ADVERTISEMENT

ತರಬೇತಿ ಅವಧಿ ಕಡಿತಕ್ಕೆ ನಿರ್ಧಾರ

ಜಿಮ್‌ಗಳನ್ನು ತೆರೆಯಲು ಇಂದಿನಿಂದ ಅವಕಾಶ, ನಗರದಲ್ಲಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 15:37 IST
Last Updated 4 ಆಗಸ್ಟ್ 2020, 15:37 IST
ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಜಿಮ್‌ನಲ್ಲಿ ಮಂಗಳವಾರ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು
ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಜಿಮ್‌ನಲ್ಲಿ ಮಂಗಳವಾರ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು   

ಹುಬ್ಬಳ್ಳಿ: ಲಾಕ್‌ಡೌನ್‌ ಭಾಗವಾಗಿ ಘೋಷಿಸಲಾಗಿದ್ದ ಜಿಮ್‌ಗಳ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ ತಗೆದು ಹಾಕಿದ್ದು, ಪುನರಾರಂಭಿಸಲು ನಗರದ ಜಿಮ್‌ಗಳ ಮಾಲೀಕರು ಸಿದ್ಧತೆ ನಡೆಸಿದ್ದಾರೆ. ತರಬೇತಿಯ ಅವಧಿಯನ್ನೂ ಕಡಿಮೆ ಮಾಡಲು ನಿರ್ಧರಿಸಿದ್ದಾರೆ.

ಒಂದೇ ಜಾಗದಲ್ಲಿ ಹೆಚ್ಚು ಜನ ಸೇರಿದರೆ ಕೊರೊನಾ ಸೋಂಕು ಹರಡುವ ಅಪಾಯವಿರುತ್ತದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಜಿಮ್‌ಗಳ ಬಳಕೆಗೆ ನಿರ್ಬಂಧ ವಿಧಿಸಿತ್ತು. ಈಗ ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ತೆರೆಯಲು ಅನುಮತಿ ಕೊಟ್ಟಿದೆ. ನಾಲ್ಕು ತಿಂಗಳು ನಯಾಪೈಸೆಯೂ ದುಡಿಯಿಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಜಿಮ್‌ಗಳ ಮಾಲೀಕರು ಈಗ ಸ್ವಲ್ಪ ನಿರಾಳರಾಗಿದ್ದಾರೆ.

ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಜಿಮ್‌ಗಳಿದ್ದು, ಬಹಳಷ್ಟು ಜಿಮ್‌ಗಳ ಮಾಲೀಕರು ಒಂದೆರೆಡು ದಿನ ಬಿಟ್ಟು ತೆರೆಯಲು ತೀರ್ಮಾನಿಸಿದ್ದಾರೆ. ಕೆಲ ಜಿಮ್‌ನವರು ಬುಧವಾರದಿಂದಲೇ ಆರಂಭಿಸಿ ಸಾಧಕ, ಬಾಧಕಗಳನ್ನು ನೋಡಿಕೊಂಡ ಬಳಿಕ ಉಳಿದ ಜಿಮ್‌ನವರು ಆರಂಭಕ್ಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ADVERTISEMENT

ಶಿರೂರು ಪಾರ್ಕ್‌ನಲ್ಲಿರುವ ಶ್ಯಾಡು ಜಿಮ್‌ ಯುನಿಸೆಕ್ಸ್‌ ಫಿಟ್‌ನೆಸ್‌ ಸ್ಟುಡಿಯೊದ ನಿರ್ವಾಹಕ ಕಿರಣ ಹೊನ್ನಳ್ಳಿ ಈ ಕುರಿತು ಪ್ರತಿಕ್ರಿಯಿಸಿ ‘ಸರ್ಕಾರ ಸೂಚಿಸಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ. ಮೊದಲಾದರೆ ಒಂದು ಗಂಟೆಗೆ ಕನಿಷ್ಠ 20 ಜನ ತರಬೇತಿಗೆ ಬರುತ್ತಿದ್ದರು. ಈಗ 10 ಜನರಿಗಷ್ಟೇ ಅವಕಾಶ ಕೊಡಲಾಗುವುದು. ಒಬ್ಬ ವ್ಯಕ್ತಿಯ ತರಬೇತಿ ಮುಗಿದ ಬಳಿಕ ಸ್ಯಾನಿಟೈಸ್ ಮಾಡಿದ ಮೇಲಷ್ಟೇ ಇನ್ನೊಬ್ಬರಿಗೆ ನೀಡಲಾಗುವುದು. ಇದಕ್ಕೆ ಕನಿಷ್ಠ 15 ನಿಮಿಷ ಬೇಕಾಗುತ್ತದೆ’ ಎಂದರು. ಇವರು ಗುರುವಾರದಿಂದ ಜಿಮ್‌ ಆರಂಭಿಸಲು ನಿರ್ಧರಿಸಿದ್ದಾರೆ.

ವಿದ್ಯಾನಗರದಲ್ಲಿರುವ ಐ ಫಿಟ್‌ನೆಸ್‌ನ ವ್ಯವಸ್ಥಾಪಕ ಶಫಿ ‘ಜಿಮ್‌ಗೆ ಬರುವವರ ಆರೋಗ್ಯ ತಪಾಸಣೆ ಮಾಡಿ ಮೊದಲು ಅವರಿಗೆ ಕೌನ್ಸಿಲಿಂಗ್‌ ಮಾಡಲಾಗುವುದು. ಇಷ್ಟು ದಿನ ಜಿಮ್ ಮುಚ್ಚಿದ್ದರಿಂದ ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ. ಇದನ್ನು ಸರಿದೂಗಿಸಲು ಬೆಲೆ ಹೆಚ್ಚಿಸುವುದು ಅನಿವಾರ್ಯ. ಸಮಯ ಕಡಿತವನ್ನೂ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.