ADVERTISEMENT

ಸಮ್ಮೇದಗಿರಿ ಪ್ರವಾಸಿ ತಾಣ ಘೋಷಣೆ ರದ್ದುಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 12:50 IST
Last Updated 28 ಡಿಸೆಂಬರ್ 2022, 12:50 IST
ಜೈನರ ಪವಿತ್ರ ಕ್ಷೇತ್ರವಾದ ಜಾರ್ಖಂಡ್‌ನ ಸಮ್ಮೇದಗಿರಿಯನ್ನು ಪ್ರವಾಸಿ ತಾಣವನ್ನಾಗಿ ಘೋಷಿಸಿರುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ, ಹುಬ್ಬಳ್ಳಿಯ ದಿಗಂಬರ ಜೈನ ಸಮಾಜ ಸಂಘದವರು ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು
ಜೈನರ ಪವಿತ್ರ ಕ್ಷೇತ್ರವಾದ ಜಾರ್ಖಂಡ್‌ನ ಸಮ್ಮೇದಗಿರಿಯನ್ನು ಪ್ರವಾಸಿ ತಾಣವನ್ನಾಗಿ ಘೋಷಿಸಿರುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ, ಹುಬ್ಬಳ್ಳಿಯ ದಿಗಂಬರ ಜೈನ ಸಮಾಜ ಸಂಘದವರು ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಜೈನರ ಪವಿತ್ರ ಕ್ಷೇತ್ರವಾದ ಸಮ್ಮೇದಗಿರಿಯನ್ನು (ಪಾರಸನಾಥ ಪರ್ವತ) ಪ್ರವಾಸಿ ತಾಣವನ್ನಾಗಿ ಘೋಷಿಸಿರುವ ನಿರ್ಧಾರವನ್ನು ಜಾರ್ಖಂಡ್ ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು. ಸಮುದಾಯದ ಪವಿತ್ರ ಕ್ಷೇತ್ರವನ್ನು ರಕ್ಷಿಸಬೇಕು ಎಂದು ಆಗ್ರಹಿಸಿ, ದಿಗಂಬರ ಜೈನ ಸಮಾಜದ ಸಂಘದವರು ನಗರದಲ್ಲಿ ಬುಧವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಹಾವೀರ ಗಲ್ಲಿಯ ಶಾಂತಿನಾಥ ಭವನದಿಂದ ಹೊರಟ ಮೆರವಣಿಗೆಯು, ದುರ್ಗದ ಬೈಲ್, ಬ್ರಾಡ್‌ ವೇ, ಕೊಪ್ಪಿಕರ ರಸ್ತೆ, ಸರ್ ಸಿದ್ದಪ್ಪ ಕಂಬಳಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಚನ್ನಮ್ಮ ವೃತ್ತ ಹಾದು ಮಿನಿ ವಿಧಾನಸೌಧ ತಲುಪಿತು. ಮುನಿಗಳು, ಮುಖಂಡರು ಹಾಗೂ ಮಹಿಳಾ ಸಮಾಜದವರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಸಮ್ಮೇದಗಿರಿಯು ಜೈನ ತೀರ್ಥಗಳ ರಾಜ ಎಂದೇ ಹೆಸರುವಾಸಿಯಾಗಿದ್ದು, ಪರಮೋಚ್ಚ ಪವಿತ್ರ ಸ್ಥಳವಾಗಿದೆ. ನಾವು ಆರಾಧಿಸುವ 24 ತೀರ್ಥಂಕರರಲ್ಲಿ 20 ತೀರ್ಥಂಕರರು ಹಾಗೂ ಹಲವಾರು ಮುನಿಗಳು ಇದೇ ಕ್ಷೇತ್ರದಲ್ಲಿ ಮೋಕ್ಷ ಪಡೆದಿದ್ದಾರೆ. ವಿಶ್ವದಾದ್ಯಂತ ಜೈನರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳವನ್ನು ಪ್ರವಾಸಿ ತಾಣವಾಗಿ ಘೋಷಿಸಿರುವ ಅಲ್ಲಿನ ಸರ್ಕಾರ, ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಕೂಡಲೇ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ರಾಜೇಂದ್ರ ಬೀಳಗಿ, ಉಪಾಧ್ಯಕ್ಷ ವಿಮಲ ತಾಳಿಕೋಟಿ, ಮುಖಂಡರಾದ ಮಹೇಂದ್ರ ಸಿಂಘಿ, ಆರ್.ಟಿ. ತವನಪ್ಪನವರ, ವಿನೋದ ಕಾಳೆಗುಡ್ಡಿ, ಅನಿಲ ಬೀಳಗಿ, ಧರಣೇಂದ್ರ ಜವಳಿ, ಬಿ.ಟಿ. ರಾಜಮಾನೆ, ಬಿ.ಎ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.