ADVERTISEMENT

ಹೊಸ ನಿಯಮ ಬಂದರೂ ಹಳೆ ದಂಡ!

ಜಾರಿಯಾಗದ ನೂತನ ಮೋಟಾರ್‌ ಕಾಯ್ದೆ

ನಾಗರಾಜ್ ಬಿ.ಎನ್‌.
Published 8 ಸೆಪ್ಟೆಂಬರ್ 2019, 20:33 IST
Last Updated 8 ಸೆಪ್ಟೆಂಬರ್ 2019, 20:33 IST
ಸಂಚಾರ ನಿಯಮ ಉಲ್ಲಂಘನೆ ಮಾಡಿದ ದ್ವಿಚಕ್ರ ವಾಹನ ಸವಾರರಿಂದ ಪೊಲೀಸರು ದಂಡ ಪಾವತಿಸಿಕೊಳ್ಳುತ್ತಿರುವ ಚಿತ್ರಣ
ಸಂಚಾರ ನಿಯಮ ಉಲ್ಲಂಘನೆ ಮಾಡಿದ ದ್ವಿಚಕ್ರ ವಾಹನ ಸವಾರರಿಂದ ಪೊಲೀಸರು ದಂಡ ಪಾವತಿಸಿಕೊಳ್ಳುತ್ತಿರುವ ಚಿತ್ರಣ   

ಹುಬ್ಬಳ್ಳಿ:ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆ ಅವಳಿನಗರದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ.

ಕುಡಿದು ವಾಹನ ಚಾಲನೆ ಮಾಡಿರುವ ಪ್ರಕರಣಕ್ಕೆ ಮಾತ್ರ ಸಂಚಾರ ಪೊಲೀಸರು ನೋಟಿಸ್‌ ನೀಡಿ, ಕೋರ್ಟ್‌ನಲ್ಲಿ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ ಉಳಿದಯಾವ ಹೊಸ ನಿಯಮಗಳೂ ಜಾರಿಯಾಗಿಲ್ಲ.

ಸೆಪ್ಟೆಂಬರ್‌ 1ರಿಂದ ದೇಶದಾದ್ಯಂತಹೊಸ ಕಾಯ್ದೆ ಜಾರಿಗೆ ಬಂದಿದ್ದು, ಸೆ. 5ರಂದುರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ADVERTISEMENT

ಸಂಚಾರ ಪೊಲೀಸರು ಬಳಕೆ ಮಾಡುವ ಬ್ಲಾಕ್‌ಬೆರಿ ಯಂತ್ರದಲ್ಲಿ ಹಳೆಯ ನಿಯಮಗಳೇ ಇರುವುದರಿಂದ, ಹೊಸ ದಂಡದ ನಿಯಮ ಜಾರಿಗೆ ತಂದಿಲ್ಲ.ಅಲ್ಲದೆ, ಗಣೇಶ ವಿಸರ್ಜನೆ ಮತ್ತು ಮೊಹರಂ ಇರುವುದರಿಂದಹೆಚ್ಚಿನ ಪೊಲೀಸರು ಭದ್ರತಾ ಕೆಲಸದಲ್ಲಿ ತೊಡಗಿದ್ದಾರೆ.

‘ಸಂಚಾರ ಪೊಲೀಸರು ಬಳಸುವ ಬ್ಲಾಕ್‌ಬೆರಿ ಯಂತ್ರದಲ್ಲಿ ನೋ ಪಾರ್ಕಿಂಗ್‌ ಹಾಗೂ ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಾಲನೆಗೆ ಇದ್ದ ₹100 ದಂಡವನ್ನು ₹1,000ಕ್ಕೆ ಹೆಚ್ಚಿಸಲಾಗಿದೆ. ಇದನ್ನುಮಾತ್ರ ಬದಲಾಯಿಸುವ ಅವಕಾಶ ಆ ಯಂತ್ರದಲ್ಲಿದೆ. ಹೊಸ ಸಾಫ್ಟ್‌ವೇರ್‌ ಅಳವಡಿಸಿದ ಬಳಿಕವೇ ದಂಡ ವಿಧಿಸುವ ಹೊಸ ನಿಯಮ ಜಾರಿಗೆ ತರಬೇಕಿದೆ. ಇದಕ್ಕೆ 15 ದಿನ ಸಮಯ ಬೇಕು.ಅಲ್ಲಿವರೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದುಅಪರಾಧ ಮತ್ತು ಸಂಚಾರಿ ವಿಭಾಗದ ಡಿಸಿಪಿ ಶಿವಕುಮಾರ ಗುಣಾರೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸ ನಿಯಮಗಳ ಪ್ರಕಾರ, ಕುಡಿದು ವಾಹನ ಚಲಾಯಿಸುವವರ ವಿರುದ್ಧ ಅಂದಾಜು ಅವಳಿ ನಗರದ ವ್ಯಾಪ್ತಿಯಲ್ಲಿ15 ರಿಂದ 20 ಪ್ರಕರಣ ದಾಖಲಾಗಿವೆ. ಅವರಿಗೆ ಸ್ಥಳದಲ್ಲಿಯೇ ನೊಟಿಸ್‌ ನೀಡಿ ಕೋರ್ಟ್‌ನಲ್ಲಿ ದಂಡ ತುಂಬಲು ಸೂಚಿಸುತ್ತೇವೆ.ಉಳಿದ ಸಂಚಾರ ನಿಯಮ ಉಲ್ಲಂಘನೆಗೆ ಹಳೇ ನಿಯಮದ ಪ್ರಕಾರವೇ ದಂಡ ಕಟ್ಟಿಸಿಕೊಳ್ಳಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.