ADVERTISEMENT

ಅಪ್ಪ, ಬೇಗ ವಾಪಸ್‌ ಬಂದುಬಿಡಿ: ಅಪ್ಪನನ್ನು ಕಳೆದುಕೊಂಡ ಹೆಣ್ಣುಮಕ್ಕಳ ನೋವಿನ ನುಡಿ

ಪ್ರಮೋದ
Published 13 ಜೂನ್ 2021, 3:41 IST
Last Updated 13 ಜೂನ್ 2021, 3:41 IST
ಮೃತ ಪತಿ ಮಂಜುನಾಥ ವೈಕುಂಠೆ ಜೊತೆ ಪತ್ನಿ ಪೂರ್ಣಿಮಾ, ಪುತ್ರಿಯರಾದ ವೈಷ್ಣವಿ, ಧನಶ್ರೀ
ಮೃತ ಪತಿ ಮಂಜುನಾಥ ವೈಕುಂಠೆ ಜೊತೆ ಪತ್ನಿ ಪೂರ್ಣಿಮಾ, ಪುತ್ರಿಯರಾದ ವೈಷ್ಣವಿ, ಧನಶ್ರೀ   

ಹುಬ್ಬಳ್ಳಿ: ‘ಅಪ್ಪ ಅಂದ್ರೆ ತುಂಬಾ ಪ್ರೀತಿ. ಎಷ್ಟೇ ಕೆಲಸವಿರಲಿ; ನಮ್ಮನ್ನು ಶಾಲೆಗೆ, ಹೊರಗಡೆ ಕರೆದೊಯ್ಯುತ್ತಿದ್ದರು. ಕೇಳಿದ್ದನ್ನು ಯಾವತ್ತೂ ಇಲ್ಲ ಎನ್ನುತ್ತಿರಲಿಲ್ಲ. ಈಗ ನಮಗೆ ಅಪ್ಪ ಬಿಟ್ಟು ಬೇರೆ ಏನೂ ಬೇಡ. ಅಪ್ಪ ಬೇಗ ವಾಪಸ್‌ ಬಂದುಬಿಡಿ...’

ಧಾರವಾಡದಲ್ಲಿ ಐದನೇ ತರಗತಿ ಓದುತ್ತಿರುವ ವೈಷ್ಣವಿ ಹೀಗೆ ಅಪ್ಪನನ್ನು ನೆನಪಿಸಿಕೊಂಡು ಕಣ್ಣೀರು ತಡೆಯಲಾಗದೆ ಜೋರಾಗಿ ಅಳುತ್ತಾ ‘ನಂಗೆ ಅಪ್ಪ ಬೇಕು’ ಎಂದು ದುಃಖಿತಳಾದಳು.

ವೈಷ್ಣವಿ ತಂದೆ ಮಂಜುನಾಥ ವೈಕುಂಠೆ ಕೋವಿಡ್‌ನಿಂದಾಗಿ ಮೇ ನಲ್ಲಿ ತೀರಿಕೊಂದಿದ್ದಾರೆ. ಅವರಿಗೆ ಪತ್ನಿ ಪೂರ್ಣಿಮಾ, 12 ವರ್ಷದ ಮಗಳು ವೈಷ್ಣವಿ, 10 ವರ್ಷದ ಮಗಳು ಧನಶ್ರೀ ಇದ್ದಾರೆ.

ADVERTISEMENT

ಖಾಸಗಿ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆಯ ಮೊತ್ತ ₹6.85 ಲಕ್ಷ ಆಗಿದೆ. ನವನಗರ ಸಮೀಪದ ಪಂಚಾಕ್ಷರಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬಕ್ಕೆ ಮಂಜುನಾಥ ಅವರೇ ಆಸರೆಯಾಗಿದ್ದರು. ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ, ಪತ್ನಿಗೆ ಹೊರಗಿನ ಯಾವ ಕೆಲಸ ಹೇಳದೆ ಎಲ್ಲವನ್ನೂ ತಾವೇ ನಿಭಾಯಿಸುತ್ತಿದ್ದರು. ಪೂರ್ಣಿಮಾ ಅವರಿಗೆ ಮನೆ ಹಾಗೂ ಮಕ್ಕಳಷ್ಟೇ ಜಗತ್ತು.

ಮಂಜುನಾಥ ಎಲ್‌ಐಸಿ ಎಜೆಂಟ್‌ ಆಗಿದ್ದರು. ಈಗ ಮನೆಯ ಯಜಮಾನನೇ ಇಲ್ಲವಾದ್ದರಿಂದ ಅವರ ಬದುಕಿನ ಬಂಡಿ ಸಾಗುವುದು ಕಷ್ಟವಾಗಿದೆ. ಮಕ್ಕಳಿಗೆ ತಂದೆಯ ಪ್ರೀತಿಯ ಕೊರತೆ ಕಾಡುತ್ತಿದೆ. ಇದು ವೈಷ್ಣವಿ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು.

‘ಪುಟ್ಟಾ ನಂಗೇನೂ ಆಗುವುದಿಲ್ಲ; ಒಂದೆರೆಡು ದಿನಗಳಲ್ಲಿ ಅರಾಮವಾಗಿ ಬರುತ್ತೇನೆ ಎಂದು ಅಪ್ಪ ಹೇಳಿದ್ದರು. ಹೇಳದೆ ಹೋಗಿ ಬಿಟ್ಟಿರಲ್ಲ ಅಪ್ಪಾ. ಕೊಟ್ಟ ಮಾತು ತಪ್ಪಬೇಡಿ. ಬೇಗ ಬನ್ನಿ’ ಎನ್ನುವಾಗ ವೈಷ್ಣವಿ ಅಳು ಜೋರಾಗಿತ್ತು.

‘ಮಕ್ಕಳೆಂದರೆ ಅವರಪ್ಪನಿಗೆ ಪಂಚಪ್ರಾಣ. ಕೋವಿಡ್‌ ಕಾರಣದಿಂದ ಮಕ್ಕಳನ್ನು ಒಂದೂ ದಿನ ಮನೆಯಿಂದ ಹೊರಗೆ ಕಳುಹಿಸಿರಲಿಲ್ಲ. ಮನೆಯ ಎಲ್ಲ ಜವಾಬ್ದಾರಿ ಅವರೇ ನೋಡಿಕೊಳ್ಳುತ್ತಿದ್ದರಿಂದ ಹೊರಗಿನ ಜಗತ್ತು ನನಗೆ ಹೆಚ್ಚು ಪರಿಚಯವಲ್ಲ. ತವರು ಹಾಗೂ ಗಂಡನ ಮನೆ ಎರಡೂ ಕಡೆ ಸ್ಥಿತಿವಂತರಲ್ಲ. ಐದು ಜನ ಸಹೋದರಿಯರು. ಅವರೆಲ್ಲರ ಬೆಂಬಲವೊಂದೇ ಬದುಕಿಗೆ ಆಸರೆ’ ಎಂದು ಭಾವುಕರಾದರು ಪೂರ್ಣಿಮಾ ವೈಕುಂಠೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.