ADVERTISEMENT

ಕಾಯ ಅಳಿಯುವ ತನಕ ಕಾಯಕ ಮಾಡಬೇಕು...

ಹುಬ್ಬಳ್ಳಿ–ಧಾರವಾಡ ಮೆಟ್ರೊ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 19:30 IST
Last Updated 21 ಆಗಸ್ಟ್ 2019, 19:30 IST
ವಿಠಲ ಹೊಂಗಲ್
ವಿಠಲ ಹೊಂಗಲ್   

ಧಾರವಾಡದಲ್ಲಿ ಕನ್ನಡ ಕಾರ್ಯಾಗಾರವೊಂದರಲ್ಲಿ ಪಾಲ್ಗೊಳ್ಳಲು ಲಗುಬಗೆಯಿಂದ ಹೆಜ್ಜೆಯಿಡುತ್ತಿದ್ದೆ. ತುಂತುರು ಮಳೆಯ ನಡುವೆ ಧಾರವಾಡ ಕೋರ್ಟ್‌ ಸರ್ಕಲ್‌ವರೆಗೆ ನಡೆಯುತ್ತ ಹೋಗುತ್ತಿದ್ದರೆ
ಅಲ್ಲೆ ಪಕ್ಕದಲ್ಲಿ ಪಾದರಕ್ಷೆ ಹೊಲಿಯುವ, ಪಾಲಿಶ್‌ ಮಾಡುವ ವ್ಯಕ್ತಿಯೊಬ್ಬರತ್ತ ಗಮನ ಹರಿಯಿತು.

ಕಿರಿದಾದ ಜಾಗದಲ್ಲಿ ತನ್ನ ಉದ್ಯೋಗ ಸಾಮಗ್ರಿಗಳನ್ನು ನೀಟಾಗಿ ಜೋಡಿಸಿಕೊಂಡು ಅವುಗಳ ನಡುವೆ ಕುಳಿತು ತನ್ಮಯತೆಯಿಂದ ಕಾಯಕ ಮಾಡುತ್ತಿದ್ದರು. ಸರಳ, ಶುಭ್ರ ಬಟ್ಟೆ ಹಾಕಿಕೊಂಡಿದ್ದ ಬಂದವರನ್ನು ಶರಣು ಶರಣಾರ್ಥಿ ಬನ್ನಿರಿ ಎಂದು ಗೌರವಿಸುತ್ತಿದ್ದರು. ವಯಸ್ಸು 50ರ ಆಸುಪಾಸು ಇರಬಹುದೆನೋ. ಒಂದು ಚೂರು ಮಾತಿಗೆಳೆಯೋಣ ಎಂದು ನನ್ನ ಪಾದರಕ್ಷೆ ಪಾಲಿಶ್‌ ಮಾಡಲು ತಿಳಿಸಿದೆ. ಅದೂ ಒಲ್ಲದ ಮನಸ್ಸಿನಿಂದ. ಕಾರಣ ಯಾವತ್ತೂ ಪಾದರಕ್ಷೆ ಪಾಲಿಶ್‌ಮಾಡಿಸಿಲ್ಲ. ಕೆಳಗೆ ಕುಳಿತು ಹತ್ತು ನಿಮಿಷ ಅವರೊಂದಿಗೆ ಮಾತನಾಡಿದೆ. ಕಾಯಕದ ಬಗ್ಗೆ ಅವರಿಗೆ ಇರುವ ನಿಷ್ಠೆ, ವಚನಗಳ ಅರಿವು, ದೇಹ ಶಕ್ತಿ ಇರುವವರೆಗೆ ಇತರರ ಹಣ ಅಪೇಕ್ಷೆ ಪಡದೇ ಶ್ರಮವಹಿಸಿ ದುಡಿಯಬೇಕು ಎಂಬ ಅವರ ನಿಲುವು ಮನಸ್ಸಿಗೆ ಹಿಡಿಸಿತು.

ಅವರ ಹೆಸರು ವಿಠಲ ಹೊಂಗಲ್. 30 ವರ್ಷಗಳಿಂದ ಈ ಉದ್ಯೋಗದಲ್ಲಿ ತೊಡಕೊಂಡಿದ್ದಾರೆ. ದಿನವೊಂದಕ್ಕೆ ₹400–₹600ರವರೆಗೆ ಸಂಪಾದನೆ ಮಾಡುವರು. ಅದರಲ್ಲಿಯೇ ನೆಮ್ಮದಿ ಬದುಕು ಇವರದು. ಆದರೂ ಅವರ ತಿಳಿವಳಿಕೆ ಅಪಾರ. ಬಾಲ್ಯದಲ್ಲಿ ಮನೆಯ ಆರ್ಥಿಕ ತೊಂದರೆಯಿಂದ ಶಿಕ್ಷಣ ಪಡೆಯಲಾಗಲಿಲ್ಲ ಎನ್ನುವ ನೋವು ಅವರಿಗೆ ಈಗಲೂ ಇದೆ. ತಾನು ಶಿಕ್ಷಣ ಪಡೆಯಲಾಗದಿದ್ದರೂ ತನ್ನ ನಾಲ್ವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಮಗ ಖಾಸಗಿ ಬ್ಯಾಂಕ್ ಉದ್ಯೋಗಿ. ಮಗಳು ಶಿಕ್ಷಕರ ತರಬೇತಿ ಪಡೆದಿದ್ದಾಳೆ.

ADVERTISEMENT

ಮನೆ ಉಂಟೇ ಎಂಬ ಮಾತಿಗೆ, ‘ಒಂದು ಪುಟ್ಟ ಮನೆ ಇದೆ. ಹಿರಿಯರ ಪುಣ್ಯದ ಫಲ. ಆ ದೇವರು ನನಗೆ ಯಾವುದಕ್ಕೂ ಕಡಿಮೆ ಮಾಡಿಲ್ಲ’ ಎಂದರು. ಮಕ್ಕಳು ನೌಕರಿಯಿದ್ದಾರೆ ನೀವೂ ಏಕೆ ಈ ಕೆಲಸ ಮಾಡುವಿರಿ ಎಂದಾಗ, ಕಾಯಕ ಮಹತ್ವ ಸಾರುವ ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಸೊನ್ನಲಿಗೆ ಸಿದ್ದರಾಮ, ಉಳವಿ ಚೆನ್ನಬಸವಣ್ಣ ಅವರ ವಚನಗಳನ್ನು ಹೇಳಿಯೇ ಬಿಟ್ಟರು. ಬರೀ ಹೇಳಲಿಲ್ಲ; ಅವರು ಅದರಂತೆ ಬದುಕಿದ್ದಾರೆ.

‘ಬದುಕಿನ ಕೊನೆಯವರೆಗೆ ಇನ್ನೊಬ್ಬರ ಹಣಕ್ಕೆ ಆಸೆ ಪಡದೇ ಕಷ್ಪಪಟ್ಟು ದುಡಿಯಬೇಕು. ದುಡಿದು ದುಡಿದು ಕಾಯ ಹಣ್ಣಾಗಬೇಕು. ಆಗ ಮನ ಹಣ್ಣಾಗುವುದು, ಬದುಕು ಅರ್ಥಪೂರ್ಣವಾಗುವುದು. ನಾನು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಕಿಂಚಿತ್ತೂ ಕೀಳರಿಮೆ ಇಲ್ಲ. ಅಭಿಮಾನ ಇದೆ. ಐಸಿರಿ ಬಂದಾಗ ಅರ್ಧ ರಾತ್ರಿಯಲಿ ಕೊಡೆ ಹಿಡಿಯುವರಂತೆ. ಆದರೆ ನನ್ನ ಮಕ್ಕಳಿಗೆ ಉದ್ಯೋಗ ದೊರೆತರೂ ನಾನು ಈ ಕಾಯಕ ಬಿಡಲಾರೆ. ಶಕ್ತಿ ಇರುವರೆಗೆ ಇದನ್ನು ಮಾಡುವೆ’ ಎಂದಾಗ ಇವರಿಗಿರುವ ಕಾಯಕ ನಿಷ್ಠೆ ಶ್ರೇಷ್ಠ ಅನಿಸಿತು. ಕೋರ್ಟ್‌ಗೆ ಬರುವ ವಕೀಲರ, ಜನರ ಅಚ್ಚುಮೆಚ್ಚಿನ ವ್ಯಕ್ತಿ ಅವರು.

ಅಂತಿಮವಾಗಿ ಅವರಿಗೆ ಹತ್ತು ರೂಪಾಯಿ ಕೊಡಬೇಕಿತ್ತು. ಚಿಲ್ಲರೆ ಇಲ್ಲದ ಕಾರಣ ಇಪ್ಪತ್ತು ರೂಪಾಯಿ ಕೊಟ್ಟಾಗ ಅವರ ಬಳಿ ಚಿಲ್ಲರೆ ಇರಲಿಲ್ಲ. ನೀವೇ ಇಟ್ಟುಕೊಳ್ಳಿ ಎಂದರೂ ಅವರ ಆಜುಬಾಜು ಅಂಗಡಿಯಲ್ಲಿ ಕೇಳಿ ಇಸಿದುಕೊಂಡು ಬಂದು ಹತ್ತು ರೂಪಾಯಿ ಕೊಟ್ಟರು. ‘ನನ್ನ ಕಾಯಕದ ಹಣ ಹತ್ತು ರೂಪಾಯಿ. ಅದಕ್ಕಿಂತ ಮಿಗಿಲಾಗಿ ಒಂದು ರೂಪಾಯಿ ಹೆಚ್ಚಿಗೆ ಬೇಡ’ ಅಂದರು. ಬೇಕು ಬೇಕು ಎನ್ನುವವರ ನಡುವೆ ಇವರು ಶ್ರೇಷ್ಠ ವ್ಯಕ್ತಿಯಾಗಿ ಕಂಡರು.

ರಂಗನಾಥ ಎನ್. ವಾಲ್ಮೀಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.