ADVERTISEMENT

ಧಾರವಾಡ: ನಿವೇಶನ ನೀಡದ ಡೆವಲಪರ್‌ಗೆ ದಂಡ

​ಪ್ರಜಾವಾಣಿ ವಾರ್ತೆ
Published 26 ಮೇ 2023, 7:10 IST
Last Updated 26 ಮೇ 2023, 7:10 IST

ಧಾರವಾಡ: ನಿವೇಶನಕ್ಕೆ ಮುಂಗಡ ಹಣ ಪಡೆದು, ಗ್ರಾಹಕರೊಂದಿಗಿನ ಕರಾರು ಉಲ್ಲಂಘಿಸಿದ ಹುಬ್ಬಳ್ಳಿಯ ಮ್ಯಾಕ್ಸ್‌ವರ್ತ್‌ ರಿಯಾಲಿಟಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೇಶವ ಕೋಲಾರ ಅವರಿಗೆ ಬಡ್ಡಿ ಸಹಿತ ₹19.28 ಲಕ್ಷ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಧಾರವಾಡದ ನವೋದಯ ನಗರದ ನಿವಾಸಿ ಜಯಕರ ಪಾಟೀಲ ಎಂಬುವವರು 2015ರಲ್ಲಿ ಹುಬ್ಬಳ್ಳಿಯ ಮ್ಯಾಕ್ಸ್‌ವರ್ತ್‌ ರಿಯಾಲಿಟಿ ಇಂಡಿಯಾ ಸಂಸ್ಥೆಯು ಕುಸುಗಲ್ ಬಳಿಯ ಗುಡ್‌ ಶೆಫರ್ಡ್ ಶಾಲೆಯ ಎದುರು ಅಭಿವೃದ್ಧಿಪಡಿಸುತ್ತಿದ್ದ ಬಡಾವಣೆಯಲ್ಲಿ ಮೂರು ನಿವೇಶನ ಕಾಯ್ದಿರಿಸಿದ್ದರು. ₹19.28 ಲಕ್ಷ ಮುಂಗಡ ಹಣ ಪಾವತಿಸಿದ್ದರು. ಹಣ ನೀಡಿ ಆರು ವರ್ಷ ಕಳೆದರೂ ನಿವೇಶನ ನೀಡದಿದ್ದರಿಂದ ತಾವು ಕೊಟ್ಟ ಹಣ ಮರಳಿಕೊಡುವಂತೆ ಕೇಳಿದರೂ, ನೀಡದೆ ವಂಚಿಸಿದ್ದಾರೆ ಎಂದು ಆಯೋಗಕ್ಕೆ ದೂರು ನೀಡಿದ್ದರು.

ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಕೆ. ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪಿ.ಸಿ.ಹಿರೇಮಠ ಅವರು, ‘ಮುಂಗಡ ಹಣ ಪಡೆದು ನಿವೇಶನ ನೀಡದ ಡೆವಲಪರ್‌ ಸೇವಾ ನ್ಯೂನತೆ ಎಸಗಿದ್ದಾರೆ. ದೂರುದಾರರಿಂದ ಪಡೆದ ₹19.28 ಲಕ್ಷವನ್ನು 2014ರಿಂದ ಶೇ 9ರ ಬಡ್ಡಿ ಸೇರಿಸಿ ನೀಡಬೇಕು. ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ₹1 ಲಕ್ಷ ಪರಿಹಾರ ಹಾಗೂ ಪ್ರಕರಣ ಖರ್ಚಿಗೆ ₹10 ಸಾವಿರವನ್ನು ಸೇರಿಸಿ ತಿಂಗಳ ಒಳಗಾಗಿ ನೀಡಬೇಕು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.