ADVERTISEMENT

‘ಚರ್ಚ್‌’ನಲ್ಲಿ ವಿನಯ ಕುಲಕರ್ಣಿ ಮತ ಭೇಟೆ

ಪಾದ್ರಿಗಳೊಂದಿಗೆ ಸಭೆ; ಗೆಲುವಿಗಾಗಿ ಪ್ರಾರ್ಥನೆ; ಬಿಜೆಪಿ ವಿರುದ್ಧ ಮುಖಂಡರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 13:36 IST
Last Updated 16 ಏಪ್ರಿಲ್ 2019, 13:36 IST
ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಗೆಲುವಿಗಾಗಿ ಪಾದ್ರಿಗಳು ಪ್ರಾರ್ಥನೆ ಸಲ್ಲಿಸಿದರು
ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಗೆಲುವಿಗಾಗಿ ಪಾದ್ರಿಗಳು ಪ್ರಾರ್ಥನೆ ಸಲ್ಲಿಸಿದರು   

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಮಂಗಳವಾರ ಗದಗ ರಸ್ತೆಯಲ್ಲಿರುವ ಸೇಂಟ್ ಪೀಟರ್ಸ್‌ ಚರ್ಚ್‌ನಲ್ಲಿ ಪಾದ್ರಿಗಳೊಂದಿಗೆ ಸಭೆ ನಡೆಸಿ, ಮತ ಯಾಚಿಸಿದರು. ಸಭೆಯಲ್ಲಿ ಭಾಗವಹಿಸಿದ್ದ 15ಕ್ಕೂ ಹೆಚ್ಚು ಪಾದ್ರಿಗಳು, ‘ಮುಂಚಿನಿಂದಲೂ ನಾವು ಕಾಂಗ್ರೆಸ್‌ ಬೆಂಬಲಿಸುತ್ತಿದ್ದೇವೆ. ಅದರಂತೆ, ಈ ಬಾರಿಯೂ ನಿಮ್ಮೊಂದಿಗೆ ನಾವಿರುತ್ತೇವೆ’ ಎಂದು ಭರವಸೆ ನೀಡಿದರು.

ಬಳಿಕ ಮಾತನಾಡಿದ ವಿನಯ ಕುಲಕರ್ಣಿ, ‘ದೇಶದ ಅಲ್ಪಸಂಖ್ಯಾತರ ಹಾಗೂ ದಲಿತರ ಹಿತ ಕಾಯುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಈ ಬಾರಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪರ ಅಲೆ ಇದ್ದು, ಎಲ್ಲಾ ಸಮುದಾಯಗಳಿಂದಲೂ ಉತ್ತಮ ಬೆಂಬಲ ಸಿಗುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತರು ಬಿಜೆಪಿ ವಿರುದ್ಧ ನಿಂತಿದ್ದಾರೆ. ಹಾಗಾಗಿ, ನನ್ನ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ, ‘ಬಿಜೆಪಿ ಆಡಳಿತಾವಧಿಯಲ್ಲಿ ಅದರ ಅಂಗಸಂಸ್ಥೆಗಳಿಂದ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ನಿತ್ಯ ದೌರ್ಜನ್ಯ ನಡೆಯುತ್ತಿದೆ. ಕೋಮು ಸೌಹಾರ್ದ ಹಾಳು ಮಾಡಿದ್ದೇ ಬಿಜೆಪಿ ಸಾಧನೆ. ಸಂಸತ್ತಿನಲ್ಲಿ ಜಿಲ್ಲೆಯನ್ನು 15 ವರ್ಷ ಪ್ರತಿನಿಧಿಸಿ ಪ್ರಹ್ಲಾದ ಜೋಶಿ ಅವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಿಂಗ್ ರಸ್ತೆ, ಮೇಲ್ಸೇತುವೆ ಸೇರಿದಂತೆ ಯಾವುದೇ ಕೆಲಸಗಳಾಗಿಲ್ಲ’ ಎಂದರು.

ADVERTISEMENT

ಕಾಂಗ್ರೆಸ್ ಮುಖಂಡ ವಿ.ಆರ್. ಸುದರ್ಶನ್ ಮಾತನಾಡಿ, ‘ಈ ಚುನಾವಣೆ ಎರಡು ಸಿದ್ಧಾಂತ ಹಾಗೂ ವಿಚಾರಧಾರೆ ಮಧ್ಯೆ ನಡೆಯುತ್ತಿದೆ. ನಾವು ಸಂವಿಧಾನ ಶ್ರೇಷ್ಠವೆಂದು ಸೌಹಾರ್ದ ಬದುಕಿನ ಬಗ್ಗೆ ಮಾತನಾಡಿದರೆ, ಬಿಜೆಪಿಯವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ. ಆಹಾರ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಟೀಕಿಸಿದರು.

ಸಭೆಯ ಕೊನೆಯಲ್ಲಿ ವಿನಯ ಕುಲಕರ್ಣಿ ಗೆಲುವಿಗಾಗಿ ಎಲ್ಲರೂ ಪ್ರಾರ್ಥಿಸಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲ್ ಕುಮಾರ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ಮುಖಂಡರಾದ ನಾಗರಾಜ ಛಬ್ಬಿ, ಸುಧಾ ದೊರೆರಾಜ್ ಮನಿಕುಂಟ್ಲಾ, ದೊರೆರಾಜ್ ಮನಿಕುಂಟ್ಲಾ, ಅಲ್ತಾಫ ಕಿತ್ತೂರ, ಮಹೇಂದ್ರ ಸಿಂಘಿ, ಸೇಂಟ್ ಪೀಟರ್ಸ್ ಚರ್ಚ್‌ನ ಕಾರ್ಯದರ್ಶಿ ವೈ. ಜಾನ್ಸನ್, ಖಜಾಂಚಿ ಮಧುಸೂದನ್,ಚನ್ನಯ್ಯ, ಪಾದ್ರಿಗಳಾದ ರೆವರೆಂಡ್ ಡಾ. ಜೇಮ್ಸ್, ಡಾ. ಜಾನ್, ರೆ. ಪೂಜಾರಿ, ರೆ.ಎಸ್.ಡಿ. ಬೆಂಗ್ಳೂರ, ಸುನೀಲ್ ಮಹಾಡೆ, ಬಾಬಣ್ಣ, ಗಾಂಧಿ, ನರಸಿಂಹಲು, ಸಾಲ್ಮೋನ್ ಬಿಜ್ಜಾ, ಮಹೇಶ್, ಜರ್ಮಯ್ಯ, ಐಜಯ್ಯ ಇಶ್ರಾಯಲ್, ಜಾನ್ಸನ್, ಪ್ರಸಾದ್ ಹಾಗೂ ದೊಕ್ಕ ಅರ್ಜುನ್ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.