
ಹುಬ್ಬಳ್ಳಿ: ‘ಭಾರತದ ಅಸ್ಮಿತೆಯು ಯುವಜನರ ಕೈಯಲ್ಲಿ ಇದೆ. ಹೆಚ್ಚು ಜ್ಞಾನ ಬೆಳೆಸಿಕೊಂಡು ಸ್ಪರ್ಧಾತ್ಮಕ ಯುಗದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವಂತೆ ಮಾಡಬೇಕು’ ಎಂದು ನಗರ ತಹಶೀಲ್ದಾರ್ ಮಹೇಶ ಗಸ್ತೆ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಹುಬ್ಬಳ್ಳಿ ನಗರ ತಾಲ್ಲೂಕು ಗಣರಾಜ್ಯೋತ್ಸವ ಸಮಿತಿ ವತಿಯಿಂದ ಸೋಮವಾರ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ‘ಸಂವಿಧಾನದ ಆಶೋತ್ತರ ಗೌರವಿಸುವ, ಪ್ರಜಾಪ್ರಭುತ್ವ ರಕ್ಷಿಸುವ ಕರ್ತವ್ಯ ಎಲ್ಲರ ಮೇಲಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ, ‘ಇಂದು ಕೆಲವರು ಸಂವಿಧಾನದ ಪ್ರತಿಯನ್ನು ಕೈಯಲ್ಲಿಟ್ಟುಕೊಂಡು ಅದಕ್ಕೆ ಅಪಮಾನ ಬಗೆಯುವ ಕಾರ್ಯ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನದಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನರೇಗಾ ಯೋಜನೆ ಬದಲಿಸಿ ವಿಬಿ ಜಿ ರಾಮ್ ಜಿ ಯೋಜನೆ ಮೂಲಕ ಬಡವರಿಗೆ ಉದ್ಯೋಗ ಕಲ್ಪಿಸುವ, ಹಲವು ಸುಧಾರಣೆ ತರುವ ಕಾರ್ಯ ಮಾಡಿದ್ದಾರೆ’ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ‘ಜಾತಿ, ಧರ್ಮದ ಹೆಸರಲ್ಲಿ ಅನ್ಯ ಧರ್ಮದವರನ್ನು ದ್ವೇಷಿಸದೆ ಗೌರವಿಸುವಂತಾಗಬೇಕು ಎಂಬುದು ಸಂವಿಧಾನದ ಆಶಯ. ಆದರೆ, ಕೆಲವು ಮನುವಾದಿಗಳು ಸಂವಿಧಾನ ತೆಗೆದು ಮನುಸ್ಮೃತಿಯೇ ನಮ್ಮ ಸಂವಿಧಾನ ಎಂಬಂತೆ ಬಿಂಬಿಸುತ್ತಿದ್ದಾರೆ. ಮಕ್ಕಳಲ್ಲಿ ಜಾತಿ ಎಂಬ ವಿಷಬೀಜ ಬಿತ್ತುವ ಕಾರ್ಯವಾಗುತ್ತಿದೆ’ ಎಂದರು.
ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರ ಹಾಗೂ ಪರಿಸರ ಜಾಗೃತಿ ಸಾರುವ ವೇಷಭೂಷಣ ಧರಿಸಿ ಗಮನ ಸೆಳೆದರು. ವಿವಿಧ ಕ್ಷೇತ್ರಗಳ ಸಾಧಕರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ, ಗ್ರೇಡ್– 2 ತಹಶೀಲ್ದಾರ್ ಶಿವಾನಂದ ಹೆಬ್ಬಳ್ಳಿ, ಅಧಿಕಾರಿಗಳು, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಕೇಂದ್ರ ಸರ್ಕಾರವು ಮನರೇಗಾ ಯೋಜನೆ ಹೆಸರು ಬದಲಾಯಿಸಿ ವಿಬಿ ಜಿ ರಾಮ್ ಜಿ ಯೋಜನೆ ಮೂಲಕ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವಂತೆ ಮಾಡಿದೆ
– ಪ್ರಸಾದ ಅಬ್ಬಯ್ಯ ಶಾಸಕ
‘ಅಭಿವೃದ್ಧಿ ಕಾರ್ಯಕ್ಕೆ ಪಾಲಿಕೆ ಒತ್ತು’
ಹುಬ್ಬಳ್ಳಿ: ಗಣರಾಜ್ಯೋತ್ಸವ ಅಂಗವಾಗಿ ನಗರದ ರಾಣಿ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಹು–ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಧ್ವಜಾರೋಹಣ ನೆರವೇರಿಸಿದರು. ‘ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಲ್ಲಿ ₹152.5 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ₹1207 ಕೋಟಿ ಅನುದಾನದಲ್ಲಿ 24/7 ನೀರು ಪೂರೈಕೆ ಕಾಮಗಾರಿ ಪ್ರಗತಿಯಲ್ಲಿದೆ. ನಗರದಲ್ಲಿ ಹೊಸದಾಗಿ 77 ಸಾವಿರ ಬೀದಿದೀಪ ಅಳವಡಿಸಲಾಗುವುದು. ಬೀದಿ ನಾಯಿಗಳ ನಿಯಂತ್ರಣ ಉತ್ತಮ ರಸ್ತೆ ಚರಂಡಿ ಒಳಚರಂಡಿ ಸೇರಿದಂತೆ ನಗರ ಸುಂದರಗೊಳಿಸಲು ವಿವಿಧ ಯೋಜನೆ ಕೈಗೊಳ್ಳಲಾಗಿದೆ’ ಎಂದರು. ಶಾಸಕ ಮಹೇಶ ಟೆಂಗಿನಕಾಯಿ ಮೇಯರ್ ಜ್ಯೋತಿ ಪಾಟೀಲ ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ ಮೀನಾಕ್ಷಿ ವಂಟಮುರಿ ಶೀಲಾ ಕಾಟಕರ್ ಚಂದ್ರಿಕಾ ಮೇಸ್ತ್ರಿ ಪೂಜಾ ಶೇಜವಾಡ್ಕರ್ ಪ್ರೀತಿ ಲದವಾ ಗೀತಾ ಹೊಸಮನಿ ಅಕ್ಷತಾ ಅಸುಂಡಿ ಪಾಲಿಕೆ ಅಧಿಕಾರಿಗಳಾದ ವಿಜಯಕುಮಾರ ಉಮೇಶ ಹೊಸಮನಿ ಇದ್ದರು.
‘ಬೆಣ್ಣೆಹಳ್ಳ ಪ್ರವಾಹ ತಡೆ ಯೋಜನೆಗೆ ಫೆ.8ರಂದು ಚಾಲನೆ’
ಹುಬ್ಬಳ್ಳಿ: ‘ಜನರಿಗೆ ಉತ್ತಮ ಸೇವೆ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಫೆ.8ರಂದು ಬೆಣ್ಣೆ ಹಳ್ಳ ಪ್ರವಾಹ ತಡೆ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಅಂದಾಜು ₹350 ಕೋಟಿ ವೆಚ್ಚದ ಕಾಮಗಾರಿ ಇದಾಗಲಿದೆ’ ಎಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು. ಇಲ್ಲಿನ ತಾಲ್ಲೂಕು ಆಡಳಿತ ಸೌಧದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಜೆ.ಬಿ. ಮಜ್ಜಗಿ ಮಾತನಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ತಾ.ಪಂ. ಕಚೇರಿಯಲ್ಲಿ ಆಚರಣೆ: ಇಲ್ಲಿನ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸಿಇಒ ರಾಮಚಂದ್ರ ಹೊಸಮನಿ ಧ್ವಜಾರೋಹಣ ನೆರವೇರಿಸಿದರು. ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚಂದ್ರಶೇಖರ ಕುರ್ತಕೋಟಿ ಯೋಜನಾಧಿಕಾರಿ ಸಿ.ಆರ್. ಕೌಜಗೇರಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನಾಗರತ್ನಾ ಕ್ಯಾಸನೂರ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಸಂಗಮೇಶ ಬಂಗಾರಿಮಠ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.