ADVERTISEMENT

ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದ: 23ಕ್ಕೆ ಸತ್ಯ ಬಹಿರಂಗ

ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಸವಾಲು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 11:43 IST
Last Updated 16 ಫೆಬ್ರುವರಿ 2020, 11:43 IST

ಹುಬ್ಬಳ್ಳಿ: ‘ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದಕ್ಕೆ ಸಂಬಂಧಿಸಿ ಫೆ.23ರಂದು ನಾನು ಕೆಲ ಸತ್ಯಗಳನ್ನು ಬಹಿರಂಗಪಡಿಸುತ್ತೇನೆ. ಅಂದು ಮಠದ ಪೀಠಾಧಿಪತಿ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ, ಗಣ್ಯರು ಮತ್ತು ಭಕ್ತರು ಮಠದ ಆವರಣದಲ್ಲಿ ಬಹಿರಂಗ ಚರ್ಚೆಗೆ ಬರಬೇಕು’ ಎಂದು ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಸವಾಲೆಸೆದರು.

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಠದ ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಹೇಳಿಕೆ ಗುರುಸಿದ್ಧರಾಜ ಸ್ವಾಮೀಜಿ ಅವರದ್ದಲ್ಲ. ಕೆಲ ದುಷ್ಕರ್ಮಿಗಳು ಸ್ವಾಮೀಜಿ ಹೆಸರಿನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿ ಅವರಿಂದ ಒತ್ತಾಯಪೂರ್ವಕವಾಗಿ ಈ ರೀತಿ ಹೇಳಿಸಿರಲೂಬಹುದು‘ ಎಂದು ಸಂಶಯ ವ್ಯಕ್ತಪಡಿಸಿದರು.

‘ನನ್ನ ವಿರುದ್ಧ ಕುತಂತ್ರ ಮಾಡುತ್ತಿರುವ ದುಷ್ಕರ್ಮಿಗಳು, ಖಾವಿಧಾರಿಗಳು ಕೂಡ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು. ಇದು ನನ್ನ ತೇಜೋವಧೆ ಹಾಗೂ ಮರ್ಯಾದೆಗೆ ಸಂಬಂಧಿಸಿದ ವಿಷಯ’ ಎಂದರು.

ADVERTISEMENT

‘ಮಠದ ಉತ್ತರಾಧಿಕಾರಿ ನೇಮಕದ ಪರ ಹಾಗೂ ವಿರೋಧ ಹೇಳಿಕೆಗಳನ್ನು ನೀಡುವವರು ಬಾಯಿ ಮುಚ್ಚಿಕೊಳ್ಳಬೇಕು. ನಮ್ಮ ಸಮಾಧಾನವನ್ನು ದೌರ್ಬಲ್ಯ ಎಂದು ಭಾವಿಸಬಾರದು. ಮಠದ ಸಂಪ್ರದಾಯದಂತೆ ಉತ್ತರಾಧಿಕಾರಿ ನೇಮಕ ಮಾಡಲಾಗುವುದು’ ಎಂದು ಗುರುಸಿದ್ಧರಾಜ ಸ್ವಾಮೀಜಿ ಪತ್ರಿಕಾ ಹೇಳಿಕೆ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಠದ ಉನ್ನತ ಸಮಿತಿ ಸದಸ್ಯರೂ ಆದ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ‘ಬಹಿರಂಗ ಚರ್ಚೆಯಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ಅವರು ಏನಾದರೂ ಮಾಡಿಕೊಳ್ಳಲಿ. ನಾವು ಮಠದ ಭಕ್ತರು, ಈ ಸ್ವಾಮೀಜಿಗಳ ನಡುವಿನ ಗುದ್ದಾಟ ನಮಗೆ ಬೇಕಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.