ಧಾರವಾಡ: ‘ಶ್ರದ್ಧೆ, ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿ ಪರೀಕ್ಷೆ ಎದುರಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ’ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
ಹುಬ್ಬಳ್ಳಿ-ಧಾರವಾಡ ನಗರದ ಪೊಲೀಸ್ ಆಯುಕ್ತರ ಕಚೇರಿ ವತಿಯಿಂದ ನಗರದ ಮಗದುಮ್ಮ ಆನಂದ ಕಲ್ಯಾಣ ಮಂಟಪದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಭಾನುವಾರ ಆಯೋಜಿಸಿದ್ದ ವಿಶೇಷ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೃಢ ಮನಸ್ಸಿನಿಂದ ಸಾಧನೆ ಮಾಡುವವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಸಾಧಿಸುವ ಛಲವಿರಬೇಕಷ್ಟೆ. ಸೋತರೆ ಕುಗ್ಗದೆ ಮತ್ತೆ ಪ್ರಯತ್ನ ಮಾಡಿದರೆ ಸೋಲೂ ಗೆಲುವಾಗಿ ಪರಿವರ್ತನೆಗೊಳ್ಳುತ್ತದೆ’ ಎಂದರು.
‘ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಬೇಕೋ? ಅಥವಾ ಬೇಡವೋ? ಎಂಬುದು ಮುಖ್ಯ. ಏನು? ಓದಬೇಕು. ಎಷ್ಟು ಓದಬೇಕು. ಹೇಗೆ ಓದಬೇಕೆಂಬ ಅರಿವು ಇರಬೇಕು. ಪರೀಕ್ಷೆ ಎದುರಿಸಲು ಸಾಕಷ್ಟು ಪೂರ್ವ ತಯಾರಿ ನಡೆಸಬೇಕು’ ಎಂದು ಸಲಹೆ ನೀಡಿದರು.
‘ಮನೆಯಲ್ಲಿ ಕಷ್ಟ ಇದೆ, ಹಣಕಾಸಿನ ತೊಂದರೆ ಇದೆ, ಓದುವಾಗ ಏಕಾಗ್ರತೆ ಸಿಗುತ್ತಿಲ್ಲ. ಮುಂತಾದ ಕಾರಣಗಳನ್ನು ನೀಡಿ ಕಲಿಕೆಯಿಂದ ಹಲವರು ದೂರ ಹೋಗುತ್ತಾರೆ. ಸಮಸ್ಯೆಗಳನ್ನೆಲ್ಲಾ ಪಕ್ಕಕ್ಕಿಟ್ಟು ಕಷ್ಟ ಪಟ್ಟು ಓದಿ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕಬೇಕು’ ಎಂದರು.
‘ಸ್ಪರ್ಧಾರ್ಥಿಗಳು ಪರೀಕ್ಷೆಗೆ ಅಗತ್ಯವಿರುವ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ನಿಗದಿತ ಕಾಲಾವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲವನ್ನು ರೂಢಿಸಿಕೊಳ್ಳಿಬೇಕು. ಏಕಾಂಗಿ ಮತ್ತು ಗುಂಪು ಅಧ್ಯಯನ ಎರಡನ್ನೂ ಸಮತೋಲನದಲ್ಲಿ ಬಳಸಬೇಕು ಮತ್ತು ಓದುವ ಜೊತೆಗೆ ಮಾಹಿತಿಯನ್ನು ನೆನಪಿಟ್ಟುಕೊಳ್ಳುವ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.
ಪಿಎಎಸ್‍ಐ ಮಂಜುನಾಥ ಟಿ.ಎಂ.ಮಾತನಾಡಿ, ‘ಸ್ಪರ್ಧಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಸಮಯ ನಿರ್ವಹಣೆಯ ತಂತ್ರವನ್ನು ರೂಪಿಸಿಕೊಂಡರೆ ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ. ತಮ್ಮಲ್ಲಿರುವ ದೌರ್ಬಲ್ಯ ತೊಡೆದು ಹಾಕಿ, ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು’ ಎಂದರು.
ಪಿಎಸ್‍ಐ ಮಲ್ಲಿಕಾರ್ಜುನ ಹೊಸೂರು ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಫಲತೆ ಹೊಂದಿದರೆ, ಎದೆಗುಂದುವ ಅವಶ್ಯಕತೆಯಿಲ್ಲ. ಬೇರೆ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬಹುದು’ ಎಂದರು.
ಪಿಎಸ್‍ಐ ಅಕ್ಷತಾ ಗದಗ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಪ್ರತಿ ವ್ಯಕ್ತಿಯೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರಬೇಕು. ಉತ್ತಮ ಸ್ನೇಹಿತರ ಸಹವಾಸ ಮಾಡಬೇಕು. ಸಮಯ ಪರಿಪಾಲನೆಗೆ ಒತ್ತು ನೀಡಬೇಕು’ಎಂದು ತಿಳಿಸಿದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್ ರವೀಶ್, ಎಸಿಪಿ ಪ್ರಶಾಂತ ಸಿದ್ದನಗೌಡರ, ನಾಗರಾಜ ಕಟಕಬಾವಿ ಉಪಸ್ಥಿತರಿದ್ದರು.
ಉತ್ತಮ ಬದುಕಿಗೆ ಹಲವಾರು ದಾರಿ ಉತ್ತರ ಬರೆಯಲು ಕೌಶಲವಿರಲಿ ಮಾನಸಿಕ, ದೈಹಿಕ ಸದೃಢತೆ ಇರಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.