ಧಾರವಾಡ: ‘ನಾಮದೇವ ಡಸಾಳ್, ಪವಾರ್ ಹಾಗೂ ರಾಜಾ ಈ ಮೂವರು ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್ ಚಳವಳಿ ಪ್ರಾರಂಭಿಸಿದರು. ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಕಟ್ಟಿದ ಸಾಮಾಜಿಕ, ರಾಜಕೀಯ, ಆರ್ಥಿಕ ಚಳವಳಿ ಇದು’ ಎಂದು ಹೋರಾಟಗಾರ ಸಿದ್ದನಗೌಡ ಪಾಟೀಲ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಬುಧವಾರ ನಡೆದ ‘ದಲಿತ ಪ್ಯಾಂಥರ್ಸ್’ (ಕನ್ನಡ ಅನುವಾದ) ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
‘ದಲಿತ ಪ್ಯಾಂಥರ್ಸ್’ ರಾಜಕೀಯ ಸಂಘಟನೆಯಾಗಿತ್ತು, ರಾಜಕೀಯ ಪಕ್ಷವಾಗಿರಲಿಲ್ಲ. ಶೋಷಣೆಯ ವಿರುದ್ಧ ಹೋರಾಟದ ಧ್ವನಿಯಾಗಿತ್ತು. ಈ ಚಳವಳಿ ಮಧ್ಯಪ್ರದೇಶ, ದೆಹಲಿ, ಕರ್ನಾಟಕ ಸಹಿತ ವಿವಿಧೆಡೆಗಳಲ್ಲಿ ಪ್ರಭಾವ ಬೀರಿತು. ದೌರ್ಜನ್ಯಗಳನ್ನು ಪ್ರತಿರೋಧಿಸುವ ಮಾದರಿಗಳನ್ನು ನೀಡಿದ, ಒಂದು ಜನಾಂಗದ ಕಣ್ಣು ತೆರೆಸಿದ ಚಳವಳಿ ಇದು ಎಂದರು.
‘ಈ ಚಳವಳಿ ಇದ್ದದ್ದು ಐದು ವರ್ಷ ಮಾತ್ರ. ಅಷ್ಟರಲ್ಲಿ ಬಹಳಷ್ಟು ತಲ್ಲಣ ಉಂಟು ಮಾಡಿತು. ದಲಿತ ಪ್ಯಾಂಥರ್ಸ್‌ನಿಂದ ದಲಿತರ ಮೇಲಿನ ದೌರ್ಜನ್ಯಗಳು ಕಡಿಮೆಯಾದವು. ಚಳವಳಿ ಕಟ್ಟಿದ ಮೂವರ ನಂತರದ (1982) ತಲೆಮಾರಿನವರ ಮೇಲೆ ದೊಡ್ಡ ಪ್ರಭಾವ ಬೀರಿತು’ ಎಂದರು.
ಜೆ.ವಿ.ಪವಾರ್ ಅವರ ‘ದಲಿತ ಪ್ಯಾಂಥರ್ಸ್’ ಕೃತಿಯನ್ನು ಲೇಖಕ ಸದಾಶಿವ ಮಿರ್ಜಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಎಲ್ಲರೂ ಓದಬೇಕು. ಈ ಚಳವಳಿಯ ಕುರಿತು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಭಾಷಾಂತರ ಇಲಾಖೆ ನಿರ್ದೇಶಕ ಎಂ.ವೆಂಕಟೇಶ ಮಾತನಾಡಿ, ‘ಭಾರತೀಯ ಪರಂಪರೆಯೇ ಚಳವಳಿಗಳ ಪರಂಪರೆ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರು ಚಳವಳಿಗಳ ಇತಿಹಾಸದ ಕಣ್ಣಗಳು’ ಎಂದರು.
ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಪುಸ್ತಕ ವಿವರ ಕೃತಿ: ದಲಿತ ಪ್ಯಾಂಥರ್ಸ್ ಕೃತಿಕಾರ: ಜೆ.ವಿ.ಪವಾರ್ ಅನುವಾದ: ಸದಾಶಿವ ಮಿರ್ಜಿ ಪ್ರಕಾಶನ: ಕ್ರಿಯಾ ಮಾಧ್ಯಮ ಬೆಂಗಳೂರು ಪುಟ:332 ಬೆಲೆ: ₹ 370
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.