ADVERTISEMENT

ವಿ.ವಿ ಶೈಕ್ಷಣಿಕ ಚಟುವಟಿಕೆಗೆ ನೆರವಾಗಿ: ‌ಜಯಶ್ರೀ ಎಸ್.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ‌ಜಯಶ್ರೀ ಎಸ್. ಮನವಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 13:06 IST
Last Updated 27 ಏಪ್ರಿಲ್ 2025, 13:06 IST
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಆರ್. ಗೋರಬಾಳ ಫೌಂಡೇಷನ್ ಹಾಗೂ ವಿ.ವಿ ನಡುವೆ ಶೈಕ್ಷಣಿಕ ಒಪ್ಪಂದ ಶನಿವಾರ ಜರುಗಿತು
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಆರ್. ಗೋರಬಾಳ ಫೌಂಡೇಷನ್ ಹಾಗೂ ವಿ.ವಿ ನಡುವೆ ಶೈಕ್ಷಣಿಕ ಒಪ್ಪಂದ ಶನಿವಾರ ಜರುಗಿತು   

ಧಾರವಾಡ: ‘ವಿಶ್ವವಿದ್ಯಾಲಯಗಳ ಶೈಕ್ಷಣಿಕ ಚಟುವಟಿಕೆಗೆ ಉದ್ಯಮಗಳು, ಕಾರ್ಪೊರೇಟ್ ಕಂಪನಿಗಳು ಮತ್ತು ಸಂಘ– ಸಂಸ್ಥೆಗಳು ಕೈಜೋಡಿಸಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ‌ಜಯಶ್ರೀ ಎಸ್. ಹೇಳಿದರು.

ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಶನಿವಾರ ನಡೆದ, ಕರ್ನಾಟಕ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ಅಧ್ಯಯನ ವಿಭಾಗ ಮತ್ತು ಬೆಂಗಳೂರಿನ ಎಂ.ಆರ್. ಗೋರಬಾಳ ಫೌಂಡೇಷನ್ ನಡುವಿನ ಒಪ್ಪಂದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವಿದ್ಯಾರ್ಥಿಗಳು ನಡೆಸುವ ಅನ್ವೇಷಣಾ ಚಟುವಟಿಕೆಗಳಿಗೆ ಶಿಷ್ಯವೇತನ ಒದಗಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳಿಗೆ ಸಹಕಾರ ನೀಡಬೇಕು’ ಎಂದರು.

ADVERTISEMENT

ಆಡಳಿತಾಂಗ ಕುಲಸಚಿವ ಎ. ಚನ್ನಪ್ಪ ಮಾತನಾಡಿ, ‘ಶಿಕ್ಷಣ ಸಂಸ್ಥೆಗಳ‌ ಸಬಲೀಕರಣಕ್ಕೆ ಖಾಸಗಿ ಸಂಸ್ಥೆಗಳು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆಯಡಿ ನೆರವು ನೀಡಬೇಕು’ ಎಂದು ಕೋರಿದರು.

ಎಂ.ಆರ್. ಗೋರಬಾಳ ಫೌಂಡೇಷನ್ ಅಧ್ಯಕ್ಷ ರಮೇಶ್ ಗೋರಬಾಳ ಮಾತನಾಡಿ, ‘ನನ್ನ ತಂದೆ ಎಂ.ಆರ್. ಗೋರಬಾಳ ಅವರು ಇದೇ ವಿಶ್ವವಿದ್ಯಾಲಯದಲ್ಲಿ ಕಲಿತವರು. ಇಲ್ಲಿಯೇ ಕಾರ್ಯನಿರ್ವಹಿಸಿದ ಅವರು ಕರ್ನಾಟಕ ವಿಶ್ವವಿದ್ಯಾಲಯದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರು. ವಿಶ್ವವಿದ್ಯಾಲಯಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಫೌಂಡೇಷನ್ ವತಿಯಿಂದ ಸಂಶೋಧನಾನಿರತ ವಿದ್ಯಾರ್ಥಿಗಳಿಗೆ ಶಿಷ್ಯವೇತನ‌, ಅಂತರರಾಷ್ಟ್ರೀಯ ಉಪನ್ಯಾಸ ಆಯೋಜನೆಗೆ ನೆರವು ಹಾಗೂ ಉತ್ತಮ ಸಂಶೋಧನಾ ಪ್ರೌಢ ಪ್ರಬಂಧ ಮಂಡಿಸಿದ ರಸಾಯನವಿಜ್ಞಾನ ಅಧ್ಯಯನ ವಿಭಾಗದ ವಿದ್ಯಾರ್ಥಿಗೆ ನಗದು‌ ಪುರಸ್ಕಾರ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ರಸಾಯನ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ರವೀಂದ್ರ ಕಾಂಬಳೆ ಮಾತನಾಡಿದರು. ಫೌಂಡೇಷನ್ ಕಾರ್ಯದರ್ಶಿ ಡಿ.ಎಸ್. ಪಾಟೀಲ, ಪ್ರಾಧ್ಯಾಪಕರಾದ ಆರ್.ಬಿ. ಚೌಗಲೆ, ಎಲ್.ಎ. ಶಾಸ್ತ್ರಿ, ಸುಜಾತಾ, ಆರ್.ಎಫ್. ಭಜಂತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.