ADVERTISEMENT

ಧಾರವಾಡ: ಬದಲಾವಣೆ ಬಯಸುವ ಕಣದ ಕುತೂಹಲ

ಧಾರವಾಡ–71 ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಸ್ಪರ್ಧೆಯ ಸುತ್ತಲೇ ಚರ್ಚೆ

ಇ.ಎಸ್.ಸುಧೀಂದ್ರ ಪ್ರಸಾದ್
Published 9 ಮಾರ್ಚ್ 2023, 6:05 IST
Last Updated 9 ಮಾರ್ಚ್ 2023, 6:05 IST
ವಿನಯ ಕುಲಕರ್ಣಿ
ವಿನಯ ಕುಲಕರ್ಣಿ   

ಧಾರವಾಡ: ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿರುವ ಧಾರವಾಡ–71 ವಿಧಾನಸಭಾ ಕ್ಷೇತ್ರ, ಯಾವುದೇ ಒಬ್ಬ ಅಭ್ಯರ್ಥಿಯನ್ನು ಸತತವಾಗಿ ಆರಿಸದ ಕಾರಣ ಪ್ರತಿಬಾರಿಯೂ ಕುತೂಲಹದ ಕಣವೇ ಆಗಿರುತ್ತದೆ.

1957ರಿಂದ ಇಲ್ಲಿಯವರೆಗೆ ಧಾರವಾಡ ವಿಧಾನಸಭಾ ಕ್ಷೇತ್ರ ಹಲವಾರು ಪ್ರಮುಖ ಘಟನಾವಳಿಗೆ ಸಾಕ್ಷಿಯಾಗುತ್ತಲೇ ಬಂದಿದೆ. ಹಿಂದಿನ ಚುನಾವಣೆಯಲ್ಲಿ ಮಹದಾಯಿ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮಗಳು ಚರ್ಚಿತ ವಿಷಯವಾದರೆ, ಈ ಬಾರಿ ವಿನಯ ಕುಲಕರ್ಣಿ ಇದೇ ಕ್ಷೇತ್ರದಿಂದ ಸ್ಪರ್ಧಿಸುವರೇ? ಎಂಬುದು ಗ್ರಾಮೀಣ ಭಾಗದಲ್ಲಿ ಕೇಳಿಬರುತ್ತಿರುವ ಸಾಮಾನ್ಯ ಪ್ರಶ್ನೆ.

80ರ ದಶಕದವರೆಗೂ ಕಾಂಗ್ರೆಸ್‌ಗೆ ನಿಚ್ಚಳ ಗೆಲುವು ತಂದುಕೊಡುತ್ತಿದ್ದ ಕ್ಷೇತ್ರ ಇದಾಗಿತ್ತು. 1980ರ ನರಗುಂದ ಬಂಡಾಯ ಹಾಗೂ ಅವೈಜ್ಞಾನಿಕ ಲೆವಿ ಪದ್ಧತಿ ವಿರುದ್ಧ ಸಿಡಿದೆದ್ದ ರೈತರು ನಡೆಸಿದ ಧರಣಿ, ಹೆದ್ದಾರಿ ಬಂದ್ ರಾಷ್ಟ್ರದ ಗಮನ ಸೆಳೆದಿದ್ದವು.

ADVERTISEMENT

ರೈತ ಚಳವಳಿ ಮೂಲಕ ನಾಯಕರಾಗಿ ಹೊರಹೊಮ್ಮಿದ ಬಾಬಾಗೌಡ ಪಾಟೀಲ ಈ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದರು. 1989ರಲ್ಲಿ ನೆರೆಯ ಕಿತ್ತೂರು ಹಾಗೂ ಧಾರವಾಡ ಎರಡೂ ಕ್ಷೇತ್ರಗಳಲ್ಲಿ ಗೆದ್ದ ಅವರು, ನಂತರ ಧಾರವಾಡ ಕ್ಷೇತ್ರವನ್ನು ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಬಿಟ್ಟುಕೊಟ್ಟು, ಅವರನ್ನೂ ಆರಿಸಿ ತಂದರು.

ಅಂಬಡಗಟ್ಟಿ ಸೋದರರಾದ ಶ್ರೀಕಾಂತ, ಶಶಿಧರ, ಶಿವಾನಂದ ಹಾಗೂ ವಿನಯ ಕುಲಕರ್ಣಿ (ಪಕ್ಷೇತರ ಅಭ್ಯರ್ಥಿಯಾಗಿ) ಕೂಡ ರೈತರ ಹೆಸರಿನಲ್ಲಿ ಆಯ್ಕೆಯಾಗಿದ್ದರು. ಅಷ್ಟರ ಮಟ್ಟಿಗೆ ರೈತ ಚಳವಳಿ ಈ ಕ್ಷೇತ್ರದ ಮೇಲೆ ಪ್ರಭಾವ ಬೀರಿತ್ತು. ವಿನಯ ಕುಲಕರ್ಣಿ ಕಾಂಗ್ರೆಸ್‌ ಸೇರಿದ ನಂತರ ಮೂರು ಬಾರಿ ಸ್ಪರ್ಧಿಸಿ ಎರಡು ಬಾರಿ ಪರಾಭವಗೊಂಡರು.

ಬಿಜೆಪಿಯಲ್ಲಿ ಹಾಲಿ ಶಾಸಕ ಅಮತ ದೇಸಾಯಿ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಒಂದು ಬಾರಿ ಶಾಸಕರಾಗಿದ್ದ ಸೀಮಾ ಮಸೂತಿ ಅವರು ಈ ಬಾರಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಕಾಂಗ್ರೆಸ್‌ನಲ್ಲೂ ಕಳೆದ ಬಾರಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಿ ಭಾರೀ ಅಂತರದಿಂದ ಪರಭಾವಗೊಂಡಿದ್ದ ಇಸ್ಮಾಯಿಲ್ ತಮಟಗಾರ ಅವರೂ ಈ ಬಾರಿ ಧಾರವಾಡ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ. ಜೆಡಿಎಸ್‌ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.