ADVERTISEMENT

ಬನ್ನಿ ಮುಡಿದು ಸಂಭ್ರಮ ಹಂಚಿಕೊಂಡ ಭಕ್ತರು

ದೇವಿ ದೇವಸ್ಥಾನಗಳಲ್ಲಿ ಕಣ್ಮನ ಸೆಳೆದ ಪುಷ್ಪಾಲಂಕಾರ, ದಾಜೀಬಾನ್‌ ಪೇಟೆಯಲ್ಲಿ ಸಡಗರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:04 IST
Last Updated 27 ಅಕ್ಟೋಬರ್ 2020, 4:04 IST
ಹುಬ್ಬಳ್ಳಿಯಲ್ಲಿ ಸೋಮವಾರ ಅಲಂಕೃತ ದ್ಯಾಮವ್ವದೇವಿ ದುರ್ಗಾದೇವಿ ದರ್ಶನ ಪಡೆದ ಭಕ್ತರು
ಹುಬ್ಬಳ್ಳಿಯಲ್ಲಿ ಸೋಮವಾರ ಅಲಂಕೃತ ದ್ಯಾಮವ್ವದೇವಿ ದುರ್ಗಾದೇವಿ ದರ್ಶನ ಪಡೆದ ಭಕ್ತರು   

ಹುಬ್ಬಳ್ಳಿ: ನಗರದ ಪ್ರಮುಖ ದೇವಸ್ಥಾನಗಳಲ್ಲಿ ಸೋಮವಾರ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ತರಹೇವಾರಿ ಹೂವುಗಳ ಅಲಂಕಾರದಲ್ಲಿ ಮಿಂದೆದ್ದ ದೇವಿಯ ದರ್ಶನ ಪಡೆದು ಪರಸ್ಪರ ಬನ್ನಿ ಹಂಚಿಕೊಂಡು ದಸರಾ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ವಿಜಯದಶಮಿ ಅಂಗವಾಗಿ ಪಲ್ಲಕ್ಕಿ ಉತ್ಸವದ ಬಳಿಕ ಬನ್ನಿ ಮುಡಿಯಲಾಯಿತು. ನಗರದ ವಿವಿಧೆಡೆ ಬನ್ನಿಕಟ್ಟೆಗೆ ಪೂಜೆ ಸಲ್ಲಿಸಿ ಜನ ‘ಬನ್ನಿ ತೊಗೊಂಡು ಬಂಗಾರದಂಗ ಇರೋಣು’ ಎಂದು ಬನ್ನಿ ಹಂಚಿಕೊಂಡರು.

ಬನಶಂಕರಿ ದೇವಿ ಗುಡಿ, ಲಿಂಗರಾಜ ನಗರದ ಕಟ್ಟಿಮಂಗಳಾದೇವಿ, ಹಳೇ ಹುಬ್ಬಳ್ಳಿಯ ಬನ್ನಿ ಮಹಾಂಕಾಳಿ, ಹೊಸೂರಿನ ಗಾಳಿ ದುರ್ಗಮ್ಮಾ, ಜನತಾ ಬಜಾರ್‌ನ ದ್ಯಾಮವ್ವದೇವಿ ದುರ್ಗಾದೇವಿ, ವೀರಭದ್ರೇಶ್ವರ ಕಾಲೊನಿಯ ದೇವಿ ಗುಡಿ ಹಾಗೂ ದಾಜೀಬಾನ್‌ ಪೇಟೆಯ ತುಳಜಾ ಭವಾನಿ ದೇವಸ್ಥಾನದಲ್ಲಿ ಸಾಕಷ್ಟು ಭಕ್ತರು ದೇವಿ ದರ್ಶನ ಪಡೆದರು. ತುಳಜಾ ಭವಾನಿ ದೇವಸ್ಥಾನದಲ್ಲಿ ಸೋಮವಾರ ತಡರಾತ್ರಿಯಾದರೂ ಭಕ್ತರು ದೇವಿ ದರ್ಶನಕ್ಕಾಗಿ ಬರುತ್ತಿದ್ದ ಚಿತ್ರಣ ಕಂಡು ಬಂತು.

ADVERTISEMENT

ತುಳಜಾ ಭವಾನಿ ಮತ್ತು ದ್ಯಾಮವ್ವದೇವಿ ದೇವಸ್ಥಾನಗಳು ಸಮೀಪದಲ್ಲಿರುವ ಕಾರಣ ದಾಜೀಬಾನ್‌ ಪೇಟೆಯ ತುಂಬೆಲ್ಲಾ ಸಂಭ್ರಮದ ವಾತಾವರಣ ಕಂಡುಬಂತು. ಈ ಎರಡೂ ದೇವಾಲಯಗಳಲ್ಲಿ ದುರ್ಗಾ ಹೋಮ, ಹುಲಿಗೆಮ್ಮದೇವಿಗೆ ನವವಿಧ ಸ್ನಾನ, ಮಹಾಭಿಷೇಕ ನಡೆಯಿತು. ವಿವಿಧ ಪುಷ್ಪಗಳಿಂದ ಅಲಂಕರಿಸಿ ಅರಿಶಿಣ, ಕುಂಕುಮ, ಏರಿಸಿ 108 ತುಪ್ಪದ ಬತ್ತಿಯ ಆರತಿಯಿಂದ ಉದಯಪೂಜೆ ನೆರವೇರಿತು. ಪಲ್ಲಕ್ಕಿಯಲ್ಲಿ ದೇವಿ ಉತ್ಸವಮೂರ್ತಿಯನ್ನಿರಿಸಿ, ಡೊಳ್ಳು ಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವದ ಭವ್ಯ ಮೆರವಣಿಗೆ ಜರುಗಿತು.

ನವರಾತ್ರಿಯಲ್ಲಿ ದೇವಿ ಮಹಾತ್ಮೆಯ ಪುರಾಣ ಪ್ರವಚನ ನೀಡಿದ ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯತು. ಮಾತೋಶ್ರೀ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು.

ಪ್ರತಿ ದಸರಾ ಸಮಯದಲ್ಲಿ ಈ ಭಾಗದ ಪ್ರಸಿದ್ಧ ದೇವಾಲಯ ಯಲ್ಲಮ್ಮನ ಗುಡ್ಡ ಮತ್ತು ಮಹಾರಾಷ್ಟ್ರದ ತುಳಜಾಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹೋಗುತ್ತಿದ್ದರು. ಕೋವಿಡ್‌ ಕಾರಣದಿಂದ ಅಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಆದ್ದರಿಂದ ಪ್ರತಿ ವರ್ಷಕ್ಕಿಂತ ಈ ಬಾರಿ ಸ್ಥಳೀಯ ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡು ಬಂದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಸ್‌ಎಸ್‌ಕೆ ಪಂಚ ಟ್ರಸ್ಟ್‌ ದುರ್ಗಾದೇವಿ ದೇವಸ್ಥಾನ ಸಮಿತಿ ಮುಖ್ಯ ಜಂಟಿ ಖಜಾಂಚಿ ನೀಲಕಂಠ ಪಿ. ಜಡಿ ‘ಪ್ರತಿ ವರ್ಷ ದಸರಾ ಸಮಯದಲ್ಲಿ ದೇವಿ ದರ್ಶನ ಪಡೆಯಲು ಅಂದಾಜು 25 ಸಾವಿರ ಜನ ಬರುತ್ತಿದ್ದರು. ಈ ಸಲ ಇದು ಅಂದಾಜು 50 ಸಾವಿರಕ್ಕೆ ಹೆಚ್ಚಾಗಿದೆ. ದೇವಿಯ ಆಶೀರ್ವಾದವಿದ್ದರೆ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಭಕ್ತರದ್ದು. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ದೇವಸ್ಥಾನದ ಒಳಗಡೆ ಪ್ರವೇಶ ನೀಡಿದೆವು’ ಎಂದರು.

ರೇಷ್ಮೆ ಸೀರೆ ಅರ್ಪಿಸಿದ ಶಿಲ್ಪಾ ಶೆಟ್ಟರ್‌

ದಾಜೀಬಾನ್‌ ಪೇಟೆಯ ದುರ್ಗಾದೇವಿ ದೇವಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಪತ್ನಿ ಶಿಲ್ಪಾ ಶೆಟ್ಟರ್‌ ದ್ಯಾಮವ್ವದೇವಿ, ದುರ್ಗಾದೇವಿ ಹಾಗು ಲಕ್ಷೀದೇವಿಯರಿಗೆ ರೇಷ್ಮೆ ಸೀರೆಗಳನ್ನು ಅರ್ಪಿಸಿ, ದರ್ಶನ ಪಡೆದರು.

ಶಿಲ್ಪಾ ಅವರನ್ನು ದೇವಸ್ಥಾನದ ಪೂಜಾರಿ ಮನೆತನದ ಲಕ್ಷ್ಮೀಬಾಯಿ ಅರ್ಜುನಸಾ ಪೂಜಾರಿ ಎಸ್‌ಎಸ್‌ಕೆ ಪಂಚ ಟ್ರಸ್ಟ್‌ ‍ಪರವಾಗಿ ಸನ್ಮಾನಿಸಿದರು.

ಟ್ರಸ್ಟ್‌ ಗೌರವ ಕಾರ್ಯದರ್ಶಿ ಭಾಸ್ಕರ ಎನ್. ಜಿತೂರಿ, ಶ್ರದ್ದಾ ಸಂಕಲ್ಪ ಶೆಟ್ಟರ್, ಬಿಜೆಪಿ ಮುಖಂಡರಾದ ಅಶೋಕ ಕಾಟವೆ, ನಾಗೇಶ ಕಲಬುರ್ಗಿ, ಡಿ.ಕೆ. ಚವ್ಹಾಣ, ರಂಗಾ ಬದ್ದಿ, ಜೆ.ವಿ. ಇರಕಲ್, ಮಂಜು ಪೂಜಾರಿ, ಲಲಿತಾ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.