ಪ್ರಾತಿನಿಧಿಕ (ಸಂಗ್ರಹ ಚಿತ್ರ)
ಹುಬ್ಬಳ್ಳಿ: ‘ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಗಸ್ಟ್ 15 ಮತ್ತು 16ರಂದು ಇಲ್ಲಿನ ಗೋಕುಲ ರಸ್ತೆಯ ಚೈತನ್ಯ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಕ್ಯಾರಕಟ್ಟಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 15ರಂದು ಮಧ್ಯರಾತ್ರಿ 12 ಗಂಟೆಗೆ ಬಾಲಕೃಷ್ಣನ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.
ಆಗಸ್ಟ್ 16ರಂದು ಗೋಕುಲ ರಸ್ತೆ ಅಕ್ಷಯ ಪಾರ್ಕ್‌ನ ಸಂತೆ ಮೈದಾನದಲ್ಲಿ ಮಧ್ಯಾಹ್ನ 12ಕ್ಕೆ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ ನಡೆಯಲಿದೆ. ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪರ್ಧೆಗೆ ಚಾಲನೆ ನೀಡುವರು. ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್.ಪಾಟೀಲ, ಮೇಯರ್ ಜ್ಯೋತಿ ಪಾಟೀಲ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 9.45ಕ್ಕೆ ವರಸಿದ್ಧಿ ವಿನಾಯಕ ದೇವಸ್ಥಾನದಿಂದ ಅಕ್ಷಯ ಪಾರ್ಕ್ ಸಂತೆ ಮೈದಾನದವರೆಗೆ ಮೊಸರು ಗಡಿಗೆಗಳ ಮೆರವಣಿಗೆ ನಡೆಯಲಿದ್ದು, ವಿವಿಧ ಮಹಿಳಾ ಮಂಡಳಗಳ ಸದಸ್ಯೆಯರು, ಕೃಷ್ಣ, ರಾಧೆಯರ ವೇಷ ಧರಿಸಿದ 600ಕ್ಕೂ ಹೆಚ್ಚು ಮಕ್ಕಳು, ವಿವಿಧ ಕಲಾತಂಡಗಳು ಭಾಗವಹಿಸಲಿವೆ. 15ನೇ ವರ್ಷದ ಕಾರ್ಯಕ್ರಮ ಇದಾಗಿದ್ದು, ಕೃಷ್ಣ, ರಾಧೆಯರ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು ಎಂದು ಹೇಳಿದರು.
ಮೊಸರು ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ₹50 ಸಾವಿರ ಬಹುಮಾನ ನೀಡಲಾಗುವುದು. ಈಗಾಗಲೇ ಆರು ತಂಡಗಳು ಹೆಸರು ನೋಂದಾಯಿಸಿವೆ. ಆಸಕ್ತ ತಂಡಗಳು ಮೊ: 94481 10146, 78489 48530 ಸಂಖ್ಯೆಗಳಿಗೆ ಕರೆ ಮಾಡಿ ಆಗಸ್ಟ್ 15ರ ಒಳಗೆ ಹೆಸರು ನೋಂದಾಯಿಸಬೇಕು ಎಂದು ತಿಳಿಸಿದರು.
ಅಜಯ್ ಭರಾಡೆ, ಸುಧೀರ್ ಹೊಸಮನಿ, ಕಿರಣ ಭರಾಡೆ, ಗುರುನಾಥ ಮುರಗೋಡ, ಶಂಕರಾಚಾರ್ಯ ಪುರೋಹಿತ, ಕೃಷ್ಣ ಗಂಡಗಾಳೇಕರ, ವಿರೂಪಾಕ್ಷ ಹಿರೇಮಠ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.