ADVERTISEMENT

ಕ್ರಿಕೆಟ್‌: ಸೆಮಿಫೈನಲ್‌ಗೆ ಬಿಡಿಕೆ, ತೇಜಲ್‌

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 16:27 IST
Last Updated 6 ನವೆಂಬರ್ 2020, 16:27 IST
ಆದಿತ್ಯ ಉಮ್ರಾಣಿ, ಅನ್ಮೋಲ್‌ ಪಾಗಡ್‌
ಆದಿತ್ಯ ಉಮ್ರಾಣಿ, ಅನ್ಮೋಲ್‌ ಪಾಗಡ್‌   

ಹುಬ್ಬಳ್ಳಿ: ತೇಜಲ್‌ ಶಿರಗುಪ್ಪಿ ಕ್ರಿಕೆಟ್‌ ಅಕಾಡೆಮಿ ಮತ್ತು ಬಿಡಿಕೆ ಕೋಲ್ಟ್ಸ್‌ ತಂಡಗಳು 14 ವರ್ಷದ ಒಳಗಿನವರಿಗೆ ನಡೆಯುತ್ತಿರುವ ‘ಲೀಲಾವತಿ ಪ್ಯಾಲೇಸ್‌ ಕಪ್‌’ ಅಂತರ ಕ್ಯಾಂಪ್‌ಗಳ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿವೆ.

ಶನಿವಾರ ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ಉಭಯ ತಂಡಗಳು ಪೈಪೋಟಿ ನಡೆಸಲಿವೆ. ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಚಾಂಪಿಯನ್ಸ್‌ ನೆಟ್‌ ಕ್ರಿಕೆಟ್‌ ಕೋಚಿಂಗ್‌ ಸೆಂಟರ್‌ ಮತ್ತು ಧಾರವಾಡದ ಫಸ್ಟ್‌ ಕ್ರಿಕೆಟ್‌ ಅಕಾಡೆಮಿ ಮುಖಾಮುಖಿಯಾಗಲಿವೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಫಸ್ಟ್‌ ಕ್ರಿಕೆಟ್ ಅಕಾಡೆಮಿ 29.1 ಓವರ್‌ಗಳಲ್ಲಿ 116 ರನ್ ಗಳಿಸಿತ್ತು. ಎದುರಾಳಿ ತೇಜಲ್‌ ಅಕಾಡೆಮಿ 29.5 ಓವರ್‌ಗಳಲ್ಲಿ 95 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹಿಂದಿನ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿದ್ದರಿಂದ ತೇಜಲ್‌ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತು.

ADVERTISEMENT

ದಿನದ ಇನ್ನೊಂದು ಪಂದ್ಯದಲ್ಲಿ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿ ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡಿ 30 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 147 ರನ್‌ ಕಲೆಹಾಕಿತು. ಎದುರಾಳಿ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ತಂಡ 20.4 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು. ಎರಡು ವಿಕೆಟ್‌ ಪಡೆದು, 64 ರನ್‌ ಬಾರಿಸಿದ ಆದಿತ್ಯ ಉಮ್ರಾಣಿ ಮತ್ತು ಅನ್ಮೋಲ್‌ ಪಾಗಡ್‌ (63 ರನ್‌) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗುರುವಾರ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ಕೋಲ್ಟ್ಸ್‌ ತಂಡ ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ವಿರುದ್ಧ 43 ರನ್‌ಗಳ ಗೆಲುವು ಸಾಧಿಸಿತು. ಕೋಲ್ಟ್‌ ತಂಡ ನೀಡಿದ್ದ 100 ರನ್‌ಗೆ ಗುರಿಯಾಗಿ ದುರ್ಗಾ ತಂಡ 56 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಚಾಂಪಿಯನ್ಸ್ ನೆಟ್‌ 20.4 ಓವರ್‌ಗಳಲ್ಲಿ 52 ರನ್‌ ಗಳಿಸಿತ್ತು. ಸುಲಭವಾದ ಗುರಿಯನ್ನು ಬಿಡಿಕೆ ಕೋಲ್ಟ್ಸ್‌ ತಂಡ 6.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.