ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ತಾಪಮಾನ ಕುಸಿದಿದ್ದು, ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲೂ ಅದು ಪರಿಣಾಮ ಬೀರಿದೆ. ದಿನದಿಂದ ದಿನಕ್ಕೆ ಮಾಗಿ ಚಳಿ ಹೆಚ್ಚಾಗುತ್ತಿದ್ದು, ರಾತ್ರಿ ಹಾಗೂ ಬೆಳಿಗ್ಗೆ ಜನರು ಗಡಗಡ ನಡುಗುವಂತಾಗಿದೆ.
ಈ ವಾರ ರಾಜ್ಯದ ಉತ್ತರ ಒಳನಾಡಿನ ಉತ್ತರ ಭಾಗದಲ್ಲಿ ಶೀತಗಾಳಿ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳುತ್ತದೆ. ಅದರಂತೆ ಅವಳಿನಗರದಲ್ಲೂ ಶೀತಗಾಳಿ ಹೆಚ್ಚಾಗಿದ್ದು, ತಾಪಮಾನ ಪ್ರಮಾಣ ಕನಿಷ್ಠ ಮಟ್ಟಕ್ಕೆ ದಾಖಲಾಗುತ್ತಿದೆ.
ಕಳೆದ ನವೆಂಬರ್ ತಿಂಗಳಿನ ಈ ಅವಧಿಯಲ್ಲಿ ನಗರದಲ್ಲಿ ಗರಿಷ್ಠ ತಾಪಮಾನ ಸರಾಸರಿ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಪ್ರಸ್ತುತ ಅದು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಡಿಸೆಂಬರ್ 16ರಂದು ಅತಿ ಕನಿಷ್ಠ 12ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಿತ್ತು. ಡಿಸೆಂಬರ್ 18ರಂದು ಸಹ ಅಷ್ಟೇ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ಮೂರು ದಿನಗಳಲ್ಲಿ ವಾತಾವರಣದಲ್ಲಿನ ತಾಪಮಾನ ಸರಾಸರಿ ಕನಿಷ್ಠ 5ರಿಂದ 4 ಡಿಗ್ರಿ ಸೆಲ್ಸಿಯಸ್ ಇಳಿಕೆ ಆಗಬಹುದು. ಪ್ರತಿ ಗಂಟೆಗೆ ಶೀತಗಾಳಿ 18 ಕಿ.ಮೀ. ನಿಂದ 27 ಕಿ.ಮೀ. ವೇಗದಲ್ಲಿ ಬೀಸಬಹುದು.
‘ಕಳೆದ ವರ್ಷ ಮಳೆಯಿಲ್ಲದ ಕಾರಣ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿತ್ತು. ವಾತಾವರಣದಲ್ಲಿ ನೀರಿನ ಅಂಶ ಕಡಿಮೆ ಇದ್ದ ಕಾರಣ ಶೀತಗಾಳಿ ಬೀಸಿರಲಿಲ್ಲ. ಅದರಿಂದ ಕಳೆದ ಬಾರಿ ಚಳಿಯ ಅನುಭವ ಬಂದಿರಲಿಲ್ಲ. ಪ್ರಸ್ತುತ ವರ್ಷ ಸರಿಯಾದ ವೇಳೆ ಮಳೆಯಾಗಿದ್ದು, ಅದರ ಪ್ರಮಾಣ ಸಮರ್ಪಕವಾಗಿದೆ. ವಾತಾವರಣದಲ್ಲಿ ತೇವಾಂಶ ಇದ್ದರಿಂದ ಸಾಮಾನ್ಯ ಚಳಿ ಆಗುತ್ತಿದೆ’ ಎಂದು ಹವಾಮಾನ ತಜ್ಞರು ಅಭಿಪ್ರಾಯಪಡುತ್ತಾರೆ.
ಆಕಾಶ ಶುಭ್ರವಾಗಿದ್ದು, ಲವಲೇಶವೂ ಮೋಡವಿಲ್ಲ. ಮೋಡಗಳು ಇಲ್ಲದಿರುವುದರಿಂದ ಹಗಲಿನ ವೇಳೆಯ ಪ್ರಖರ ಬಿಸಿಲು ಜನರ ನೆತ್ತಿ ಸುಡುತ್ತಿದೆ. ಸಂಜೆಯಾಗುತ್ತಿದ್ದಂತೆ ಶೀತಗಾಳಿ ಬೀಸುವುದರಿಂದ, ವಿಪರೀತ ಚಳಿ ಆವರಿಸುತ್ತಿದೆ. ರಾತ್ರಿ 9ರ ನಂತರ ಇದ್ದಕ್ಕಿದ್ದಂತೆ ಚಳಿ ತೀವ್ರತೆ ಪಡೆದು ವಾತಾವರಣದಲ್ಲಿ ಬದಲಾವಣೆಯಾಗುತ್ತಿದೆ.
‘ಕೊರೆಯುವ ಚಳಿಯಲ್ಲೇ ಬೆಳ್ಳಂಬೆಳಿಗ್ಗೆ ಪೌರಕಾರ್ಮಿಕರು ನಗರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕೆಲವರು ಅರೆಬರೆಹರಿದು ಹೋದ ಸ್ವೆಟರ್ ಹಾಕಿ ಚಳಿಯಿಂದ ರಕ್ಷಿಸಿಕೊಂಡರೆ, ಇನ್ನು ಕೆಲವರು ಅದ್ಯಾವುದೂ ಇಲ್ಲದೆ ನಡುಗುತ್ತಲೇ ಕಸ ಸಂಗ್ರಹಿಸುತ್ತಾರೆ. 50 ವರ್ಷ ಆದವರೂ ಸಹ ಇಲ್ಲಿ ಕೆಲಸ ಮಾಡುತ್ತಿದ್ದು, ಪಾಲಿಕೆ ಮಾನವೀಯತೆ ದೃಷ್ಟಿಯಿಂದ ಹಕ್ಕುಬದ್ಧವಾದ ಸ್ವೆಟರ್ ನೀಡಲು ಸಹ ಮೀನಮೇಷ ಎಣೆಸುತ್ತಿದೆ’ ಎಂದು ಪೌರ ಕಾರ್ಮಿಕರು ಆರೋಪಿಸುತ್ತಾರೆ.
ದಿನಪತ್ರಿಕೆ ಹಾಕುವವರು, ಬೆಳಿಗ್ಗೆ ಹೊತ್ತು ಹೂ, ಸೊಪ್ಪು ಮಾರುವವರು ಚಳಿಯಿಂದ ನಲಗುತ್ತಾರೆ. ಉದ್ಯಾನ, ಪಾರ್ಕ್ ಹಾಗೂ ಮನೆ ಎದುರಿನ ರಸ್ತೆಯಲ್ಲಿ ವಾಯುವಿಹಾರ ಮಾಡುವವರು ನಡುಗುತ್ತಲೇ ನಡೆಯುತ್ತಾರೆ. ಮಕ್ಕಳು ಶಾಲೆಗೆ ಸಿದ್ಧರಾಗಲು ನಿಧಾನಿಸುತ್ತಾರೆ. ನಗರ ಅಲ್ಲದೇ ಗ್ರಾಮೀಣ ಪ್ರದೇಶದಲ್ಲೂ ಇಂಥದ್ದೇ ಪರಿಸ್ಥಿತಿ ಇದೆ.
ನಮ್ಮ ಭಾಗದಲ್ಲಿ ಶೀತಗಾಳಿ ಪ್ರಮಾಣ ಕಡಿಮೆಯಿದೆ. ಮೋಡದ ವಾತಾವರಣ ಇಲ್ಲದಿದ್ದರೆ ರಾತ್ರಿ–ಬೆಳಿಗ್ಗೆ ಇದೇ ರೀತಿ ಚಳಿ ಇರಲಿದೆ. ಇದು ಬೆಳೆಗಳಿಗೆ ಸೂಕ್ತ ವಾತಾವರಣ–ರವಿ ಪಾಟೀಲ ಮುಖ್ಯಸ್ಥ ಹವಾಮಾನ ಇಲಾಖೆ ಕೃಷಿ ವಿಶ್ವವಿದ್ಯಾಲಯ ಧಾರವಾಡ
ದಿನದಿಂದ ದಿನಕ್ಕೆ ಚಳಿ ಹೆಚ್ಚುತ್ತಿದ್ದರೂ ಮನೆಮನೆಗೆ ಪತ್ರಿಕೆ ಹಾಕುವ ಕಾರ್ಯ ನಿರಂತರವಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಚಳಿ ಜಾಸ್ತಿಯಾಗುವ ಸಾಧ್ಯತೆಯಿದೆ.ಮನೋಹರ ಪರ್ವತಿ ಅಧ್ಯಕ್ಷ ಪತ್ರಿಕಾ ವಿತರಕರ ಸಂಘ ಹುಬ್ಬಳ್ಳಿ
ಚಳಿಯನ್ನೂ ಲೆಕ್ಕಿಸದೆ ಪೌರ ಕಾರ್ಮಿಕರು ನಗರ ಸ್ವಚ್ಛತೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕಾನೂನು ಬದ್ಧವಾಗಿ ಅವರಿಗೆ ದೊರೆಯಬೇಕಾದ ಸ್ವೆಟರ್ ಹಾಗೂ ಇತರ ಸೌಲಭ್ಯ ಕಲ್ಪಿಸಿಕೊಡಲಾಗುವುದುಈಶ್ವರ ಉಳ್ಳಾಗಡ್ಡಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
ಸ್ವೆಟರ್ ಕೊಡಲು ಮೀನಮೇಷ: ಗುಂಟ್ರಾಳ ‘ಥರಗುಟ್ಟುವ ಚಳಿಯನ್ನೂ ಲೆಕ್ಕಿಸದೆ ನಗರದ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುತ್ತೇವೆ. ಅನೇಕರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಚಳಿಯಿಂದ ಮತ್ತಷ್ಟು ಸಮಸ್ಯೆಯಾಗಿದೆ. ರಕ್ತ ಸಂಚಾರದಲ್ಲಿ ಏರಿಳಿತ ಉಸಿರಾಟದಲ್ಲಿ ಸಮಸ್ಯೆ ಚರ್ಮ ಸುಕ್ಕುಗಟ್ಟುವುದು ಅಸ್ತಮಾ ಶೀತದಂಥ ತೊಂದರೆ ಕಾಣಿಸಿಕೊಳ್ಳುತ್ತಿದೆ. ಕಾರ್ಮಿಕ ಕಾಯ್ದೆ ಪ್ರಕಾರ ಚಳಿಯಿಂದ ರಕ್ಷಿಸಿಕೊಳ್ಳಲು ಪಾಲಿಕೆ ಸ್ವೆಟರ್ ನೀಡಬೇಕು ಎಂದು ನಿಯಮವಿದೆ. ಹತ್ತಾರು ವರ್ಷಗಳಿಂದ ಕೇಳುತ್ತ ಬಂದಿದ್ದೇವೆ. ಆದರೆ ಈವರೆಗೂ ನಮಗೆ ಆ ಸೌಲಭ್ಯ ಕಲ್ಪಿಸಿಲ್ಲ’ ಎಂದು ಪೌರ ಕಾರ್ಮಿಕ ಸಂಘಟನೆ ಅಧ್ಯಕ್ಷ ವಿಜಯ ಗುಂಟ್ರಾಳ ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ಇರಲಿ ಆರೋಗ್ಯ ಕಾಳಜಿ’
‘ಚಳಿ ಹೆಚ್ಚಿದಂತೆಲ್ಲ ಚಳಿಜ್ವರ ವಾಂತಿ–ಬೇಧಿ ನೆಗಡಿಯಂಥ ಸಾಂಕ್ರಾಮಿಕ ರೋಗ ಸಾಮಾನ್ಯವಾಗಿ ಬಾಧಿಸುತ್ತವೆ. ಬೆಳಿಗ್ಗೆಯೇ ವಾಕಿಂಗ್ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು. ಬಿಸಿಲು ಇದ್ದಾಗ ವಾಕಿಂಗ್ ಮಾಡುವುದು ಒಳ್ಳೆಯದು’ ಎಂದು ವೈದ್ಯ ವಿ.ಬಿ. ನಿಟಾಲಿ ಸಲಹೆ ನೀಡಿದರು. ‘ತಾಜಾ ಆಹಾರ ಶುದ್ಧೀಕರಿಸಿದ ನೀರು ಕುಡಿಯಬೇಕು. 50 ವರ್ಷ ಮೇಲ್ಪಟ್ಟ ವಯೋಮಾನದವರು ಮನೆಯಲ್ಲೇ ವ್ಯಾಯಾಮ ಮಾಡುವುದು ಸೂಕ್ತ. ರಕ್ತದೊತ್ತಡ ಮಧುಮೇಹ ಇದ್ದವರು ಯಾವುದೇ ಕಾರಣಕ್ಕೂ ಮಾತ್ರೆ ಬಿಡಬಾರದು. ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದರು. ‘ಪಾರ್ಶ್ವವಾಯು ಹೃದಯದ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಶಸ್ತ್ರಚಿಕಿತ್ಸೆಗೆ ಒಳಗಾದ ಹಿರಿಯರು ಲಸಿಕೆ ಪಡೆಯಬೇಕು. ಸದಾ ಸ್ವೆಟರ್ ಮಫ್ಲರ್ ಧರಿಸಬೇಕು. ವ್ರತದ ಹೆಸರಲ್ಲಿ ಉಪವಾಸ ತಣ್ಣೀರ ಸ್ನಾನ ಮಾಡುವುದು ಬೇಡ’ ಎಂದರು.
ಬೆಳೆಗಳಿಗಿಲ್ಲ ಸಮಸ್ಯೆ
ಚಳಿಯ ವಾತಾವರಣದಿಂದ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಸಮಸ್ಯೆ ಇಲ್ಲ. ಜಿಲ್ಲೆಯ ಪ್ರಮುಖ ಬೆಳೆ ಮೆಣಸಿನಕಾಯಿ ಈಗಾಗಲೇ ಕಟಾವು ಆಗುತ್ತಿದೆ ಹಾಗೂ ಮಾವು ಹೂಬಿಡುವ ಹಂತದಲ್ಲಿದೆ. ಅಕ್ಟೋಬರ್‌ನಲ್ಲಿ ಸುರಿದ ಮಳೆಯಿಂದ ಮಾವು ಹೂ ಬಿಡುವುದು ತಡವಾಗಿದೆ. ತಾಪಮಾನ ಏರಿಕೆಯಾದರೆ ಅಥವಾ ಮಂಜು ಹೆಚ್ಚಾದರೆ ಹಾನಿಯಾಗುವ ಸಾಧ್ಯತೆಯಿದೆ. – ಕಾಶೀನಾಥ ಭದ್ರಣ್ಣವರ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಹಿಂಗಾರು ಹಂಗಾಮಿನ ಬೆಳೆಗಳು ಚಳಿಯಲ್ಲೇ ಚೆನ್ನಾಗಿ ಮೂಡುತ್ತವೆ. ಈ ಭಾಗದ ಪ್ರಮುಖ ಕೃಷಿ ಬೆಳೆಗಳಾದ ಕಡಲೆ ಜೋಳ ಗೋಧಿಗೆ ಮಂಜು ಅವಶ್ಯ. ಚಳಿ ಹೆಚ್ಚಾದರೂ ಸಮಸ್ಯೆ ಇಲ್ಲ. ಅಧಿಕ ಪ್ರಮಾಣದಲ್ಲಿ ಅಕಾಲಿಕ ಮಳೆಯಾದರಷ್ಟೇ ಸಮಸ್ಯೆ. – ಮಂಜುನಾಥ ಅಂತವಳ್ಳಿ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಹೃದಯ, ಚರ್ಮ ಜೋಪಾನ
‘ಚಳಿಗಾಲದಲ್ಲಿ ಬಹುತೇಕರಲ್ಲಿ ರಕ್ತನಾಳದಲ್ಲಿ ಸಮಸ್ಯೆ ಉಂಟಾಗುತ್ತದೆ. ನೀರು ಕಡಿಮೆ ಕುಡಿಯುವುದರಿಂದ ರಕ್ತ ಹೆಪ್ಪುಗಟ್ಟುತ್ತದೆ. ಹಾಗಾಗಿ ಚಳಿಗಾಲದಲ್ಲಿ ಹೃದ್ರೋಗ ಪ್ರಕರಣಗಳು ಹೆಚ್ಚುತ್ತವೆ. ಬೆಚ್ಚಗಿನ ದಿರಿಸು ಧರಿಸುವುದು ಹೆಚ್ಚು ನೀರು ಕುಡಿಯುವುದು ಧೂಮಪಾನ ಸೇವನೆ ನಿಲ್ಲಿಸುವುದರಿಂದ ಈ ಸಮಯದಲ್ಲಿ ಹೃದಯ ಸಂಬಂಧಿ ರೋಗಗಳಿಂದ ದೂರ ಇರಬಹುದು’ ಎಂದು ಹುಬ್ಬಳ್ಳಿ ಸುಚಿರಾಯು ಆಸ್ಪತ್ರೆಯ ಹೃದ್ರೋಗ ತಜ್ಞ ಶರಣ ಹಳ್ಳದ ತಿಳಿಸಿದರು. ‘ಚಳಿ ಕಾರಣಕ್ಕೆ ನೀರು ಕುಡಿಯುವ ಪ್ರಮಾಣ ಕಡಿಮೆಯಾಗುವುದರಿಂದ ಚರ್ಮ ಶುಷ್ಕವಾಗುತ್ತದೆ. ತೇವಾಂಶ ಕಡಿಮೆಯಾಗಿ ಚರ್ಮ ಉರಿಯುತ್ತದೆ ಬಿರುಕು ಬಿಡುತ್ತದೆ ಹಾಗೂ ರಕ್ತಸೋರಿಕೆಯೂ ಉಂಟಾಗುತ್ತದೆ. ಚರ್ಮವನ್ನು ಮೃದುವಾಗಿಡುವ ಲೇಪನಗಳನ್ನು ಬಳಸುವುದರೊಂದಿಗೆ ಹೆಚ್ಚಿನ ಸಮಸ್ಯೆಯಾದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ’ ಎಂಬುದು ತಜ್ಞರ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.