ADVERTISEMENT

ಹುಬ್ಬಳ್ಳಿ | ವಿವಿಧ ಯೋಜನೆಯಡಿ ಮನೆ ನಿರ್ಮಾಣ ಅಪೂರ್ಣ: ನನಸಾಗದ ಬಡವರ ಕನಸು

ಗಣೇಶ ವೈದ್ಯ
Published 23 ಡಿಸೆಂಬರ್ 2024, 6:52 IST
Last Updated 23 ಡಿಸೆಂಬರ್ 2024, 6:52 IST
ನವಲಗುಂದ ಪಟ್ಟಣದ ವಾರ್ಡ್ 13ರಲ್ಲಿ ನಿರ್ಮಾಣವಾಗುತ್ತಿರುವ ಬಸವರಾಜ ಬದಾಮಿ ಅವರ ಮನೆ ಎರಡು ವರ್ಷಗಳಿಂದ ಅಪೂರ್ಣವಾಗಿದೆ. ಅವರು ಮನೆಯ ಎದುರೇ ತಗಡಿನ ಶೆಡ್‌ನಲ್ಲಿ ವಾಸವಾಗಿದ್ದಾರೆ
ನವಲಗುಂದ ಪಟ್ಟಣದ ವಾರ್ಡ್ 13ರಲ್ಲಿ ನಿರ್ಮಾಣವಾಗುತ್ತಿರುವ ಬಸವರಾಜ ಬದಾಮಿ ಅವರ ಮನೆ ಎರಡು ವರ್ಷಗಳಿಂದ ಅಪೂರ್ಣವಾಗಿದೆ. ಅವರು ಮನೆಯ ಎದುರೇ ತಗಡಿನ ಶೆಡ್‌ನಲ್ಲಿ ವಾಸವಾಗಿದ್ದಾರೆ   

ಹುಬ್ಬಳ್ಳಿ: ತಲೆಯ ಮೇಲೆ ಸ್ವಂತದ್ದೊಂದು ಸೂರು ಇರಬೇಕು ಎಂಬುದು ಪ್ರತಿಯೊಬ್ಬರ ಕನಸು. ಆರ್ಥಿಕವಾಗಿ ಸಬಲರಲ್ಲದವರ ಇಂಥ ಕನಸು ನನಸು ಮಾಡುವ ಉದ್ದೇಶದಿಂದ ಸರ್ಕಾರಗಳು ಹಲವು ವಸತಿ ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸುವ ಕಾರ್ಯ ಮಾತ್ರ ಮುಗಿಯದ ಗೋಜಲಾಗಿದೆ.

ಫಲಾನುಭವಿಗಳ ಆಯ್ಕೆಯಲ್ಲಿ ಉಂಟಾದ ಗೊಂದಲ, ಸರ್ಕಾರ ಕೊಡುವ ಅನುದಾನ ಮನೆ ನಿರ್ಮಾಣಕ್ಕೆ ಸಾಲದೇ ಇರುವುದು, ತಾಂತ್ರಿಕ ದೋಷ ಹೀಗೆ ಅನೇಕ ಕಾರಣಗಳಿಂದ ವಸತಿ ಯೋಜನೆಗಳು ಅಪೂರ್ಣಗೊಂಡಿವೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಹಾಗೂ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗ್ರಾಮೀಣ ಆವಾಸ ಯೋಜನೆಗಳ (ಪಿಎಂಎವೈಜಿ) ಅಡಿ 2010ನೇ ಸಾಲಿನಿಂದ ಮನೆಗಳ ನಿರ್ಮಾಣಕ್ಕೆ ಸಹಾಯಧನ ನೀಡಲು 46 ಸಾವಿರಕ್ಕೂ ಅಧಿಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ, 5,600ಕ್ಕೂ ಹೆಚ್ಚು ಮನೆಗಳು ಈವರೆಗೂ ಅಪೂರ್ಣವಾಗಿವೆ. ಕೆಲವು ಮನೆಗಳು ಅಡಿಪಾಯ ಹಂತದಲ್ಲಿದ್ದರೆ, ಲಿಂಟಲ್, ಚಾವಣಿ ಹಂತದಲ್ಲಿ ಮತ್ತೆ ಕೆಲವು ಮನೆಗಳು ಪ್ರಗತಿಯಲ್ಲಿವೆ.

ADVERTISEMENT

ಗಮನಿಸಬೇಕಾದ ಅಂಶವೆಂದರೆ 1,570 ಮನೆಗಳ ನಿರ್ಮಾಣ ಈವರೆಗೂ ಆರಂಭವೇ ಆಗಿಲ್ಲ. ಮಂಜೂರಾತಿ ಕೊಟ್ಟ ಮೂರು ತಿಂಗಳ ಒಳಗೆ ಮನೆ ನಿರ್ಮಾಣ ಆರಂಭವಾಗದೇ ಇದ್ದಲ್ಲಿ ಅಂತಹ ಮನೆಗಳ ಅನುದಾನವನ್ನು ತಡೆಹಿಡಿಯಲಾಗುತ್ತದೆ.

ಬಸವ ವಸತಿ ಯೋಜನೆ ಅಡಿ 2010ರಿಂದ 2022ರ ವರೆಗೆ ಗ್ರಾಮೀಣ ಭಾಗಗಳಲ್ಲಿ 32,324 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಈವರೆಗೂ 2,091 ಮನೆಗಳು ವಿವಿಧ ಹಂತಗಳಲ್ಲಿ ಅಪೂರ್ಣವಾಗಿಯೇ ಇವೆ. 37 ಮನೆಗಳ ಕಾಮಗಾರಿಯೇ ಆರಂಭವಾಗಿಲ್ಲ.

ಅಂಬೇಡ್ಕರ್ ನಿವಾಸ ಯೋಜನೆಯಲ್ಲಿ 2015ರಿಂದ 2022ರ ಅವಧಿಯಲ್ಲಿ 5,721 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಪೂರ್ಣಗೊಂಡಿರುವ ಮನೆಗಳು 4,509 ಮಾತ್ರ. 9 ಮನೆಗಳು ಇನ್ನೂ ಆರಂಭವಾಗಬೇಕಿವೆ.

2016ರಿಂದ 2022ರ ಅವಧಿಯಲ್ಲಿ ಪಿಎಂಎವೈಜಿ ಅಡಿ 8,735 ಫಲಾನುಭವಿಗಳನ್ನು ಗುರುತಿಸಲಾಗಿದೆ. ಇದರಲ್ಲಿ 4,626 ಮನೆಗಳಷ್ಟೇ ಪೂರ್ಣಗೊಂಡಿವೆ. 1,403 ಮನೆಗಳ ನಿರ್ಮಾಣ ‍ಪ್ರಗತಿಯಲ್ಲಿದ್ದರೆ, 1,494 ಮನೆಗಳಿಗೆ ಅಡಿಪಾಯವೇ ಹಾಕಿಲ್ಲ. 2024–25ನೇ ಸಾಲಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ.

ಮನೆಗಳು ಮಂಜೂರಾದ ಕಾರಣ ಫಲಾನುಭವಿಗಳು ಕೂಡಿಟ್ಟಿದ್ದ ಹಣದಿಂದ ಅಡಿಪಾಯದ ಕಾಮಗಾರಿ ಮುಗಿಸಿದ್ದಾರೆ. ಕೆಲವರು ಸಾಲ ಮಾಡಿ ಅರ್ಧ ಮನೆ ಕಟ್ಟಿದ್ದಾರೆ. ಆದರೆ, ಸರ್ಕಾರದಿಂದ ಬರಬೇಕಾದ ಕಂತು ಬಿಡುಗಡೆಯಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನವಲಗುಂದ ಪಟ್ಟಣದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮಂಜೂರಾಗಿದ್ದ ಮನೆಗಳಿಗೆ ಸರಿಯಾದ ಜಾಗವೇ ಸಿಗದ ಕಾರಣ ಬೇರೆ ಜಾಗದಲ್ಲಿ ಮನೆ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಕೆಲವರು ಹಳೆಯ ಮನೆ ಕೆಡವಿ ಆ ಜಾಗದಲ್ಲಿ ಹೊಸ ಮನೆ ನಿರ್ಮಿಸುತ್ತಿದ್ದಾರೆ. ಪಕ್ಕದಲ್ಲಿಯೇ ಶೆಡ್‌ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಹಳೆಯ ಮನೆ ಉಳಿಯಲಿಲ್ಲ, ಹೊಸ ಮನೆ ಪೂರ್ಣಗೊಂಡಿಲ್ಲ ಎಂಬಂತಾಗಿದೆ ಈಗ ಅವರ ಪರಿಸ್ಥಿತಿ. ಅವರು ಮಳೆ ಹಾಗೂ ಬೇಸಿಗೆ ಕಾಲದಲ್ಲಿ ಶೆಡ್‌ಗಳಲ್ಲಿಯೇ ಕಾಲ ಕಳೆಯುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ಕಲ್ಲವ್ವ ಭಜಂತ್ರಿ ಎಂಬುವವರು ₹20ಸಾವಿರದ ಒಂದು ಕಂತು ಮಾತ್ರ ಭರಿಸಿದ್ದಾರೆ. ಇನ್ನೂ ₹80 ಸಾವಿರ ಬಾಕಿ ಇದೆ. ಮನೆಯನ್ನು ತಾವೇ ನಿರ್ಮಾಣ ಮಾಡಿಕೊಂಡಿದ್ದಾರೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಕಾರ್ಮಿಕರ ಕೂಲಿಯನ್ನು ಸರ್ಕಾರ ನೀಡುವುದಿಲ್ಲ. ಸರ್ಕಾರಕ್ಕೆ ಮತ್ತೆ ₹80 ಸಾವಿರ ಕಟ್ಟುವ ಬದಲು ₹40 ಸಾವಿರ ಖರ್ಚು ಮಾಡಿದರೆ ಮನೆ ಪೂರ್ಣಗೊಳ್ಳುತ್ತದೆ ಎಂಬುದು ಅವರ ಆಲೋಚನೆ.

‘ಕಳೆದ ಸರ್ಕಾರದ ಅವಧಿಯಲ್ಲಿ ಫಲಾನುಭವಿಗಳು ₹75 ಸಾವಿರ ಭರಿಸಬೇಕಿತ್ತು. ಆದರೆ ಸದ್ಯ ಇರುವ ಸರ್ಕಾರವು ಈ ಮೊತ್ತವನ್ನು ₹1 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಕಷ್ಟ ಪಟ್ಟು ಹಣ ಹೊಂದಿಸಿ ₹1 ಲಕ್ಷ ಭರಿಸಿದರೂ ಮನೆ ಕಾಮಗಾರಿ ಮಾತ್ರ ಮೇಲೇಳಲಿಲ್ಲ. ಈಚೆಗೆ ಗುತ್ತಿಗೆದಾರರು ಸಹ ಬದಲಾಗಿದ್ದಾರೆ. ಸದ್ಯ ನಮ್ಮ ಬಳಿ ಕಾರ್ಮಿಕರು ಲಭ್ಯವಿಲ್ಲ, ಮನೆಗಳನ್ನು ನೀವೇ ಕಟ್ಟಿಸಿಕೊಳ್ಳಬೇಕು, ಕಾರ್ಮಿಕರ ಕೂಲಿಯನ್ನೂ ನೀವೇ ಭರಿಸಬೇಕು. ಸಾಮಗ್ರಿಗಳನ್ನು ಮಾತ್ರ ನಾವು ಪೂರೈಸುತ್ತೇವೆ ಎಂದು ಹೊಸ ಗುತ್ತಿಗೆದಾರರು ಹೇಳುತ್ತಿದ್ದಾರೆ’ ಎಂದು ಅಸಹಾಯಕತೆ ತೋಡಿಕೊಂಡರು ನವಲಗುಂದ ಪಟ್ಟಣದ ವಾರ್ಡ್ 13ರ ಫಲಾನುಭವಿ ಬಸವರಾಜ್ ಬದಾಮಿ.

ಬಸವರಾಜ ಅವರಿಗೆ ಕೊಳೆಗೇರಿ ನಿರ್ಮೂಲನಾ ಮಂಡಳಿಯಿಂದ ಮನೆ ಮಂಜೂರಾಗಿದೆ. ಆದರೆ ಎರಡು ವರ್ಷದಿಂದ ಮನೆ ಪೂರ್ಣಗೊಂಡಿಲ್ಲ. ಅರೆ ನಿರ್ಮಾಣವಾದ ಮನೆಯ ಪಕ್ಕವೇ ತಗಡಿನ ಶೆಟ್ ಹಾಕಿಕೊಂಡು ತಾವೊಬ್ಬರೇ ಅಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರಿಯಾದ ಮನೆ ಇಲ್ಲದ ಕಾರಣ ಹೆಂಡತಿ ಹಾಗೂ ಮಕ್ಕಳನ್ನು ಧಾರವಾಡದಲ್ಲಿರುವ ಸಂಬಧಿಕರ ಮನೆಯಲ್ಲಿ ಬಿಟ್ಟಿದ್ದಾರೆ. ಒಟ್ಟಾರೆ ಆಶ್ರಯ ಮನೆ ಯೋಜನೆಗಳು ತಮ್ಮ ಉದ್ದೇಶವನ್ನು ಪೂರ್ಣಗೊಳಿಸುವಲ್ಲಿ ಎಡವುತ್ತಿವೆ ಎಂಬುದು ಫಲಾನುಭವಿಗಳ ಅಳಲು.

ಪೂರಕ ಮಾಹಿತಿ: ಅಬ್ದುಲ್ ರಜಾಕ್ ನದಾಫ್

ನವಲಗುಂದ ಪಟ್ಟಣದಲ್ಲಿ ಬಹುತೇಕ ಪೂರ್ಣಗೊಂಡ ಕಲ್ಲವ್ವ ಭಜಂತ್ರಿ ಅವರ ಮನೆ
ಮನೆ ನಿರ್ಮಾಣಕ್ಕೆ ನಿಗದಿ ಮಾಡಿದ ಒಟ್ಟು ಗುರಿಯಲ್ಲಿ ಮೀಸಲಾತಿ ನೀಡಲಾಗಿರುತ್ತದೆ. ಆದರೆ ಕೆಲವು ವರ್ಗಗಳ ಫಲಾನುಭವಿಗಳು ಇಲ್ಲದ ಕಾರಣ ಅಂಥ ಮನೆಗಳು ಹಂಚಿಕೆ ಆಗಿರುವುದಿಲ್ಲ
ಸ್ವರೂಪಾ ಟಿ.ಕೆ. ಜಿಲ್ಲಾ ಪಂಚಾಯಿತಿ ಸಿಇಒ ಧಾರವಾಡ

ಪೂರ್ಣಗೊಳ್ಳದ ಪೌರಕಾರ್ಮಿಕರ ನಿರೀಕ್ಷೆ

ಹುಬ್ಬಳ್ಳಿ–ಧಾರವಾಡ ನಗರ ವ್ಯಾಪ್ತಿಯಲ್ಲಿ ಪೌರಕಾರ್ಮಿಕ ಗೃಹಭಾಗ್ಯ ಯೋಜನೆ ಅಡಿ ಪೌರಕಾರ್ಮಿಕರಿಗಾಗಿ ಹೊಸ ಮಂಟೂರು ರಸ್ತೆಯ ಯಲ್ಲಾಪುರ ಗ್ರಾಮದಲ್ಲಿ 320 ಮನೆಗಳನ್ನು ಮಹಾನಗರ ಪಾಲಿಕೆಯಿಂದ ನಿರ್ಮಾಣ ಮಾಡಲಾಗುತ್ತಿದೆ. ಈ ಮನೆಗಳು ಜಿ+3 ಮಾದರಿಯದಾಗಿದ್ದು, ಪ್ರತಿ ಮಹಡಿಯಲ್ಲಿ ತಲಾ ಎಂಟು ಮನೆಗಳಂತೆ ಹತ್ತು ಬ್ಲಾಕ್‌ಗಳನ್ನು ನಿರ್ಮಿಸಲಾಗುತ್ತಿದೆ. 2019ರಲ್ಲೇ ಕಾರ್ಯಾದೇಶ ಸಿಕ್ಕಿದ್ದರೂ ಈವರೆಗೆ ಪೂರ್ಣಗೊಂಡಿರುವುದು 220 ಮನೆಗಳು ಮಾತ್ರ.

‘ಜಾಗದ ಕುರಿತ ವಿವಾದ, ವಿನ್ಯಾಸ ಬದಲಾವಣೆ ಕಾರಣ ನಿರ್ಮಾಣ ಆರಂಭವೇ ವಿಳಂಬವಾಯಿತು. ಬಳಿಕ 2019ರಲ್ಲಿ ಮಳೆ ಬಂದು ಆ ಪ್ರದೇಶದಲ್ಲೆಲ್ಲ ನೀರು ತುಂಬಿ ಕಾಮಗಾರಿಗೆ ಸಮಸ್ಯೆ ಉಂಟಾಯಿತು. ಹೊಂಡ ತೆಗೆದರೆ ನೀರು ತುಂಬಿಕೊಳ್ಳುತ್ತಿತ್ತು. ಪ್ಲಿಂಥ್ ಮಟ್ಟವನ್ನು ಎತ್ತರಿಸಿ ನಿರ್ಮಾಣ ಆರಂಭಿಸಲಾಯಿತು. ಮತ್ತೆ ಕೋವಿಡ್ ಕಾರಣಕ್ಕೆ ಲಾಕ್‌ಡೌನ್ ಆಗಿ ಕಾಮಗಾರಿಯೇ ಸ್ಥಗಿತಗೊಂಡಿತು. ಹೀಗೆ ಈ ಯೋಜನೆ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ವಿಳಂಬವಾಗಲು ಸಕಾರಣ ಇದೆ ಎಂದು ಮನಗಂಡ ಸರ್ಕಾರವೂ ಯಾವುದೇ ದಂಡ ವಿಧಿಸದೆ ಗಡುವು ಅನ್ನು 2025ರ ಮಾರ್ಚ್‌ವರೆಗೆ ವಿಸ್ತರಿಸಿದೆ. ಈ ಗಡುವಿನೊಳಗೆ ಪೂರ್ಣಗೊಳ್ಳುತ್ತದೆ’ ಎಂದು ಮಹಾನಗರ ಪಾಲಿಕೆಯ ಉಪಆಯುಕ್ತ (ಅಭಿವೃದ್ಧಿ) ಆರ್. ವಿಜಯಕುಮಾರ್ ಅವರು ತಿಳಿಸಿದರು.

ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಗೋಕುಲ ರಸ್ತೆಯಲ್ಲಿ 1,248 ಹಾಗೂ ಮಂಟೂರು ರಸ್ತೆಯ ಯಲ್ಲಾಪುರ ಗ್ರಾಮದಲ್ಲಿ ಇನ್ನೂ 784 ಮನೆಗಳ ನಿರ್ಮಾಣಕ್ಕೆ 2023ರ ಮಾರ್ಚ್‌ನಲ್ಲಿ ಕಾರ್ಯಾದೇಶ ನೀಡಲಾಗಿದೆ. ಇವುಗಳಲ್ಲಿ 64 ಬ್ಲಾಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, 27 ಬ್ಲಾಕ್‌ಗಳು ತಳಪಾಯ ಹಂತದಲ್ಲಿವೆ.

ಮಹಾನಗರ ಪಾಲಿಕೆ ಮಂಜೂರು ಮಾಡಿದ ಮನೆಗಳಿಗೆ ಇನ್ನೂ ಐದು ಫಲಾನುಭವಿಗಳ ಆಯ್ಕೆ ಬಾಕಿ ಇದೆ. ಇದ‌ಲ್ಲದೆ, 2024ರ ಜನವರಿ 31ರ ಗಡುವಿನ ಒಳಗೆ ಕಾಮಗಾರಿ ಆರಂಭವಾಗದ 92 ಮನೆಗಳಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಲಾಗಿದೆ.

ಮನೆ ನಿರ್ಮಾಣ ಕಾಮಗಾರಿಯೇ ಆರಂಭವಾಗದ ಕಾರಣ 2023ರ ಆಗಸ್ಟ್‌ನಲ್ಲಿ 275 ಹಾಗೂ 2024ರ ಫೆಬ್ರುವರಿಯಲ್ಲಿ 36 ಫಲಾನುಭವಿಗಳನ್ನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗೆ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಇನ್ನು ಲಿಡ್ಕರ್ ಯೋಜನೆಯಲ್ಲಿ 9 ಮನೆಗಳು ಮಂಜೂರಾಗಿದ್ದು, ಎಲ್ಲವೂ ಈಗಾಗಲೇ ಪೂರ್ಣಗೊಂಡು ಜಿಯೊ ಟ್ಯಾಗ್ ಕೂಡ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.