ADVERTISEMENT

ಬಡಾವಣೆಗಳ ಅಭಿವೃದ್ಧಿಗೆ ಬದ್ಧ: ಶಾಸಕ ಮಹೇಶ ಟೆಂಗಿನಕಾಯಿ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 4:57 IST
Last Updated 6 ಜುಲೈ 2025, 4:57 IST
ಹುಬ್ಬಳ್ಳಿಯಲ್ಲಿ ಎಪಿಎಂಸಿ ಹಿಂಭಾಗದ ಬಡಾವಣೆಗಳ ನಿವಾಸಿಗಳ‌ ಸಂಘದ ಸದಸ್ಯರು ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು
ಹುಬ್ಬಳ್ಳಿಯಲ್ಲಿ ಎಪಿಎಂಸಿ ಹಿಂಭಾಗದ ಬಡಾವಣೆಗಳ ನಿವಾಸಿಗಳ‌ ಸಂಘದ ಸದಸ್ಯರು ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು   

ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 35ರ ಪಿಎಎಂಸಿ ಹಿಂಭಾಗದ ವಿವಿಧ ಬಡಾವಣೆಗಳ ಸಾರ್ವಜನಿಕರ ಅಹವಾಲುಗಳನ್ನು ಶಾಸಕ ಮಹೇಶ ಟೆಂಗಿನಕಾಯಿ ಶನಿವಾರ ಆಲಿಸಿದರು.

ನಂತರ ಮಾತನಾಡಿದ ಅವರು, ‘ರಾಜ್ಯ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಅನುದಾನ ನೀಡದ ಕಾರಣ ಅಭಿವೃದ್ಧಿ ಕುಂಠಿತವಾಗಿದೆ. ಆದರೂ ಅನುದಾನ ತರಲು ಪ್ರಯತ್ನಿಸಲಾಗುತ್ತಿದೆ. ಕ್ಷೇತ್ರದ ಎಲ್ಲ ಬಡಾವಣೆಗಳ ಅಭಿವೃದ್ಧಿಗೆ ಬದ್ಧ’ ಎಂದರು.

‘ಕ್ಷೇತ್ರದಲ್ಲಿ ಕಳೆದೆರಡು ವರ್ಷಗಳಲ್ಲಿ 60 ಕಿ.ಮೀಗೂ ಹೆಚ್ಚು ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ  ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ₹10 ಲಕ್ಷ ವೆಚ್ಚದಲ್ಲಿ ತೆರೆದ ಜಿಮ್ ನಿರ್ಮಿಸಲಾಗುತ್ತಿದ್ದು, ಎಪಿಎಂಸಿ ಹಿಂಭಾಗದ 11 ಬಡಾವಣೆಗಳ ಸಂಪೂರ್ಣ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಅವಳಿ ನಗರಕ್ಕೆ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆದರೆ, ರಾಜ್ಯ ಸರ್ಕಾರ ಅನುದಾನ ನೀಡಲು ವಿಳಂಬ ಮಾಡುತ್ತಿದೆ’ ಎಂದು ದೂರಿದರು.

ಎಪಿಎಂಸಿ ಹಿಂಭಾಗದ ಲೇಔಟ್‌ಗಳ ನಿವಾಸಿಗಳ‌ ಸಂಘದ ಪ್ರಮುಖರು ಹಲವು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.

ಮಹಾನಗರ ಪಾಲಿಕೆಯಿಂದ ಕಸ ಸಂಗ್ರಹಿಸುವ ನೂತನ ವಾಹನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ್ ಶಿವಪುರ, ಹೆಮನಗೌಡ ಬದ್ನೂರ್, ರಮೇಶ ಮಡಿವಾಳರ, ಅಮರ ಹಬೀಬ, ಸಿದ್ದಲಿಂಗ ಮಿರ್ಜಿ, ನಂದೀಶ ಗುಂಡೂರು, ರವಿಕುಮಾರ ಪಾಟೀಲ ಇದ್ದರು.

ವಾರ್ಡ್‌ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು
ಮಲ್ಲಿಕಾರ್ಜುನ ಗುಂಡೂರು ಮಹಾನಗರ ಪಾಲಿಕೆ ಸದಸ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.