ಹುಬ್ಬಳ್ಳಿ: ಬೆಂಗಳೂರು ನಂತರ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಹೊಂದಿದ್ದ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕಿಸಲು ರಾಜ್ಯ ಸರ್ಕಾರ ಒಪ್ಪಿದೆ. ಕೆಲವೇ ದಿನಗಳಲ್ಲಿ ಎರಡೂ ಪಾಲಿಕೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿವೆ. ಸರ್ಕಾರದ ಈ ತೀರ್ಮಾನ ಹುಬ್ಬಳ್ಳಿ ಪಾಲಿಗೆ ವರವಾಗುವುದೇ ಅಥವಾ ಶಾಪವಾಗುವುದೇ ಎಂಬ ಬಗ್ಗೆ ಜಿಜ್ಞಾಸೆ ಆರಂಭವಾಗಿದೆ.
ಸ್ವಾತಂತ್ರ್ಯನಂತರ ಎರಡೂ ನಗರಗಳ ಪಾಲಿಕೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದವು. 1962ರಲ್ಲಿ ಎರಡನ್ನೂ ಸೇರಿಸಿ, ‘ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ’ ರಚಿಸಲಾಗಿತ್ತು. ಬೃಹತ್ ಮಹಾನಗರ ಪಾಲಿಕೆ ಕಟ್ಟುವ ಉದ್ದೇಶ ಹಾಗೂ ಸರ್ಕಾರದಿಂದ ವಿವಿಧ ಯೋಜನೆಗಳನ್ನು ಪಡೆಯುವುದು, ಹೆಚ್ಚಿನ ಅನುದಾನ ಪಡೆಯುವುದು ಇದರ ಉದ್ದೇಶವಾಗಿತ್ತು. ಅದರಂತೆ ಇಷ್ಟು ವರ್ಷ ರಾಜ್ಯದಲ್ಲಿ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಎರಡನೇ ಅತಿದೊಡ್ಡ ಪಾಲಿಕೆಯಾಗಿ ಗುರುತಿಸಿಕೊಂಡಿತ್ತು. 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಿಗೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ರೂಪಿಸಿದ್ದ ಹಲವು ವಿಶೇಷ ಯೋಜನೆಗಳು ಲಭಿಸಿದ್ದವು. 24/7 ಕುಡಿಯುವ ನೀರು, ಬಿಆರ್‌ಟಿಎಸ್, ಅಮೃತ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಲಾಭ ಅವಳಿ ನಗರದ ಜನತೆಗೆ ಸಿಕ್ಕಿತ್ತು.
ಆರು ದಶಕಗಳ ನಂತರ ಪ್ರತ್ಯೇಕ ಪಾಲಿಕೆ ಬೇಕು ಎಂಬ ಬೇಡಿಕೆಯನ್ನು ಧಾರವಾಡದ ವಿವಿಧ ಸಂಘ–ಸಂಸ್ಥೆಗಳು ಮಂಡಿಸಿದವು. ಹುಬ್ಬಳ್ಳಿಗಿಂತ ಧಾರವಾಡಕ್ಕೆ ಕಡಿಮೆ ಅನುದಾನ ಲಭಿಸುತ್ತಿದೆ, ಮೇಯರ್– ಕಮಿಷನರ್ ವಾರದ ಎಲ್ಲ ದಿನಗಳಲ್ಲೂ ಜನರ ಕೈಗೆ ಸಿಗುವುದಿಲ್ಲ, ಸುಲಲಿತ ಆಡಳಿತಕ್ಕೆ ಪ್ರತ್ಯೇಕ ಪಾಲಿಕೆಯಾಗುವುದೇ ಪರಿಹಾರ ಎಂದು ಸಂಘ–ಸಂಸ್ಥೆಗಳು ವಾದ ಮಂಡನೆ ಮಾಡಿದವು. ಅದಕ್ಕೆ ಸರ್ಕಾರ ಈಗ ಅಸ್ತು ಎಂದಿದೆ. ಧಾರವಾಡ ಪಾಲಿಕೆ ಪ್ರತ್ಯೇಕವಾ ಆಗುವುದರಿಂದ ಹುಬ್ಬಳ್ಳಿ ಪಾಲಿಕೆಗೆ ಒಳ್ಳೆಯದಾಗಲಿದೆ ಎಂದು ಕೆಲವರು ವಾದಿಸಿದರೆ, ಒಳ್ಳೆಯದಾಗಲ್ಲ ಎಂಬ ಅಭಿಪ್ರಾಯ ಕೆಲವರದ್ದು.
ಪ್ರತಿ ಸಲ ಮೇಯರ್– ಉಪಮೇಯರ್ ಆಯ್ಕೆ ಸಂದರ್ಭದಲ್ಲಿ ಎರಡೂ ನಗರಗಳಿಗೆ ಸ್ಥಾನ ಹಂಚಿಕೆ ಮಾಡಲಾಗುತ್ತಿತ್ತು. ಇನ್ಮುಂದೆ ಹೀಗಾಗಲ್ಲ, ಎರಡೂ ಸ್ಥಾನಗಳು ಆಯಾ ನಗರಗಳ ಸದಸ್ಯರಿಗೆ ದೊರೆಯಲಿವೆ. ಜೊತೆಗೆ ಆಯುಕ್ತರು, ಎಂಜಿನಿಯರ್ ಹಾಗೂ ತೆರಿಗೆ ಅಧಿಕಾರಿ ಸೇರಿದಂತೆ ಎಲ್ಲ ಸಿಬ್ಬಂದಿ ಪ್ರತ್ಯೇಕವಾಗಿ ನೇಮಿಸಲಾಗುತ್ತದೆ. ಬಿಗಿ ಆಡಳಿತ ನೀಡಲು ಇದರಿಂದ ಪ್ರಯೋಜನವಾಗಲಿದೆ. ರಾಜಕೀಯವಾಗಿಯೂ ಕೆಲವರಿಗೆ ಸ್ಥಾನ–ಮಾನ ಸಿಗಲಿದೆ.
‘ಹುಬ್ಬಳ್ಳಿ ವ್ಯಾಪ್ತಿಯಲ್ಲಿ 9 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಇದರ ಜೊತೆಗೆ ವಾಣಿಜ್ಯ ಕೇಂದ್ರಗಳು, ಕೈಗಾರಿಕೆಗಳು ಇರುವುದರಿಂದ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತದೆ. ಅಂದಾಜು ₹ 110 ಕೋಟಿಗೂ ಹೆಚ್ಚು ಸಂಗ್ರಹವಾಗುತ್ತದೆ. ಈ ಮೊದಲು ಇದರಲ್ಲಿನ ಒಂದಿಷ್ಟು ಪಾಲು ಧಾರವಾಡ ಅಭಿವೃದ್ಧಿಗೂ ಹೋಗುತ್ತಿತ್ತು. ಈಗ ಪ್ರತ್ಯೇಕ ಆಗಿರುವುದರಿಂದ ಆ ಹಣ ಹುಬ್ಬಳ್ಳಿಯ ವಾರ್ಡ್‌ಗಳ ಅಭಿವೃದ್ಧಿಗೆ ಬಳಕೆಯಾಗಲಿದೆ. ಹುಬ್ಬಳ್ಳಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಪಾಲಿಕೆ ಸದಸ್ಯ ಮಹಮ್ಮದ್ ಇಸ್ಮಾಯಿಲ್ ಭದ್ರಾಪೂರ.
‘ಇನ್ನು ಮುಂದೆ ಸರ್ಕಾರ ಎರಡೂ ನಗರಗಳಿಗೆ ಪ್ರತ್ಯೇಕ ಅನುದಾನ ನೀಡುತ್ತದೆ. ಹೀಗಾಗಿ ಹುಬ್ಬಳ್ಳಿಗೆ ಸಿಗುವ ಅನುದಾನ ಸಂಪೂರ್ಣವಾಗಿ ಹುಬ್ಬಳ್ಳಿಯ ಅಭಿವೃದ್ಧಿಗೆ ಬಳಸಲು ಅವಕಾಶ ಸಿಗಲಿದೆ. ಜನಸಂಖ್ಯೆ ಹಾಗೂ ವಾರ್ಡ್‌ಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸರ್ಕಾರದಿಂದ ಹೆಚ್ಚೆಚ್ಚು ವಿಶೇಷ ಅನುದಾನ ಸಿಗಲಿದೆ’ ಎಂದು ಹೇಳಿದರು.
ಹುಬ್ಬಳ್ಳಿ ಸಮೀಪ ಗೋಕುಲ, ತಾರಿಹಾಳ, ಗಾಮನಗಟ್ಟಿ ಪ್ರದೇಶದಲ್ಲಿ ಮಾತ್ರ ಕೈಗಾರಿಕೆಗಳಿವೆ. ಇನ್ನುಳಿದ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪಿಸಲು ವಿಶಾಲವಾದ ಜಾಗ ಇಲ್ಲ. ಇದೇ ಕಾರಣಕ್ಕಾಗಿ ಧಾರವಾಡ– ಕಿತ್ತೂರು ಮಾರ್ಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಕಳೆದ ಹಲವು ವರ್ಷಗಳಿಂದ ಕ್ರಮಕೈಗೊಳ್ಳಲಾಗುತ್ತಿದೆ. ಇದರ ಲಾಭ ಧಾರವಾಡ ಪಾಲಿಕೆಗೆ ಹೆಚ್ಚು ಸಿಗಲಿದೆ ಎಂದು ಉದ್ಯಮಿ ವಿನಯ ಜವಳಿ ಅಭಿಪ್ರಾಯ ವ್ಯಕ್ತಪಡಿಸಿದರು.
‘ಹುಬ್ಬಳ್ಳಿಯಲ್ಲಿ ಜನಸಂಖ್ಯೆ ಹಾಗೂ ವಾಣಿಜ್ಯ ಆಸ್ತಿಗಳು ಹೆಚ್ಚಾಗಿರುವುದರಿಂದ ಇಲ್ಲಿನ ಪಾಲಿಕೆಗೆ ಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹವಾಗುತ್ತದೆ. ಆರ್ಥಿಕವಾಗಿ ಹೆಚ್ಚು ಸಶಕ್ತವಾಗಿದೆ’ ಎಂದರು.
‘ಎರಡೂ ಪಾಲಿಕೆಗಳು ಸೇರಿಕೊಂಡಿದ್ದರೆ ಮುಂದೊಂದು ದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೃಹನ್ ಮುಂಬೈ ಮಹಾನಗರ ಪಾಲಿಕೆ ಮಾದರಿಯಲ್ಲಿ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿತ್ತು. ಹೆಚ್ಚೆಚ್ಚು ಅನುದಾನ ಪಡೆಯಲು ಸಾಧ್ಯವಿತ್ತು. ಹು–ಧಾ ಮಹಾನಗರ ಪಾಲಿಕೆಯನ್ನು ಯಾವ ಉದ್ದೇಶ ಇಟ್ಟುಕೊಂಡು ಪ್ರತ್ಯೇಕ ಮಾಡಿದರೋ ಗೊತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಇಲ್ಲಿಯವರೆಗೆ ಎರಡೂ ನಗರಗಳು ಒಂದೇ ಎನ್ನುವ ಭಾವದಲ್ಲಿ ಹೈಕೋರ್ಟ್ ಪೀಠ, ಐಐಟಿ, ಐಐಐಟಿ, ವಿಶ್ವವಿದ್ಯಾಲಯಗಳನ್ನು ಧಾರವಾಡದಲ್ಲಿ ಸ್ಥಾಪಿಸಲಾಗಿತ್ತು. ಇದಕ್ಕೆ ಹುಬ್ಬಳ್ಳಿಯವರು ಸಹಕರಿಸಿದ್ದರು. ಆದರೆ, ಇನ್ನು ಮುಂದೆ ಇಂತಹ ಯಾವುದಾದರೂ ಯೋಜನೆಗಳು ಬರುವ ಸಂದರ್ಭದಲ್ಲಿ ಹುಬ್ಬಳ್ಳಿಗೆ ಪ್ರತ್ಯೇಕವಾಗಿ ನೀಡಬೇಕೆನ್ನುವ ಬೇಡಿಕೆ ಮಂಡಿಸಬೇಕಾಗುತ್ತದೆ ಎಂದು ವಕೀಲ ಶ್ರೀಕಾಂತ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
‘ಪ್ರತ್ಯೇಕ ಪಾಲಿಕೆಯಾಗಿರುವುದರಿಂದ ಮೇಯರ್, ಉಪಮೇಯರ್, ಆಯುಕ್ತರ ಹುದ್ದೆಗಳ ಸೃಷ್ಟಿಯಾಗುವುದು ಬಿಟ್ಟರೆ ಇನ್ನೇನೂ ಲಾಭವಿಲ್ಲ. ಹುಬ್ಬಳ್ಳಿಗೆ ಇರುವಷ್ಟು ಆರ್ಥಿಕ ಸಂಪನ್ಮೂಲಗಳು ಧಾರವಾಡದಲ್ಲಿ ಇಲ್ಲ. ಮುಂಬರುವ ದಿನಗಳಲ್ಲಿ ಧಾರವಾಡ ಪಾಲಿಕೆಗೆ ಆರ್ಥಿಕ ಸಂಕಷ್ಟ ಎದುರಾಗಬಹುದು. 10–20ವರ್ಷಗಳ ನಂತರ ಮರಳಿ ಎರಡನ್ನೂ ಸೇರಿಸಿ ಎನ್ನುವ ಬೇಡಿಕೆ ಬರಬಹುದು’ ಎಂದರು.
‘ಜಗತ್ತಿನೆಲ್ಲೆಡೆ ಸಣ್ಣ ಸಣ್ಣ ನಗರಗಳನ್ನು ಒಂದುಗೂಡಿಸಿ ಮೆಗಾಸಿಟಿ ನಿರ್ಮಿಸಲಾಗುತ್ತಿದೆ. ಆದರೆ, ಇಲ್ಲಿ ಮಾತ್ರ ಒಡೆದು ಸಣ್ಣದಾಗಿ ಮಾಡಲಾಗಿದೆ. ಅವಳಿ ನಗರಗಳ ಎರಡೂ ಪಾಲಿಕೆ ಸೇರಿಕೊಂಡಿದ್ದರೆ ಸರ್ಕಾರದಿಂದ ಹೆಚ್ಚಿನ ಲಾಭ ಪಡೆಯಲು ಅನುಕೂಲವಾಗುತ್ತಿತ್ತು’ ಎಂದರು.
‘ಈಗ ಪಾಲಿಕೆ ಪ್ರತ್ಯೇಕ ಮಾಡಿದಂತೆ ಮುಂದೆ ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವನ್ನೂ ಪ್ರತ್ಯೇಕ ಮಾಡಬೇಕೆಂಬ ಬೇಡಿಕೆ ಬರಬಹುದು. ಮುಂದೊಂದು ದಿನ ಹುಬ್ಬಳ್ಳಿಗೆ ಪ್ರತ್ಯೇಕ ಜಿಲ್ಲಾಧಿಕಾರಿ ಕಚೇರಿ, ಪ್ರತ್ಯೇಕ ಜಿಲ್ಲಾ ಸ್ಥಾನಮಾನ ನೀಡಬೇಕೆನ್ನುವ ಬೇಡಿಕೆಯೂ ಬರಬಹುದು’ ಎಂದು ಹೇಳಿದರು.
ಹುಬ್ಬಳ್ಳಿಗೆ ಯಾವುದೇ ತೊಂದರೆಯಾಗಲ್ಲ. ಜನರಿಗೆ ಮೂಲಸೌಕರ್ಯ ನೀಡಲು ಬೇಕಾದ ಆರ್ಥಿಕ ಸಂಪನ್ಮೂಲವನ್ನು ಸ್ಥಳೀಯವಾಗಿ ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತದೆ. ಸರ್ಕಾರದಿಂದಲೂ ಅನುದಾನ ಸಿಗುತ್ತದೆ. ಹಣಕಾಸಿನ ತೊಂದರೆಯಾಗಲ್ಲ. ಇಷ್ಟು ವರ್ಷಗಳ ಕಾಲ ಎರಡೂ ನಗರಗಳು ಕೂಡಿ ಇದ್ದವು. ಈಗ ಬೇರೆಯಾಗುತ್ತಿರುವುದಕ್ಕೆ ಭಾವನಾತ್ಮಕ ನೋವು ಇದೆ.–ರಾಜಣ್ಣ ಕೊರವಿ ಪಾಲಿಕೆ ಸದಸ್ಯ ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ಇದರಲ್ಲಿನ ಒಂದಿಷ್ಟು ಪಾಲನ್ನು ಧಾರವಾಡದ ವಾರ್ಡ್‌ಗಳ ಅಭಿವೃದ್ಧಿಗೆ ಕೊಡುತ್ತಿದ್ದೇವು. ಆ ಹಣ ಈಗ ನಮ್ಮಲ್ಲಿಯೇ ಉಳಿಯುತ್ತದೆ. ಹುಬ್ಬಳ್ಳಿಯ ಅಭಿವೃದ್ಧಿಗೆ ಆ ಹಣ ಬಳಕೆಯಾಗುತ್ತದೆ. ಪ್ರತ್ಯೇಕವಾಗಿರುವುದರಿಂದ ಹುಬ್ಬಳ್ಳಿಗೆ ಲಾಭವಾಗಲಿದೆ.–ಮಹಮ್ಮದ್ ಇಸ್ಮಾಯಿಲ್ ಭದ್ರಾಪೂರ ಪಾಲಿಕೆ ಸದಸ್ಯ ಹುಬ್ಬಳ್ಳಿ
ಧಾರವಾಡ– ಕಿತ್ತೂರು ಮಾರ್ಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಈಗಾಗಲೇ ಸರ್ಕಾರದ ವತಿಯಿಂದ ಸಾಕಷ್ಟು ಕ್ರಮಕೈಗೊಳ್ಳಲಾಗಿದೆ. ಮುಂಬರುವ ವರ್ಷಗಳಲ್ಲಿ ಕೈಗಾರಿಕೆಗಳು ಧಾರವಾಡ ಕಡೆ ಶಿಫ್ಟ್ ಆಗಲಿವೆ. ಆಗ ಹುಬ್ಬಳ್ಳಿ ಪಾಲಿಕೆಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ– ವಿನಯ ಜವಳಿ ಕೈಗಾರಿಕೋದ್ಯಮಿ
ನಾನು 2011–12ನೇ ಸಾಲಿನಲ್ಲಿ ಮೇಯರ್ ಆಗಿದ್ದಾಗ ಪ್ರತ್ಯೇಕ ಪಾಲಿಕೆಗೆ ಧ್ವನಿ ಎತ್ತಿದ್ದೆ. ಅದೀಗ ಫಲ ಕೊಟ್ಟಿದೆ. ಹಣದ ಕೊರತೆ ಆಗಲ್ಲ. ಸ್ಥಳೀಯ ಸಂಪನ್ಮೂಲ ಇದೆ. ಸರ್ಕಾರದಿಂದ ಪ್ರತ್ಯೇಕವಾಗಿ ಅನುದಾನ ಸಿಗುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ಪ್ರತ್ಯೇಕ ಪಾಲಿಕೆ ಆಗಿರುವುದರಿಂದ ಧಾರವಾಡಕ್ಕೆ ಒಳ್ಳೆಯ ಭವಿಷ್ಯ ಇದೆ.– ಪಾಂಡುರಂಗ ಪಾಟೀಲ ಮಾಜಿ ಮೇಯರ್
ಹುಬ್ಬಳ್ಳಿ– ಧಾರವಾಡ ಎರಡೂ ಪಾಲಿಕೆಗಳು ಪ್ರತ್ಯೇಕಗೊಂಡಿರುವುದರಿಂದ ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಹುಡಾ) ತೊಂದರೆಯಾಗುವುದಿಲ್ಲ. ಎಂದಿನಂತೆ ಕಾರ್ಯ ಚಟುವಟಿಕೆಗಳು ಮುಂದುವರಿಯುತ್ತವೆ.– ಶಾಕೀರ ಸನದಿ ಅಧ್ಯಕ್ಷ ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.