್ತು   

ಹುಬ್ಬಳ್ಳಿ: ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನದ ಅಂಗವಾಗಿ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ನೈರುತ್ಯ ರೈಲ್ವೆಯು ಮಂಗಳವಾರ ನಗರದ ವಿಭಾಗೀಯ ಕಚೇರಿಯಿಂದ ರೈಲ್ವೆ ನಿಲ್ದಾಣದ ತನಕ ಸ್ವಚ್ಛತಾ ವಾಕಾಥಾನ್‌ ಹಮ್ಮಿಕೊಂಡಿತ್ತು.

ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್ ಮುಂದಾಳತ್ವದಲ್ಲಿ ನಡೆದ ವಾಕಾಥಾನ್‌ನಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಸ್ವಚ್ಛತೆಯ ಸಂದೇಶ ಸಾರುವ ಫಲಕಗಳನ್ನು ಪ್ರದರ್ಶಿಸಿದರು. ರೈಲ್ವೆ ನಿಲ್ದಾಣ, ಅಧಿಕಾರಿಗಳ ಕಾಲೊನಿ, ಎಂಟಿಎಸ್‌ ಕಾಲೊನಿ, ರೈಲ್ವೆ ಆಸ್ಪತ್ರೆ, ರೈಲ್‌ ನಗರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಸ್ನೇಹಿ ವಿಧಾನದಲ್ಲಿ ವಿಲೇವಾರಿ ಮಾಡಲು ನೈರುತ್ಯ ರೈಲ್ವೆ ಅ. 2ರಿಂದ ಒಂದು ಬಾರಿ ಬಳಸಬಹುದಾದ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರುತ್ತಿದೆ. ಇದರ ಬದಲು ಬಟ್ಟೆಯ ಬ್ಯಾಗ್‌ಗಳನ್ನು ನೀಡಲಾಗುತ್ತದೆ. ಆದ್ದರಿಂದ ಸಿಂಗ್ ಅವರು ಬಟ್ಟೆಗಳ ಬ್ಯಾಗ್‌ ಅಂಗಡಿ ಉದ್ಘಾಟಿಸಿ ಪ್ರಯಾಣಿಕರಿಗೆ ಬ್ಯಾಗ್‌ಗಳನ್ನು ವಿತರಿಸಿದರು.

ADVERTISEMENT

ಎವೊಲ್ವೆ ಲೀವ್ಸ್‌ ಫೌಂಡೇಷನ್‌ ಸಂಸ್ಥಾಪಕಿ ಒಟ್ಟಿಯಿಲಿ ಕಮಲ್‌ ಮಾತನಾಡಿ ‘ನಿತ್ಯ ಪ್ಲಾಸ್ಟಿಕ್‌ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಸುಸ್ಥಿರ ಆರೋಗ್ಯ ಕಾಪಾಡಿಕೊಳ್ಳಲು ಪ್ಲಾಸ್ಟಿಕ್‌ ತ್ಯಜಿಸಬೇಕು’ ಎಂದರು.

ಅಜಯ ಕುಮಾರ್‌ ಸಿಂಗ್‌ ‘ಅ. 2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸ್ವಚ್ಧತೆ ಎಂಬುದು ಒಂದು ದಿನದ ಕೆಲಸವಷ್ಟೇ ಆಗದೇ, ಬದುಕಿನ ಭಾಗವಾಗಬೇಕು’ ಎಂದರು.

ಅಭಿಯಾನ:

ಸೋಮವಾರ ಹುಬ್ಬಳ್ಳಿ ವಿಭಾಗೀಯ ಕಚೇರಿಯಿಂದಲೂ ರೈಲು ನಿಲ್ದಾಣದ ತನಕ ಸ್ವಚ್ಛತಾ ಜಾಗೃತಿ ನಡಿಗೆ ಜರುಗಿತು.

ವಿಭಾಗೀಯ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕ ಮುರಳಿಕೃಷ್ಣ ಮಾತನಾಡಿ ‘ನಿಲ್ದಾಣಗಳು, ರೈಲುಗಾಡಿಗಳು, ಕಚೇರಿ, ಕಾಲೊನಿ, ಆಸ್ಪತ್ರೆ ಮತ್ತು ರೈಲ್ವೆ ಘಟಕಗಳಲ್ಲಿ ಸ್ವಚ್ಛತೆಯಲ್ಲಿ ಸುಧಾರಣೆ ತರಲು ಸೆ. 30ರ ತನಕ ಸ್ವಚ್ಛತೆಯೇ ಸೇವೆ ಅಭಿಯಾನ ಹಮ್ಮಿಕೊಂಡಿದ್ದೇವೆ’ ಎಂದರು.

ಇದೇ ವೇಳೆ ಸಸಿಗಳನ್ನು ನೆಡಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್‌ ಸ್ವಚ್ಛತೆಗೆ ಸಂಬಂಧಿಸಿ ಬೀದಿನಾಟಕ ಪ್ರದರ್ಶಿಸಿದರು.

ಮುಖ್ಯರೋಲಿಂಗ್‌ ಸ್ಟಾಕ್‌ ಎಂಜಿನಿಯರ್‌ ಟಿ.ವಿ. ಸುಬ್ಬಾರಾವ್, ವಿಭಾಗೀಯ ಯಾಂತ್ರಿಕ ಎಂಜಿನಿಯರ್‌ ಎಸ್.ಕೆ. ಭಟ್ಟಾಚಾರ್‍, ಕಾರ್ಮಿಕ ಅಧಿಕಾರಿ ಪ್ರಶಾಂತ ಮಾಸ್ತಿಹೊಳಿ ಇದ್ದರು. ಸೋಮವಾರ ವಿಭಾಗೀಯ ಕಚೇರಿ ವತಿಯಿಂದ ಪ್ಲಾಸ್ಟಿಕ್‌ ತ್ಯಾಜ್ಯ ಮುಕ್ತ ಅಭಿಯಾನ ಜರುಗಿತು.

ನೈರುತ್ಯ ರೈಲ್ವೆಯ ಮಜ್ದೂರ್‌ ಯೂನಿಯನ್‌ ಕೂಡ ಅಭಿಯಾನ ಹಮ್ಮಿಕೊಂಡಿತ್ತು. ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಡಾ. ಎ.ಎಂ.ಡಿ. ಕ್ರಜ್‌, ವಲಯದ ಅಧ್ಯಕ್ಷ ವಿ.ಇ. ಚಾರ್ಖಣಿ, ಪ್ರಮುಖರಾದ ಆರ್‌.ಆರ್‌. ನಾಯ್ಕ, ಕೆ. ವೆಂಕಟೇಶ, ಜಯಲಕ್ಷ್ಮಿ, ಎಸ್‌.ಎಫ್‌. ಮಲ್ಲಾಡ್‌, ಎಸ್‌.ಎ. ಅಲ್ಬರ್ಟ್‌ ಡಿ. ಕ್ರಜ್‌, ಪಿ.ಇ. ಪಾಟೀಲ, ವೈ. ಜಾಕೊಬ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.