ಹುಬ್ಬಳ್ಳಿ: ಮಂಡ್ಯದ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ ಅವರ ಮರ್ಮಾಂಗದಮುಂದೊಗಲತುದಿ ಕತ್ತರಿಸಿ(ಖತ್ನಾ) ಮುಸ್ಲಿಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ 11 ಮಂದಿ ವಿರುದ್ಧ ಇಲ್ಲಿನ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯದ ಅತ್ತಾವರ ರೆಹಮಾನ್, ಬೆಂಗಳೂರಿನ ಅಜೀಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಅನ್ಸಾರ್ ಪಾಷಾ, ಸಯ್ಯದ್ ದಸ್ತಗಿರ್, ಮಹ್ಮದ್ ಇಕ್ಬಾಲ್, ರಫಿಕ್, ಶಬ್ಬೀರ್, ಖಾಲಿದ್, ಷಾಕಿಲ್ ಮತ್ತು ಅಲ್ತಾಪ್ ವಿರುದ್ಧ ಶ್ರೀಧರ ದೂರು ನೀಡಿದ್ದಾರೆ.
ಎಫ್ಐಆರ್'ನಲ್ಲಿ ಏನಿದೆ?
ಕಳೆದ ಮೇ ತಿಂಗಳಿನಲ್ಲಿ ಶ್ರೀಧರ ಅವರನ್ನು ಬೆಂಗಳೂರಿಗೆ ಕರೆದೊಯ್ದ ಆರೋಪಿಗಳು, ಅಲ್ಲಿನ ಬನಶಂಕರಿಯ ಮಸೀದಿಯೊಂದರಲ್ಲಿ ಬಲವಂತವಾಗಿ ಬಂಧಿಸಿಟ್ಟಿದ್ದರು. ನಂತರ ಅವರಿಗೆ ಮುಸ್ಲಿಂ ಧರ್ಮದ ಬಗ್ಗೆ ನಂಬಿಕೆ ಬರುವಂತೆ ಮಾಡಿ, ಮರ್ಮಾಂಗದ ತುದಿ ಕತ್ತರಿಸಿದ್ದಾರೆ. ದನದ ಮಾಂಸ ತಿನ್ನುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಲ್ಲದೆ, ಮತಾಂತರದ ಬಗ್ಗೆ ಬಾಂಡ್ ಪೇಪರ್'ನಲ್ಲಿ ಸಹಿ ಪಡೆದಿದ್ದಾರೆ. ಅಲ್ಲಿಂದ ತಿರುಪತಿಗೆ ಕರೆದೊಯ್ದು, ಮುಸ್ಲಿಂ ಧರ್ಮದ ಪ್ರಾರ್ಥನೆ ಹಾಗೂ ಇತರ ಪದ್ಧತಿಗಳ ಕುರಿತು ತರಬೇತಿ ನೀಡಿದ್ದಾರೆ.
ಪ್ರತಿವರ್ಷ ಮೂವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಬೇಕೆಂದು ಆರೋಪಿಗಳು ಶ್ರೀಧರ ಅವರಿಗೆ ಬೆದರಿಸಿದ್ದಾರೆ. ಅವರ ಕೈಯ್ಯಲ್ಲಿ ಪಿಸ್ತೂಲ್ ಹಿಡಿಸಿ ಫೋಟೊ ತೆಗೆದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಭಯೋತ್ಪಾದಕನೆಂದು ಬಿಂಬಿಸುವುದಾಗಿ ಹೆದರಿಸಿದ್ದಾರೆ. ನಂತರ ಅವರ ಬ್ಯಾಂಕ್ ಖಾತೆಗೆ ₹35 ಸಾವಿರ ವರ್ಗಾಯಿಸಿ, ತಾವು ಹೇಳಿದಂತೆ ಕೇಳಬೇಕು ಎಂದು ಜೀವ ಬೆದರಿಕೆ ಹಾಕಿದ್ದಾರೆ.
ಶ್ರೀಧರ ಅವರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಸೆ. 21ರಂದು ಹುಬ್ಬಳ್ಳಿಯ ಬೈರಿದೇವರಕೊಪ್ಪಕ್ಕೆ ಬಂದಾಗ, ಅಪರಿಚಿತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕಿಮ್ಸ್'ನಲ್ಲಿ ಚಿಕಿತ್ಸೆ ಪಡೆದ ಅವರು, ಈ ಹಿಂದಿನ ಘಟನೆಯಿಂದ ಬೇಸತ್ತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.