
ಕಾರ್ಯಕ್ರಮದಲ್ಲಿ ನ್ಯಾ.ಸಂತೋಷ ಹೆಗ್ಡೆ ಅವರು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ ಭೂಷಣ್ ಅವರಿಗೆ ‘ಮಹಾ ಸಂಗ್ರಾಮಿ ಎಸ್.ಆರ್.ಹಿರೇಮಠ ಸಮಾಜ ಪರಿವರ್ತನ ಪುರಸ್ಕಾರ’ ಪ್ರಶಸ್ತಿ ಪ್ರದಾನ ಮಾಡಿದರು.
ಧಾರವಾಡ: ‘ದೇಶ ಮತ್ತು ಸಂವಿಧಾನ ಸಂಕಷ್ಟದಲ್ಲಿವೆ. ಅವುಗಳ ರಕ್ಷಣೆಯಲ್ಲಿ ಜನರ ಜವಾಬ್ದಾರಿ ಹೆಚ್ಚು ಇದೆ’ ಎಂದು ಸುಪ್ರೀಂ ಕೋರ್ಟ್‌ನ ವಕೀಲ ಪ್ರಶಾಂತ ಭೂಷಣ್ ಇಲ್ಲಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘ ನೀಡುವ ಸಮಾಜ ಪರಿವರ್ತನ ಸಮುದಾಯದ (ಎಸ್‌ಪಿಎಸ್) ದತ್ತಿಯ ‘ಮಹಾಸಂಗ್ರಾಮಿ ಎಸ್.ಆರ್.ಹಿರೇಮಠ ಸಮಾಜ ಪರಿವರ್ತನ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
‘ಕೇಂದ್ರ ‘ಮನರೇಗಾ’ ರದ್ದತಿಗೆ ಮುಂದಾಗಿದೆ. ಬಡವರ ಹಕ್ಕುಗಳ ಮೇಲೆ ಪ್ರಹಾರ ಆಗುತ್ತಿದೆ. ರಕ್ಷಿಸಬೇಕಾದ ನ್ಯಾಯಾಂಗ ಕ್ರಿಯಾಶೀಲವಾಗಿಲ್ಲ. ಜನರು ಸಂಘಟಿತರಾಗಿ ಅಹಿಂಸಾತ್ಮಕ ಆಂದೋಲನ ನಡೆಸಬೇಕು’ ಎಂದರು.
‘ನ್ಯಾಯಾಂಗದಲ್ಲಿ ಕ್ರಿಯಾಶೀಲತೆ ಕಡಿಮೆಯಾಗಿದೆ. ನ್ಯಾಯಮೂರ್ತಿಗಳಿಗೆ ನಿವೃತ್ತಿ ನಂತರ ರಾಜ್ಯಸಭಾ ಸದಸ್ಯ ಸ್ಥಾನ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹುದ್ದೆ ದಯಪಾಲಿಸುವ ಪರಿಪಾಟ ಹೆಚ್ಚಾಗಿದೆ’ ಎಂದರು.
‘ತಪ್ಪುಮಾಹಿತಿ ಹರಡುವುದು, ದ್ವೇಷ ಭಾವನೆ ಬಿತ್ತುವುದು ಹೆಚ್ಚುತ್ತಿದೆ. ಅಲ್ಪಸಂಖ್ಯಾತರ ಬಗ್ಗೆ ದ್ವೇಷಯುಕ್ತ ತಪ್ಪು ಮಾಹಿತಿ ಹರಡುವುದು ಶಾಲಾ ಪಠ್ಯಗಳಲ್ಲಿ ಇತಿಹಾಸದ ಕೆಲ ವಿಷಯಗಳನ್ನು ತೆಗೆಯಲಾಗಿದೆ. ವೈಜ್ಞಾನಿಕವಲ್ಲದ ವಿಷಯಗಳು ನುಸುಳಿವೆ’ ಎಂದು ಹೇಳಿದರು.
‘ಮಹಾ ಲೆಕ್ಕ ಪರಿಶೋಧಕ ಮತ್ತು ಮಹಾಲೇಖಪಾಲ (ಸಿಎಜಿ) ಸಂಸ್ಥೆ ಸ್ವತಂತ್ರವಾಗಿತ್ತು. ಸರ್ಕಾರ, ಸಾರ್ವಜನಿಕ ಸಂಸ್ಥೆಗಳ ಲೆಕ್ಕ ಪರಿಶೋಧನೆ ಮಾಡುತ್ತಿತ್ತು. ಈಗ ಸಂಸ್ಥೆಯ ಸ್ವಾತಂತ್ರ್ಯ ಕಸಿಯಲಾಗಿದೆ. ಚುನಾವಣಾ ಆಯೋಗ ಸೇರಿ ಬಹಳಷ್ಟು ಸಂಸ್ಥೆಗಳ ಸ್ವಾತಂತ್ರ್ಯ ಕಸಿಯಲಾಗಿದೆ’ ಎಂದು ದೂರಿದರು.