ADVERTISEMENT

ಮಳೆಯಿಂದಲೇ ಬೆಳೆ ಹಾಳಾಯ್ತು!

ಉಣಕಲ್‌ ಗ್ರಾಮದ ರೈತರ ಮನೆಯೂ ಹೋಯ್ತು, ಬೆಳೆಯೂ ಹೋಯ್ತು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 10:10 IST
Last Updated 13 ಆಗಸ್ಟ್ 2019, 10:10 IST
ಅತಿಯಾದ ಮಳೆಯಿಂದ ಉಣಕಲ್‌ ಗ್ರಾಮದ ಹೊಲದಲ್ಲಿ ನೀರು ನಿಂತು, ಅಲಸಂದೆ ಬೆಳೆ ಹಾನಿಯಾಗಿದೆ
ಅತಿಯಾದ ಮಳೆಯಿಂದ ಉಣಕಲ್‌ ಗ್ರಾಮದ ಹೊಲದಲ್ಲಿ ನೀರು ನಿಂತು, ಅಲಸಂದೆ ಬೆಳೆ ಹಾನಿಯಾಗಿದೆ   

ಹುಬ್ಬಳ್ಳಿ: ‘ಹೋದ ವರ್ಷ ಮಳೆಯಿಲ್ಲದೆ ಹಿಂಗಾರು ಬೆಳೆ ಹಾಳಾಗಿತ್ತು. ಈ ವರ್ಷ ಮಳೆಯಿಂದಾಗಿ ಮುಂಗಾರು ಬೆಳೆ ಹಾಳಾಯ್ತು. ಮಳೆ ಬಂದರೂ ಕಷ್ಟ, ಬರದಿದ್ದರೂ ಕಷ್ಟ ಎನ್ನುವಂತಾಗಿದೆ’

ಇದು ಹುಬ್ಬಳ್ಳಿಯ ಉಣಕಲ್‌ ಗ್ರಾಮದ ನೂರಾರು ರೈತರ ನೋವಿನ ಮಾತು. ಹಿಂಗಾರು, ಮುಂಗಾರು ಬೆಳೆ ಉತ್ತಮವಾಗಿ ಬಂದರೆ ಮಾತ್ರ ಇವರ ಬದುಕು ಹಸನಾಗುತ್ತದೆ. ಆದರೆ, ಇತ್ತೀಚಿನ ಐದಾರು ವರ್ಷಗಳಿಂದ ಆವರಿಸಿದ ಬರದಿಂದ ರೈತರೆಲ್ಲ ಕಂಗೆಟ್ಟು ಹೋಗಿದ್ದರು. ಪ್ರಸ್ತುತ ಮುಂಗಾರಿನಲ್ಲಿ ಶೇಂಗಾ, ಉದ್ದು, ಸೋಯಾಬಿನ್‌, ಮೆಣಸು, ಅಲಸಂದೆ ಹಾಕಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಅತಿವೃಷ್ಟಿಯಿಂದಾಗಿ ಬೆಳೆಗಳೆಲ್ಲ ಕೊಳೆತು ಹೋಗಿವೆ.

ರೈತ ಚನ್ನಬಸಪ್ಪ ಮಲ್ಲಕಾಜಿ ಎಂಬವರು, ಹತ್ತು ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಅದರಲ್ಲಿ ಆರು ಎಕರೆ ಸ್ವಂತ ಕೃಷಿ ಮಾಡಿ, ನಾಲ್ಕು ಎಕರೆಯನ್ನು ಗೇಣಿಗೆ ನೀಡಿದ್ದಾರೆ. ಹೆಸರು, ಶೇಂಗಾ, ಸೋಯಾಬಿನ್‌ ಹಾಗೂ ಮೆಣಸು ಹಾಕಿದ್ದರು. ಮುಂಗಾರು ಉತ್ತಮವಾಗುವ ಲಕ್ಷಣ ಕಂಡು ಬಂದಿದ್ದರಿಂದ, ಬ್ಯಾಂಕಿನಲ್ಲಿ ಸಾಲ ಮಾಡಿ ಗೊಬ್ಬರ, ಬೀಜ ಖರೀದಿಸಿದ್ದರು. ಆದರೆ, ಮಳೆಯಿಂದಾಗಿ ಅವರ ಸಾಲದ ಹೊರೆ ಮತ್ತಷ್ಟು ಹೆಚ್ಚಾಗಿದೆ.

ADVERTISEMENT

‘ಐದು ವರ್ಷಗಳಿಂದ ಮುಂಗಾರು ಹಾಗೂ ಹಿಂಗಾರು ಬೆಳೆ ಕೈ ಕೊಡುತ್ತಲೇ ಇವೆ. ಪ್ರತಿ ವರ್ಷ ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸುತ್ತೇನೆ. ಬೀಜ ಮೊಳಕೆ ಒಡೆದು ದೊಡ್ಡದಾಗಿ ಇನ್ನೇನು ಪೀಕು ಕೈಗೆ ಬರುತ್ತದೆ ಎನ್ನುವ ಹಂತದಲ್ಲಿ ನೀರಿಲ್ಲದೆ ಎಲ್ಲವೂ ಕಮರಿ ಹೋಗುತ್ತವೆ. ಆದರೆ, ಈ ವರ್ಷದ ನೀರು ಹೆಚ್ಚಾಗಿ ಹಾಳಾಗಿವೆ. ಮುಂದೆ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ’ ಎಂದು ಚನ್ನಬಸಪ್ಪ ನೊಂದು ಹೇಳಿದರು.

‘ಬಡ ರೈತ. ನಾಲ್ಕೈದು ಎಕರೆಯಲ್ಲಿ ಕುಟುಂಬ ನಿರ್ವಹಣೆ ಮಾಡುತ್ತ, ಮಗನಿಗೆ ಡಿಗ್ರಿವರೆಗೆ ಓದಿಸಿದ್ದೇನೆ. ನೌಕರಿ ವಿಷಯಕ್ಕೆ ಬಂದಾಗ ಲಂಚ ಕೇಳುತ್ತಾರೆ. ಲಂಚ ಕೊಡುವಷ್ಟು ಸಾಮರ್ಥ್ಯವಿಲ್ಲ. ನನ್ನ ಜತೆ ಅವನೂ ಹೊಲದಲ್ಲಿ ದುಡಿಯುತ್ತಿದ್ದಾನೆ. ಆದರೆ, ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಹೊಲವು ಸಹ ಅದೃಷ್ಟದ ಆಟಕ್ಕೆ ಮುಂದಾಗಿದೆ’ ಎನ್ನುವಾಗ ರೈತ ನೀಲಪ್ಪ ದಳವಾಯಿ ಅವರ ಕಣ್ಣು ಹನಿಯೊಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.