ADVERTISEMENT

ಚಿರತೆ ಪತ್ತೆ; ಸೆರೆಗೆ ಕಾರ್ಯಾಚರಣೆ

ಕೇಂದ್ರೀಯ ವಿದ್ಯಾಲಯದ ಹಿಂಭಾಗ ಶನಿವಾರ ರಾತ್ರಿ ಅರಣ್ಯ ಸಿಬ್ಬಂದಿ ಮೊಬೈಲ್‌ನಲ್ಲಿ ದಾಖಲು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 3:52 IST
Last Updated 19 ಸೆಪ್ಟೆಂಬರ್ 2021, 3:52 IST
ಹುಬ್ಬಳ್ಳಿ ನೃಪತುಂಗ ಬೆಟ್ಟದ ಬಳಿ ಬೋನಿನಲ್ಲಿ ನಾಯಿ ಇಟ್ಟು ಚಿರತೆ ಸೆರೆಗೆ ಮುಂದಾಗಿರುವ ಅರಣ್ಯ ಇಲಾಖೆ
ಹುಬ್ಬಳ್ಳಿ ನೃಪತುಂಗ ಬೆಟ್ಟದ ಬಳಿ ಬೋನಿನಲ್ಲಿ ನಾಯಿ ಇಟ್ಟು ಚಿರತೆ ಸೆರೆಗೆ ಮುಂದಾಗಿರುವ ಅರಣ್ಯ ಇಲಾಖೆ   

ಹುಬ್ಬಳ್ಳಿ: ನೃಪತುಂಗ ಬೆಟ್ಟದ ಬಳಿ ಚಿರತೆ ಕಾಣಿಸಿಕೊಂಡಿದೆ ಎನ್ನುವ ಮೂರು ದಿನಗಳ ವದಂತಿಗೆ ತೆರೆಬಿದ್ದಿದೆ. ಶನಿವಾರ ರಾತ್ರಿ 7.30ರ ಸುಮಾರಿಗೆ ರಾಜನಗರದ ಕೇಂದ್ರೀಯ ವಿದ್ಯಾಲಯದ ಹಿಂಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರದಲ್ಲಿ ಚಿರತೆ ಇರುವುದು ದೃಢಪಟ್ಟಿದೆ.

ಚಿರತೆ ಸೆರೆಗೆ ಬೆಟ್ಟದ ಬಳಿ ಕಪ್ಪತಗುಡ್ಡದಿಂದ ತಂದಿರುವ ಎರಡು ಬೋನ್‌ಗಳನ್ನು ಇಡಲಾಗಿದೆ. ಒಂದು ಬೋನ್‌ನಲ್ಲಿ ನಾಯಿಯನ್ನು ಇಟ್ಟು ಬಲೆಗೆ ತಂತ್ರ ಹೆಣೆದಿದ್ದಾರೆ. ಅಲ್ಲದೆ, ಚಿರತೆ ಚಲನವಲನ ಸಂಗ್ರಹಿಸಲು ಬೆಟ್ಟದ ಕಡಿದಾದ ಜಾಗದಲ್ಲಿರುವ ಎರಡು ಮರಗಳಿಗೆ ಕ್ಯಾಮೆರಾ ಅಳವಡಿಸಲಾಗಿದೆ. ಶುಕ್ರವಾರ ಸುಮಾರು 150ಕ್ಕೂ ಹೆಚ್ಚು ನವಿಲುಗಳು ಓಡಾಡಿರುವುದು ಆ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಗದುಗಿನಿಂದ ಬಂದಿರುವ ಅರವಳಿಕೆ ತಜ್ಞ ಅನಿಲ ಅವರು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.

ಮೂರು ದಿನಗಳಿಂದ ಬೆಟ್ಟದ ಮೇಲಿರುವ ವಾಚ್‌ ಟವರ್‌ನಿಂದ ಸಿಬ್ಬಂದಿ ನಿರಂತರವಾಗಿ ಬೈನಾಕ್ಯುಲರ್‌ನಿಂದ ಚಿರತೆ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು. ಎರಡು ಬಾರಿ ಬೆಟ್ಟದ ಮೇಲಿನಿಂದ ಡ್ರೋನ್‌ ಕ್ಯಾಮೆರಾ ಹಾರಿಸಿ ಶೋಧ ಕಾರ್ಯ ನಡೆಸಿದ್ದರು.

ADVERTISEMENT

ಶನಿವಾರ ರಾತ್ರಿ ಗಸ್ತಿನಲ್ಲಿದ್ದಾಗ ಸಿಬ್ಬಂದಿ ಕ್ಯಾಮೆರಾದಲ್ಲಿ ಚಿರತೆ ಇರುವುದು ಖಚಿತವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಇಲಾಖೆ, ಬೆಟ್ಟದ ಸುತ್ತಮುತ್ತಲಿನ ಪ್ರದೇಶಕ್ಕೆ ರಾತ್ರಿ ವೇಳೆ ಒಬ್ಬಂಟಿಯಾಗಿ ಯಾರೂ ತೆರಳಬಾರದು ಎಂದು ಎಚ್ಚರಿಕೆ ನೀಡಿದೆ.

ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಯಾರೂ ತೆರಳಬಾರದು ಎಂದು ಅರಣ್ಯ ಇಲಾಖೆ ಈಗಾಗಲೇ ಬೆಟ್ಟದ ಸುತ್ತಮುತ್ತಲಿನ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ. ಬೆಟ್ಟಕ್ಕೆ ಹೋಗುವ ವಾಯು ವಿಹಾರಿಗಳಿಗೂ ತಡೆ ಒಡ್ಡಿದ್ದು, ಬೊಂಬುಗಳನ್ನು ಇಟ್ಟು ಸಿಬ್ಬಂದಿ ನೇಮಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್‌ ಕ್ಷೀರಸಾಗರ, ‘ರಾಜನಗರದ ಕೇಂದ್ರೀಯ ವಿದ್ಯಾಲಯದ ಹಿಂಭಾಗ ಚಿರತೆ ಶನಿವಾರ ರಾತ್ರಿ ಚಿರತೆ ಪತ್ತೆಯಾಗಿದೆ. ಕಾಡಿನಿಂದ ನಾಡಿಗೆ ಚಿರತೆ ಬರುವುದು ಸಾಮಾನ್ಯ. ಹೀಗಾಗಿ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಆದರೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದರು.

ಒಂಟಿಯಾಗಿ ಓಡಾಡದಂತೆ ಮನವಿ

ಚಿರತೆ ಇರುವುದು ದೃಢವಾಗಿರುವ ಕಾರಣ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಒಬ್ಬಂಟಿಯಾಗಿ ಯಾರೂ ಓಡಾಡಬಾರದು ಎಂದು ಯಶಪಾಲ್‌ ಕ್ಷೀರಸಾಗರ ಮನವಿ ಮಾಡಿದ್ದಾರೆ.

ಅಗತ್ಯವಿದ್ದರೆ ಮಾತ್ರ ಗುಂಪಲ್ಲಿ ಓಡಾಡಬೇಕು. ಚಿರತೆ ಜನವಸತಿ ಪ್ರದೇಶಕ್ಕೆ ಬಂದಾಗ ಜನರು ಗುಂಪುಗೂಡಿದರೆ, ಅದು ಗಾಬರಿಯಿಂದ ಜನರ ಮೇಲೆ ಹಲ್ಲೆ ಮಾಡುವ ಸಾಧ್ಯತೆಯಿರುತ್ತದೆ. ಆ ಕಾರಣ, ಬೆಟ್ಟದ ಸುತ್ತಮುತ್ತ ಜನ ಒಂದೆಡೆ ಸೇರಬಾರದು. ಸಾಕು ಪ್ರಾಣಿಗಳನ್ನು ಮನೆಯೊಳಗೆ ಕಟ್ಟಬೇಕು. ಚಿರತೆಗೆ ಯಾರೂ ತೊಂದರೆ ನೀಡದೆ ಇದ್ದರೆ, ರಾತ್ರಿಯಾಗುತ್ತಿದ್ದಂತೆ ಅದು ಕಾಡಿಗೆ ಹೊರಟು ಹೋಗುತ್ತದೆ ಎಂದರು.

ಎರಡು ದಿನಗಳಲ್ಲಿ ಚಿರತೆ ಸೆರೆ ಹಿಡಿಯಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಬೆಟ್ಟದ ಸುತ್ತಲಿನ ನಿವಾಸಿಗಳಿಗೆ ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ಮಾಹಿತಿ ನೀಡಲಾಗಿದೆ
ಯಶ್ಪಾಲ್‌ ಕ್ಷೀರಸಾಗರ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.