ಹುಬ್ಬಳ್ಳಿ: ಬೀಡಾಡಿ ದನಗಳ ಸ್ಥಳಾಂತರದ ಟೆಂಡರ್ ಪ್ರಕ್ರಿಯೆ ಕುರಿತು ಆರ್‌ಟಿಐ ಅಡಿ ಮಾಹಿತಿ ಕೇಳಿದ್ದಕ್ಕೆ, ಕೋಪಗೊಂಡ ಇಬ್ಬರು, ವಕೀಲ ಚಂದ್ರಕಾಂತ ಜಡಿ ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ.
ಈ ಬಗ್ಗೆ ಕಾಶಪ್ಪ ಬಿಜವಾಡ ಮತ್ತು ಮಂಜುಳಾ ಬಿಜವಾಡ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋರ್ಟ್‌ನಲ್ಲಿ ಬಾಕಿಯಿರುವ ಅಪರಾಧ ಪ್ರಕರಣದ ವಕಾಲತ್ತು ವಹಿಸಿದ್ದಕ್ಕೆ ಮತ್ತು ಬೀಡಾಡಿ ದಿನಗಳ ಸ್ಥಳಾಂತರದ ಟೆಂಡರ್ ಪ್ರಕ್ರಿಯೆ ಕುರಿತು ಆರ್‌ಟಿಐ ಅಡಿ ಮಾಹಿತಿ ಕೇಳಿದ್ದಕ್ಕೆ ಆರೋಪಿಗಳು ಕೋಪಗೊಂಡಿದ್ದರು. ಶಾಂತಿನಿಕೇತನ ಕಾಲೊನಿಯ ಒಂದನೇ ಕ್ರಾಸ್ ಬಳಿ ಆರೋಪಿಗಳು ಎದೆಗೆ ಒದ್ದು, ಕೈಗಳನ್ನು ತಿರುವಿ, ಮಧ್ಯದ ಬೆರಳಿಗೆ ಗಾಯಪಡಿಸಿದ್ದಾರೆ. ಕೈಕಡಗದಿಂದ ತಲೆಗೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದು ಅಲ್ಲದೆ ಕೊಲೆಗೆ ಯತ್ನಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ವಂಚನೆ: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ನಡೆಸಿ ಕೊನೆಗೆ ಬೇರೆ ಯುವತಿಯ ಜೊತೆ ಮದುವೆಯಾದ ಗೋಪನಕೊಪ್ಪದ ಮಂಜು ಬಾರಕೇರ ಸೇರಿ ಆತನ ಕುಟುಂಬದ 11 ಮಂದಿ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಮುಸ್ಲಿಂ ಸಮುದಾಯದವರಾಗಿದ್ದು, ಯುವಕನಿಗೆ 2023ರ ಆಗಸ್ಟ್‌ನಿಂದ ಪರಿಚಯವಾಗಿದ್ದರು. ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿದ್ದ ಆತ, ಅವರ ಜೊತೆ ದೈಹಿಕ ಸಂಪರ್ಕ ನಡೆಸಿದ್ದ. ನಂತರ ಬೇರೆ ಯುವತಿಯ ಜೊತೆ ಮದುವೆಯಾದ ವಿಷಯ ತಿಳಿದು, ಅವನ ಮನೆಗೆ ಹೋಗಿ ವಿಚಾರಿಸಿದ್ದಾರೆ. ಆಗ ಮಂಜುನಾಥ ಸೇರಿ ಕುಟುಂಬದವರು ಯುವತಿ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತ, ಸಾವು: ತಾಲ್ಲೂಕಿನ ಅಂಚಟಗೇರಿ ಗ್ರಾಮದ ಪಂಜಾಬಿ ಡಾಬಾ ಬಳಿ ಎರಡು ಬೈಕ್‌ಗಳ ಮಧ್ಯೆ ಅಪಘಾತ ಸಂಭವಿಸಿ, ಗಂಭೀರ ಗಾಯಗೊಂಡಿದ್ದ ಸವಾರರೊಬ್ಬರು ಮೃತಪಟ್ಟಿದ್ದಾರೆ.
ಚನ್ನಾಪುರ ಗ್ರಾಮದ ಕಿರಣ ನಡೂರ (24) ಮೃತಪಟ್ಟವರು. ಅಖೀಲ ಶಿಂದೇಕರ ಅವರು ಕಲಘಟಗಿಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾಗ, ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಕಿರಣ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನು ಕೆಎಂಸಿ–ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧನ: ಇಲ್ಲಿನ ಅಮರಗೋಳದ ಎಪಿಎಂಸಿ ಆವರಣದಲ್ಲಿ ಮೊಬೈಲ್ ಫೋನ್ ಕಳವು ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ನವನಗರ ಠಾಣೆ ಪೊಲೀಸರು ಬಂಧಿಸಿ, ₹3 ಲಕ್ಷ ಮೌಲ್ಯದ 20 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ನಾಗರಾಜ ಚೌಡಪ್ಪನವರ ಮತ್ತು ಮಹಾಂತೇಶ ಭೂವಿವಡ್ಡರ ಬಂಧಿತರು. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.