ADVERTISEMENT

ಕ್ಲಿಕ್‌. ಕ್ಲಿಕ್‌.. ಕ್ಲಿಕ್‌... ಅಮೂಲ್ಯ ಚೌಕಟ್ಟು

ಛಾಯಾಗ್ರಹಣದ ಸ್ಮರಣೆಯ ದಿನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 14:24 IST
Last Updated 19 ಆಗಸ್ಟ್ 2019, 14:24 IST
   

ಫೋಟೊ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ..? ಫೋಟೊ ಅಂದರೆ ಚಿಕ್ಕಪುಟ್ಟ ಮಕ್ಕಳೂ ಕೂಡ ಸ್ಟೈಲ್‌ ಕೊಡುತ್ತವೆ‌. ಚಿಕ್ಕವನಿದ್ದಾಗ ಹೀಗೆ ಇದ್ದೆ, ಅಜ್ಜನ ಅಜ್ಜ ಹೀಗೆ ಇದ್ದ ಎಂಬುದು ತಿಳಿಯುವುದು ಫೋಟೊಗಳಿಂದಲೇ. ಒಂದು ಚಿತ್ರದಲ್ಲಿ ಹಲವಾರು ವರ್ಷಗಳ ಇತಿಹಾಸವೇ ಅಡಗಿರುತ್ತದೆ.

ಮದುವೆ, ನಾಮಕರಣ, ಗೃಹ ಪ್ರವೇಶದ ಸಂತೋಷದ ಕ್ಷಣಗಳು ಒಂದು ಫೋಟೊದಲ್ಲಿ ಸೆರೆಯಾಗುತ್ತವೆ. ಇದರ ಪ್ರಶಂಸೆ ಅದನ್ನು ಸೆರೆ ಹಿಡಿದ ಛಾಯಾಗ್ರಾಹಕಗೆ ಸಲ್ಲಬೇಕು. ಅಂತಹ ಛಾಯಾಗ್ರಾಹಕನ ಚಾಕಚಕ್ಯತೆಯನ್ನು ಸ್ಮರಿಸಲು ಆಗಸ್ಟ್‌ 19ರಂದು ಅಂತರ ರಾಷ್ಟ್ರೀಯ ಛಾಯಾಗ್ರಾಹಣ ದಿನ ಆಚರಿಸಲಾಗುತ್ತದೆ. ಒಬ್ಬ ಛಾಯಾಗ್ರಾಹಕ ತನ್ನ ವೈಯಕ್ತಿಕ ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ, ಸಂತಸದ ಕ್ಷಣವನ್ನು ಸೆರೆಹಿಡಿಯುವಾಗ ‘ಸ್ಮೈಲ್ ಪ್ಲೀಸ್‌’ ಎಂದೇ ಹೇಳುತ್ತಾನೆ. ಸಂಭ್ರಮ, ಆಚರಣೆ, ಶೋಕ, ಮಳೆ, ಬರ, ಪ್ರವಾಹದಿಂದ ಹಿಡಿದು ಮಾನವ–ಪ್ರಾಣಿ ಬದುಕಿನ ಹಲವಾರು ಮಗ್ಗುಲುಗಳನ್ನು ಒಂದು ಚೌಕಟ್ಟಿನಲ್ಲಿ ಸೆರೆಹಿಡಿಯುವ ಛಾಯಾಗ್ರಹಣ ಎಲ್ಲರ ಜೀವನಘಟ್ಟದ ಮೈಲುಗಲ್ಲು. ನೂರು ಪದಗಳು ಹೇಳುವುದನ್ನು ಒಂದು ಚಿತ್ರ ಸಮಗ್ರ ಮಾಹಿತಿ ನೀಡುತ್ತದೆ ಎಂಬ ಮಾತು ಅಕ್ಷರಶಃ ಸತ್ಯ. ಅಂತಹ ಒಂದು ಕ್ಲಿಕ್‌ ಜೀವನದ ಹಲವು ಘಟ್ಟದ ಮಜಲುಗಳನ್ನು ಸೆರೆಹಿಡಿದಿರುತ್ತದೆ. ಕಾಲಚಕ್ರದ ಚಲನೆಯಲ್ಲಿ ಹಲವು ತಲೆಮಾರುಗಳು ಆ ಸಂದರ್ಭಗಳನ್ನು ನೋಡಿ ಅರ್ಥೈಸುವ ಅವಕಾಶವನ್ನು ಮಾಡಿಕೊಡುವುದೇ ಈ ಒಂದು ಕ್ಲಿಕ್‌.

ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಛಾಯಾಗ್ರಾಹಕರೇ ಆಗಿದ್ದಾರೆ. ಅದಕ್ಕೆ ಕಾರಣ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ಗಳು. ಯಾವ ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಸನ್ನಿವೇಶವೊಂದನ್ನು ಸೆರೆಹಿಡಿಯುವ ಕಲೆ ಗೊತ್ತಿದ್ದರೆ ಮಾತ್ರ ಛಾಯಾಗ್ರಹಣಕ್ಕೊಂದು ಅರ್ಥ. ಹಲವು ಸಂದರ್ಭಗಳಲ್ಲಿ ಮೊಬೈಲ್‌ಗಳೇ ಕ್ಯಾಮೆರಾಗಳಾಗಿವೆ. ಅದರಲ್ಲೂ ಉತ್ತಮ ಚಿತ್ರಗಳು ಬರುತ್ತವೆ. ಆದರೆ, ಛಾಯಾಗ್ರಾಹಕನ ಕೈಚಳಕದಲ್ಲಿ ಕ್ಯಾಮೆರಾದಲ್ಲಿ ಮೂಡಿಬರುವ ಛಾಯಾಗ್ರಹಣದ ಶಕ್ತಿಯೇ ಬೇರೆ. ಅದರಲ್ಲಿ ಸೆರೆಯಾಗುವ ಚಿತ್ರಗಳ ವೈಶಿಷ್ಟ್ಯ, ಆ್ಯಂಗಲ್‌, ಶಾರ್ಪ್‌ನೆಸ್‌ಗೆ ಸಾಟಿ ಇಲ್ಲ.

ADVERTISEMENT

ಒಂದು ಚಿತ್ರ ನೋಡಿದರೆ ಸಂಪೂರ್ಣ ಅರ್ಥವಾಗಿಬಿಡುತ್ತದೆ. ಅದಕ್ಕೊಂದು ಶೀರ್ಷಿಕೆಯ ಅಗತ್ಯವೂ ಇರುವುದಿಲ್ಲ. ಚಿತ್ರದಲ್ಲಿನ ಸಮಗ್ರ ನೋಟ ಸಾಕಷ್ಟು ಕಥೆಗಳನ್ನೂ ಹೇಳುತ್ತದೆ. ಅಷ್ಟೇಅಲ್ಲ, ಆ ಚಿತ್ರ ಪರಿಸ್ಥಿತಿಗೆ ಹಿಡಿದ ಕನ್ನಡಿಯೂ ಆಗಿರುತ್ತದೆ. ಇಂತಹ ಸನ್ನಿವೇಶವನ್ನು ಚೌಕಟ್ಟಿನೊಳಗೆ ಕಟ್ಟಿಕೊಡುವ ಛಾಯಾಗ್ರಾಹಕನ ಕೌಶಲಕ್ಕೆ ಹ್ಯಾಟ್ಸ್‌ ಆಫ್‌ ಹೇಳಲೇಬೇಕು.

ಮುತ್ತಪ್ಪ ಎಸ್. ಕ್ಯಾಲಕೊಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.