ADVERTISEMENT

ಹುಬ್ಬಳ್ಳಿ: ಎಎಸ್‌ಐ ಕೊರಳ ಪಟ್ಟಿ ಹಿಡಿದ ‘ಭಂಗಿ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 5:06 IST
Last Updated 19 ಅಕ್ಟೋಬರ್ 2021, 5:06 IST

ಹುಬ್ಬಳ್ಳಿ: ಕೌಟುಂಬಿಕ ಜಗಳದ ಕುರಿತ ವಿಚಾರಣೆಗೆಂದು ಠಾಣೆಗೆ ಬಂದ ವ್ಯಕ್ತಿಯೊಬ್ಬ, ಅಲ್ಲಿದ್ದ ಎಎಸ್‌ಐ ಕೊರಳು ಪಟ್ಟಿ ಹಿಡಿದು ಅವಾಚ್ಯವಾಗಿ ಬೈದ ಹಿನ್ನೆಲೆಯಲ್ಲಿ ಅತನ ವಿರುದ್ಧ ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವನಗರದ ನಿವಾಸಿ ಆನಂದ ಭಂಗಿ ವಿರುದ್ಧ ಎಎಸ್‌ಐ ರುದ್ರಗೌಡ ಸುಧಿ ದೂರು ನೀಡಿದ್ದಾರೆ. ಗಂಡ–ಹೆಂಡತಿ ಜಗಳದ ಕುರಿತು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆಂದು ಆನಂದನನ್ನು ಠಾಣೆಗೆ ಕರೆಸಲಾಗಿತ್ತು. ವಿಚಾರಣಾ ಹಂತದಲ್ಲಿ ಕೋಪಗೊಂಡ ಅವನು ರುದ್ರಗೌಡ ಅವರ ಕೊರಳ ಪಟ್ಟಿ ಹಿಡಿದು ದೂಡಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಅಲ್ಲದೆ, ಅವಾಚ್ಯವಾಗಿ ಬೈದು ನಿಂದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಂಚನೆ: ಅಮೆಜಾನ್‌ ಕಂಪನಿಯಲ್ಲಿ ಉದ್ಯೋಗವಿದೆ ಎಂದು ಧಾರವಾಡದ ಡಿ. ಸೃಜನಾ ಅವರ ಮೊಬೈಲ್‌ಗೆ ಮೇಸೆಜ್‌ಗೆ ಕಳುಹಿಸಿ ನಂಬಿಸಿದ ವಂಚಕ, ಅವರ ಬ್ಯಾಂಕ್‌ ಖಾತೆಯಿಂದ ₹74 ಸಾವಿರ ವರ್ಗಾಯಿಸಿಕೊಂಡಿದ್ದಾನೆ.

ADVERTISEMENT

ಅಮೆಜಾನ್‌ ಕಂಪನಿಯಲ್ಲಿ ಪೂರ್ಣಾವಧಿ–ಅಲ್ಪಾವಧಿ ಉದ್ಯೋಗ, ಮನೆಯಿಂದಲೇ ಕೆಲಸ ಹಾಗೂ ಆನ್‌ಲೈನ್‌ ವ್ಯವಹಾರ ನಡೆಸಬಹುದು ಎಂದು ಸೃಜನಾ ಅವರ ವಾಟ್ಸ್‌ಆ್ಯಪ್‌ ನಂಬರ್‌ಗೆ ವಂಚಕ ಮೇಸೆಜ್‌ ಕಳುಹಿಸಿದ್ದಾನೆ. ನಂತರ ಆನ್‌ಲೈನ್‌ಲ್ಲಿ ರಿಚಾರ್ಜ್‌ ಮಾಡಿಸಿಕೊಂಡು ಫೋನ್‌ಪೇನಲ್ಲಿ ಕಮಿಷನ್‌ ನೀಡಿದ್ದಾನೆ. ಮತ್ತೆ ಹಂತ ಹಂತವಾಗಿ ರಿಚಾರ್ಜ್‌ ಮಾಡಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಂಚನೆ: ಕ್ರೆಡಿಟ್‌ ಕಾರ್ಡ್‌ಗೆ ರಿವಾರ್ಡ್ಸ್‌ ಬಂದಿದೆ ಎಂದು ಆನಂದ ನಗರದ ವಿನಾಯಕ ಎನ್‌. ಅವರಿಗೆ ಲಿಂಕ್‌ ಕಳುಹಿಸಿದ ವಂಚಕ, ₹1.92 ಲಕ್ಷ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ರಿವಾರ್ಡ್ಸ್‌ ಪಡೆಯದಿದ್ದರೆ ಅದು ರದ್ದಾಗುತ್ತದೆ ಎಂದು ಬ್ಯಾಂಕ್‌ ಖಾತೆ ಸಂಪರ್ಕ ಇರುವ ವಿನಾಯಕ ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿದ್ದಾನೆ. ಅದನ್ನು ನಂಬಿದ ಅವರು ಲಿಂಕ್‌ ತೆರೆದು ಕ್ರೆಡಿಟ್‌ ಕಾರ್ಡ್‌ ಮಾಹಿತಿ ಹಾಕಿ ಸಬ್‌ಮೀಟ್‌ ಮಾಡಿದ್ದಾರೆ. ಅದಾದ ನಂತರ ಹಂತ ಹಂತವಾಗಿ ಹಣ ಕಡಿತವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೊಬೈಲ್‌ ಕಳವು: ಬೆಂಗಳೂರಿನಿಂದ ಬೆಳಗಾವಿಗೆ ಬೆಳಗಾವಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ವನಮಾಲಾ ಬಿ.ಟಿ. ಅವರ ವ್ಯಾನಿಟಿ ಬ್ಯಾಗ್‌ನಲ್ಲಿ ಇದ್ದ ಮೊಬೈಲ್‌, ನಗದು ಸೇರಿ ₹1.90 ಲಕ್ಷ ಮೌಲ್ಯದ ವಸ್ತುಗಳು ಕಳವು ಆಗಿದೆ.

₹75ಸಾವಿರ ನಗದು, ₹1 ಲಕ್ಷ ಮೌಲ್ಯದ ಆ್ಯಪಲ್‌ ಮೊಬೈಲ್‌ ಮತ್ತು ₹15ಸಾವಿರ ಮೌಲ್ಯದ ಮೊಬೈಲ್‌ ಕಳವು ಆಗಿದೆ ಎಂದು ಹುಬ್ಬಳ್ಳಿ ರೇಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.