ADVERTISEMENT

‘ಮನುಷ್ಯನ ಅಸೂಯೆಗೆ ಸಾಹಿತ್ಯ ಮದ್ದು’

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 14:37 IST
Last Updated 4 ಆಗಸ್ಟ್ 2019, 14:37 IST
ಹುಬ್ಬಳ್ಳಿಯಲ್ಲಿ ಭಾನುವಾರ ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದ ವತಿಯಿಂದ ಡಾ. ಕೆ.ಕುಮಾರ್‌ ಅವರನ್ನು ಸನ್ಮಾನಿಸಲಾಯಿತು
ಹುಬ್ಬಳ್ಳಿಯಲ್ಲಿ ಭಾನುವಾರ ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದ ವತಿಯಿಂದ ಡಾ. ಕೆ.ಕುಮಾರ್‌ ಅವರನ್ನು ಸನ್ಮಾನಿಸಲಾಯಿತು   

ಹುಬ್ಬಳ್ಳಿ: ಸಾಹಿತ್ಯ, ಸಂಗೀತ, ಕಲೆ, ರಂಗಭೂಮಿ ಮನುಷ್ಯನಲ್ಲಿರುವ ಅಸೂಯೆಗೆ ಮದ್ದು ಎಂದು ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.

ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಭಾನುವಾರ ಮಹಾರಾಷ್ಟ್ರ ಮರಾಠ ಮಂಡಳದಲ್ಲಿ ಏರ್ಪಡಿಸಿದ ಸಮರ್ಪಣಾ ಗುರುವಂದನೆ ಹಾಗೂ ‘ಸಖಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಆಧುನಿಕ ಯುಗದಲ್ಲಿ ಪಾಲಕರು ಮಕ್ಕಳಿಗೆ ಶಾಲೆಯಲ್ಲಿ ಮೊದಲ ಸ್ಥಾನವನ್ನೇ ಪಡೆಯಬೇಕೆಂದು ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಅಸೂಯೆ, ದ್ವೇಷ ಬಿತ್ತಿದ ಹಾಗೆ ಆಗುತ್ತಿದೆ. ಇದರ ಬದಲು ಸಾಹಿತ್ಯ ಓದುವುದನ್ನು ಕಲಿಸಿ, ಶಾಸ್ತ್ರೀಯ ನೃತ್ಯದಲ್ಲಿ ತೊಡಗುವಂತೆ ಮಾಡಿ, ರಂಗಭೂಮಿಯ ಆಸಕ್ತಿ ಬೆಳೆಸಿ. ಇದು ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸುತ್ತದೆ’ ಎಂದರು.

ADVERTISEMENT

ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲಾ ಕಾಲೇಜಿನ ನೃತ್ಯ ವಿಭಾಗದ ಮುಖ್ಯಸ್ಥ ಡಾ. ಕೆ. ಕುಮಾರ್‌ ಮಾತನಾಡಿ ‘ನಾಟ್ಯಶಾಸ್ತ್ರ ವಿಶ್ವಕೋಶವಿದ್ದಂತೆ. 18 ಸಂಸ್ಕೃತದ ಪುರಾಣಗಳನ್ನು ನಾಟ್ಯಶಾಸ್ತ್ರದೊಂದಿಗೆ ತುಲನಾತ್ಮಕವಾಗಿ ಅಧ್ಯಯನ ಮಾಡುವುದು ಕಷ್ಟಸಾಧ್ಯವಾದ್ದದ್ದು. ಅದನ್ನು ಡಾ. ಸಹನಾ ಭಟ್ಟ ಅವರು ಮಾಡಿದ್ದಾರೆ. ನನ್ನ ಮಾರ್ಗದರ್ಶನದಲ್ಲಿ ಪಿಎಚ್‌.ಡಿ ಪಡೆದ ಮೊದಲ ವಿದ್ಯಾರ್ಥಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಈಗ ಗುರುವನ್ನು ಕೃತಜ್ಞಾ ಭಾವದಿಂದ ಕಾಣುವವರು ಕಡಿಮೆಯಾಗಿದ್ದಾರೆ. ಅಂತದ್ದರಲ್ಲಿ ನನ್ನನ್ನು ಮೈಸೂರಿನಿಂದ ಇಲ್ಲಿಗೆ ಕರೆಸಿ ಗುರುವಂದನೆ ಸಲ್ಲಿಸಿದ್ದು ಹೆಮ್ಮೆಯ ಸಂಗತಿ’ ಎಂದರು.

ಬರಹಗಾರ ಪ್ರದೀಪ ಭಟ್ಟ ರಚಿಸಿದ ‘ಸಖಿ’ ಕೃತಿಯ ಪ್ರತಿಯನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿದರು. ಕಲಾ ಕೇಂದ್ರದ ಸಂಸ್ಥಾಪಕಿ ಸಹನಾ ಭಟ್, ಪ್ರದೀಪ ಭಟ್ಟ ಮತ್ತು ರಾಘವೇಂದ್ರ ರಾಮದುರ್ಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.