ADVERTISEMENT

ಹುಬ್ಬಳ್ಳಿ | ನೃತ್ಯಾಭ್ಯಾಸ ವ್ಯಕ್ತಿತ್ವ ಬೆಳವಣಿಗೆಗೆ ಪೂರಕ;ಅಂಜನಾ ಬಸನಗೌಡರ

ಮಯೂರ ನೃತ್ಯ ಅಕಾಡೆಮಿಯಿಂದ ಗೆಜ್ಜೆಪೂಜೆ: ಅಂಜನಾ ಬಸನಗೌಡರ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 6:48 IST
Last Updated 27 ಜನವರಿ 2026, 6:48 IST
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಮಯೂರ ನೃತ್ಯ ಅಕಾಡೆಮಿಯಿಂದ ಸೋಮವಾರ ಏರ್ಪಡಿಸಿದ್ದ ಭರತನಾಟ್ಯ ‘ಗೆಜ್ಜೆಪೂಜೆ’ ಕಾರ್ಯಕ್ರಮದಲ್ಲಿ ಇಸ್ಕಾನ್‌ ಹುಬ್ಬಳ್ಳಿ ಘಟಕದ ಮುಖ್ಯಸ್ಥ ರಾಜೀವ ಲೋಚನದಾಸ್‌ ಮಾತನಾಡಿದರು
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ಮಯೂರ ನೃತ್ಯ ಅಕಾಡೆಮಿಯಿಂದ ಸೋಮವಾರ ಏರ್ಪಡಿಸಿದ್ದ ಭರತನಾಟ್ಯ ‘ಗೆಜ್ಜೆಪೂಜೆ’ ಕಾರ್ಯಕ್ರಮದಲ್ಲಿ ಇಸ್ಕಾನ್‌ ಹುಬ್ಬಳ್ಳಿ ಘಟಕದ ಮುಖ್ಯಸ್ಥ ರಾಜೀವ ಲೋಚನದಾಸ್‌ ಮಾತನಾಡಿದರು   

ಹುಬ್ಬಳ್ಳಿ: ‘ಭಾರತದಲ್ಲಿ ನೃತ್ಯಕ್ಕೆ ದೈವೀಸ್ವರೂಪ ನೀಡಲಾಗಿದೆ. ಮಕ್ಕಳು ಉತ್ತಮವಾದ ವ್ಯಕ್ತಿತ್ವ ಬೆಳೆಸಿಕೊಳ್ಳಲು ನೃತ್ಯಾಭ್ಯಾಸವೂ ಪೂರಕ’ ಎಂದು ಹುಬ್ಬಳ್ಳಿ ಸೆಂಟ್ರಲ್ ರೋಟರಿ ಕ್ಲಬ್‌ ಅಧ್ಯಕ್ಷೆ ಅಂಜನಾ ಬಸನಗೌಡರ ಹೇಳಿದರು.

ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಮಯೂರ ನೃತ್ಯ ಅಕಾಡೆಮಿಯಿಂದ ಸೋಮವಾರ ಏರ್ಪಡಿಸಿದ್ದ ಭರತನಾಟ್ಯ ‘ಗೆಜ್ಜೆಪೂಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೃತ್ಯದ ನಿರಂತರ ಅಭ್ಯಾಸದಿಂದ ಮಕ್ಕಳು ಸಂಸ್ಕೃತ ಕಲಿಯುವುದಕ್ಕೂ ಅವಕಾಶವಾಗುತ್ತದೆ. ದೇಹ, ಭಾವ ಹಾಗೂ ಮನಸ್ಸನ್ನು ಒಂದಾಗಿಸುವ ನೃತ್ಯದಿಂದಾಗಿ ಕ್ರಮೇಣ ಮಕ್ಕಳು ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುತ್ತಾರೆ’ ಎಂದರು.

ADVERTISEMENT

ಆರ್ಯನ್ ವರ್ಲ್ಡ್ ಸ್ಕೂಲ್ ಪ್ರಾಂಶುಪಾಲೆ ಪಂಕಜಾ ಗಂಗಾವತಿಕರ ಮಾತನಾಡಿ, ‘ಇಂದಿನ ದಿನಗಳಲ್ಲಿ ಮಕ್ಕಳಿಗೆ ಎಲ್ಲವೂ ಸಿದ್ಧರೂಪದಲ್ಲಿ ಸಿಗುತ್ತಿದೆ. ಹೀಗಾಗಿ ಮಕ್ಕಳಿಗೆ ಕಷ್ಟ, ಸುಖ, ದುಃಖ ಇತ್ಯಾದಿ ಭಾವನೆಗಳನ್ನು ಅರ್ಥ ಮಾಡಿಸುವುದಕ್ಕೆ ಪಾಲಕರು ಮತ್ತು ಶಿಕ್ಷಕರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಮಕ್ಕಳು ಯಾವುದಾದರೂ ಕಲಾಪ್ರಕಾರದಲ್ಲಿ ತೊಡಗಿಸಿಕೊಂಡರೆ, ಖಂಡಿತವಾಗಿಯೂ ಉತ್ತಮ ಜೀವನ ರೂಪಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಗರಿಷ್ಠ ಅಂಕಗಳು ಮತ್ತು ಗರಿಷ್ಠ ವೇತನ ಪಡೆದರೆ ಸಾಕಾಗುವುದಿಲ್ಲ. ಜೀವನದಲ್ಲಿ ನೆಮ್ಮದಿ ಕಾಣುವುದಕ್ಕೆ ಭಾವನೆಗಳು ಇರಬೇಕಾಗುತ್ತದೆ’ ಎಂದರು.

ಪಾಲಿಕೆ ಸದಸ್ಯ ವೀರಣ್ಣ ಸವಡಿ ಮಾತನಾಡಿ, ‘ಹುಬ್ಬಳ್ಳಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸವಾಯಿ ಗಂಧರ್ವ ಸಭಾಂಗಣವನ್ನು ನಾನು ಮೇಯರ್‌ ಆಗಿದ್ದ ಅವಧಿಯಲ್ಲಿ ಎಲ್ಲರೂ ಕೂಡಿ ಅಭಿವೃದ್ಧಿ ಮಾಡಲಾಗಿದೆ. ಮಯೂರ ನೃತ್ಯ ಅಕಾಡೆಮಿ ಸೇರಿದಂತೆ ಭರತನಾಟ್ಯ ತರಬೇತಿ ನೀಡುತ್ತಿರುವ ಹುಬ್ಬಳ್ಳಿಯ ಸಂಸ್ಥೆಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ’ ಎಂದರು.

ಇಸ್ಕಾನ್‌ ಹುಬ್ಬಳ್ಳಿ ಘಟಕದ ಮುಖ್ಯಸ್ಥ ರಾಜೀವ ಲೋಚನದಾಸ್, ವಿದುಷಿ ಸಹನಾ ಅಭಿನವ ಶೆಟ್ಟಿ, ವಿದುಷಿ ಹೇಮಾ ವಾಗ್ಮೊಡೆ ಹಾಗೂ ಜಿಲ್ಲಾ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ರಜತ ಉಳ್ಳಾಗಡ್ಡಿಮಠ ಮಾತನಾಡಿದರು.

ಅಕಾಡೆಮಿ ವಿದ್ಯಾರ್ಥಿನಿಯರಾದ ಜಾನ್ವಿ ವಿ. ಉಂಡಿ, ಮಾನ್ಯ ಎಸ್‌. ಕುಲಕರ್ಣಿ, ಶ್ರೀನಿಕಾ ಎಂ. ಹಸನಬಾದಿ, ಜೀವಿಕಾ ಅಂಗಡಿ, ಶ್ರೀಯಾ ಎಂ. ಚವ್ಹಾಣ ಅವರು ಏಳು ಪ್ರಕಾರದ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿ ಮೆಚ್ಚುಗೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.