ADVERTISEMENT

ಉನ್ನತಾಧಿಕಾರಿ ಸಮಿತಿ ಜತೆ ಸಭೆಗೆ ನಿರ್ಣಯ

ಮೂರುಸಾವಿರ ಮಠದ ಸದ್ಭಕ್ತರ ಸಭೆಯಲ್ಲಿ ಮುಖಂಡರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 13:40 IST
Last Updated 2 ಮಾರ್ಚ್ 2020, 13:40 IST
ಸಭೆಯಲ್ಲಿ ಮೂರುಸಾವಿರ ಮಠ ಹಿತಾಭಿವೃದ್ಧಿ ವೇದಿಕೆ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಮಾತನಾಡಿದರು. ಶಿವಲಿಂಗೇಶ್ವರ ಸ್ವಾಮೀಜಿ ಇದ್ದಾರೆ
ಸಭೆಯಲ್ಲಿ ಮೂರುಸಾವಿರ ಮಠ ಹಿತಾಭಿವೃದ್ಧಿ ವೇದಿಕೆ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಮಾತನಾಡಿದರು. ಶಿವಲಿಂಗೇಶ್ವರ ಸ್ವಾಮೀಜಿ ಇದ್ದಾರೆ   

ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದಕ್ಕೆ ಸಂಬಂಧಿಸಿದಂತೆ, ಮಠದ ಉನ್ನತಾಧಿಕಾರಿ ಸಮಿತಿ ಸದಸ್ಯರ ಜತೆ ಸಭೆ ನಡೆಸಲು ಭಾನುವಾರ ನಡೆದ ಮಠದ ಸದ್ಭಕ್ತರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಮಂಟೂರಿನ ಶಿವಲಿಂಗೇಶ್ವರ ಸ್ವಾಮೀಜಿ ಮತ್ತು ಮೂರುಸಾವಿರ ಮಠದ ಹಿತಾಭಿವೃದ್ಧಿ ವೇದಿಕೆ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲರೂ ಒಮ್ಮತದಿಂದ ನಿರ್ಣಯಕ್ಕೆ ಬಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಕಾಶ ಬೆಂಡಿಗೇರಿ, ‘ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳನ್ನೇ ಮೂರುಸಾವಿರ ಮಠದ ಉತ್ತರಾಧಿಕಾರಿಯಾಗಿ ನೇಮಿಸುವ ಕುರಿತು ಈಗಿನ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಇದುವರೆಗೆ ತಮ್ಮ ಅಭಿಪ್ರಾಯ ತಿಳಿಸಿಲ್ಲ. ಅವರಿಗೂ ದಿಂಗಾಲೇಶ್ವರರೇ ಉತ್ತರಾಧಿಕಾರಿಯಾಗಬೇಕು ಎಂಬ ಇಚ್ಛೆ ಇದೆ. ಆದರೆ, ಕಾಣದ ಕೈಗಳು ಅವರನ್ನು ಕಟ್ಟಿ ಹಾಕಿವೆ’ ಎಂದರು.

ADVERTISEMENT

‘ದಿಂಗಾಲೇಶ್ವರರೇ ಉತ್ತರಾಧಿಕಾರಿಯಾಗಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ. ಹಾಗಾಗಿ, ಈ ಕುರಿತು ನಿರಂತರವಾಗಿ ಜನರಲ್ಲಿ ಅರಿವು ಮೂಡಿಸಬೇಕು. ಅದಕ್ಕಾಗಿ ಸಾವಿರ ಮಂದಿಯನ್ನು ವೇದಿಕೆಯ ಸದಸ್ಯರನ್ನಾಗಿ ಮಾಡಿಕೊಂಡು, ನಿರಂತರವಾಗಿ ಅಭಿಪ್ರಾಯ ರೂಪಿಸಲು ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.

ರೈತ ಸೇನೆಯ ಅಧ್ಯಕ್ಷ ವೀರೇಶ ಸೊಬರದಮಠ, ‘ದಿಂಗಾಲೇಶ್ವರರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಿದ ಉಯಿಲಿಗೆ ಮಠದ ಉನ್ನತಾಧಿಕಾರಿ ಸಮಿತಿಯ 51 ಮಂದಿ ಸಹಿ ಮಾಡಿದ್ದಾರೆ. ಜನಪ್ರತಿನಿಧಿಗಳೂ ಸೇರಿದಂತೆ ಪ್ರಮುಖರು ಇದರಲ್ಲಿದ್ದಾರೆ. ಹಾಗಾಗಿ, ಅವರೆಲ್ಲರ ಜತೆ ಸಭೆ ನಡೆಸಿ, ಅಭಿಪ್ರಾಯ ಪಡೆಯಬೇಕು. ಇದರಿಂದ ಸಮಿತಿಯ ಕೈಗೊಂಡಿದ್ದ ತೀರ್ಮಾನದ ಬಗ್ಗೆ ಭಕ್ತರಿಗೆ ಸ್ಪಷ್ಟತೆ ಸಿಗಲಿದೆ’ ಎಂದು ಸಲಹೆ ನೀಡಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಅಜ್ಜಪ್ಪ ಹೊರಕೇರಿ, ‘ಉಯಿಲಿಗೆ ಸಹಿ ಮಾಡಿದವರು ಒತ್ತಡಕ್ಕೆ ಒಳಗಾಗಿ ಸಹಿ ಮಾಡಿದ್ದರೆ, ಅಥವಾ ಈಗ ದಿಂಗಾಲೇಶ್ವರರ ಬಗ್ಗೆ ಅವರಿಗೆ ಸಹಮತ ಇಲ್ಲವೇ ಎಂಬುದನ್ನು ಬಹಿರಂಗಪಡಿಸಬೇಕು’ ಎಂದರು.

‘ಮಠದ ಹಿರಿಯ ಭಕ್ತರು ಉನ್ನತಾಧಿಕಾರ ಸಮಿತಿಯಲ್ಲಿದ್ದವರನ್ನು ಭೇಟಿ ಮಾಡಿ, ಅವರ ಮಾತುಗಳನ್ನು ಆಲಿಸಬೇಕು. ಜತೆಗೆ, ಅವಳಿನಗರದಾದ್ಯಂತ ಭಕ್ತರ ಸಭೆ ನಡೆಸಿ ಮನದ ಇಂಗಿತ ಅರಿಯಬೇಕು. ಇಲ್ಲದಿದ್ದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಅಪಪ್ರಚಾರವನ್ನೇ ಭಕ್ತರು ನಿಜ ಎಂದು ನಂಬುವ ಸಾಧ್ಯತೆ ಇರುತ್ತದೆ’ ಎಂದು ಬಿಜೆಪಿ ಮುಖಂಡ ಶಿವಾನಂದ ಮುತ್ತಣ್ಣವರ ಹೇಳಿದರು.

ಉತ್ತರಾಧಿಕಾರಿ ನೇಮಕ ಕುರಿತ ವಿವಾದವನ್ನು 45 ದಿನದೊಳಗೆ ಬಗೆಹರಿಸುವಂತೆ ಫೆ. 23ರಂದು ದಿಂಗಾಲೇಶ್ವರರು ಗಡುವು ನೀಡಿದ್ದಾರೆ. ಅಷ್ಟರೊಳಗೆ ನಗರದಾದ್ಯಂತ ಮಠದ ಭಕ್ತರು, ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಲಾಯಿತು.

ಮಾರುತಿ ಬಿಳಿಗೇರಿ, ಬಸವರಾಜ ತೇರದಾಳ, ಎಂ.ಎಂ. ಗೌಡರ ಸೇರಿದಂತೆ ಅನೇಕ ಭಕ್ತರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.