ADVERTISEMENT

ಧಾರವಾಡ ಕೃಷಿ ವಿವಿ: ಸೆ.9ರಿಂದ ಕೃಷಿ ಮೇಳ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 16:10 IST
Last Updated 6 ಸೆಪ್ಟೆಂಬರ್ 2023, 16:10 IST
<div class="paragraphs"><p>ಕುಲಪತಿ ಪಿ.ಎಲ್‌.ಪಾಟೀಲ</p></div>

ಕುಲಪತಿ ಪಿ.ಎಲ್‌.ಪಾಟೀಲ

   

ಧಾರವಾಡ: ‘ಕೃಷಿ ವಿಶ್ವವಿದ್ಯಾಲಯದಲ್ಲಿ ಸೆಪ್ಟೆಂಬರ್ 9ರಿಂದ 12ರವರೆಗೆ ‘ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು’ ಶೀರ್ಷಿಕೆಯಡಿ ಕೃಷಿ ಮೇಳ ನಡೆಯಲಿದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್‌.ಪಾಟೀಲ ತಿಳಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ 9ರಂದು ಬೆಳಿಗ್ಗೆ 11.30ಕ್ಕೆ ಮೇಳ ಉದ್ಘಾಟಿಸುವರು. ಕೃಷಿ ಸಚಿವ ಎನ್‌. ಚಲುರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2.30ಕ್ಕೆ ‘ರೈತರಿಂದ ರೈತರಿಗಾಗಿ’ ಕಾರ್ಯಕ್ರಮ ಆಯೋಜಿಸಲಾಗಿದೆ.10 ರಂದು ಬೀಜ ಮೇಳ ಉದ್ಘಾಟನೆ, 11ರಂದು ಪೌಷ್ಟಿಕತೆ ಮತ್ತು ಆರ್ಥಿಕ ಭದ್ರತೆಗೆ ಸಿರಿಧಾನ್ಯಗಳು ವಿಚಾರ ಸಂಕಿರಣ ಹಾಗೂ 12ರಂದು ಚರ್ಚಾ ಗೋಷ್ಠಿ, ಮಧ್ಯಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಮೇಳದಲ್ಲಿ ಕೃಷಿ ಮತ್ತು ಕೃಷಿ ಪೂರಕ ತಂತ್ರಜ್ಞಾನ, ಹೈಟೆಕ್‌ ತೋಟಗಾರಿಕೆ, ಫಲಪುಷ್ಪ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ ಹಾಗೂ ಜಾನುವಾರು ಪ್ರದರ್ಶನ ಆಯೋಜಿಸಲಾಗಿದೆ. ಕೃಷಿ ವಸ್ತುಪ್ರದರ್ಶನದಲ್ಲಿ 199 ಹೈಟೆಕ್‌ ಮಳಿಗೆ, 351 ಸಾಮಾನ್ಯ ಮಳಿಗೆ, 24 ಯಂತ್ರೋಪಕರಣ ಮಳಿಗೆ, 40 ಆಹಾರ ಮಳಿಗೆ, 50 ಜಾನುವಾರು ಪ್ರದರ್ಶನ ಮಳಿಗೆ ಹಾಗೂ 10 ಕ್ಷೇತ್ರ ಮಳಿಗೆ ವ್ಯವಸ್ಥೆ ಮಾಡಲಾಗಿದೆ. ವಿಶ್ವವಿದ್ಯಾಲಯ ಸಂಶೋಧಿಸಿರುವ 24 ಹೊಸ ತಳಿಗಳು ಹಾಗೂ 33 ಕೃಷಿ ತಾಂತ್ರಿಕತೆಗಳು ಬಿಡುಗಡೆಯಾಗಲಿವೆ. ಬಿತ್ತನೆ ಬೀಜಗಳನ್ನು ಮಾರಲಾಗುವುದು’ ಎಂದು ಅವರು ವಿವರಿಸಿದರು.

‘ವಿಶ್ವವಿದ್ಯಾಲಯಕ್ಕೆ ಪ್ರಥಮ ಬಾರಿಗೆ ಉತ್ಪನ್ನ ಹಾಗೂ ಮಾರಾಟಕ್ಕೆ ಪರವಾನಗಿ ಪತ್ರ ದೊರೆತಿದೆ. 25 ಕ್ವಿಂಟಲ್‌ ವಿವಿಧ ಜೈವಿಕ ಗೊಬ್ಬರಗಳ ಪುಡಿ ಹಾಗೂ 2.6 ಸಾವಿರ ಲೀಟರ್‌ ವಿವಿಧ ಜೈವಿಕ ಗೊಬ್ಬರ ದ್ರವಗಳು, 16 ಕ್ವಿಂಟಲ್‌ ಜೈವಿಕ ಪೀಡೆನಾಶಕಗಳು ಕೃಷಿ ಮೇಳದಲ್ಲಿ ಮಾರಾಟಕ್ಕೆ ಇಡಲಾಗುವುದು’ ಎಂದರು.

ಸೆ. 10ರಂದು ಮಧ್ಯಾಹ್ನ 2.30ಕ್ಕೆ ‘ಬದಲಾಗುತ್ತಿರುವ ಜೀವನಶೈಲಿ ಹಾಗೂ ಹವಾಮಾನ ವೈಪರೀತ್ಯ’ ವಿಚಾರಗೋಷ್ಠಿ ನಡೆಯಲಿದೆ. 11ರಂದು ಮಧ್ಯಾಹ್ನ 4.30 ಕನ್ನಡ ಕೃಷಿಗೋಷ್ಠಿ ಜರುಗಲಿದೆ. ಸೆ. 12ರಂದು ಮಧ್ಯಾಹ್ನ 2.30 ಕ್ಕೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಹಾಗೂ ಸದ್ಭಳಕೆ ವಿಚಾರಗೋಷ್ಠಿ ನಡೆಯಲಿದೆ. ಸೆ. 12ರಂದು ನಡೆಯಲಿರುವ ಸಮಾರೋಪಕ್ಕೆ ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಶ್ರೇಷ್ಠ ಕೃಷಿಕ ಪ್ರಶಸ್ತಿ

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 7 ಪುರುಷರು ಮತ್ತು 7 ಮಹಿಳೆಯರು ಸೇರಿ ಒಟ್ಟು 14 ಕೃಷಿಕರನ್ನು 2023ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಧಾರವಾಡ ಜಿಲ್ಲೆಯ ಹೊಸಟ್ಟಿ ಗ್ರಾಮದ ಫಕೀರಪ್ಪ ಮುರಾರಿ ಹೊನ್ನಾಪುರದ ನಾಗವ್ವಾ ಅಮೃತಾ ಮಾರಿಹಾಳ ಬೆಳಗಾವಿ ಜಿಲ್ಲೆ ಕಲ್ಲೋಳಿಯ ರಮೇಶ ಖಾನಗೌಡ್ರ ಸಿದ್ದನಬಾವಿಯ ಸುವರ್ಣಾ ಹಾದಿಮನಿ ಹಾವೇರಿ ಜಿಲ್ಲೆ ಗೊಂದಿಯ ಲಕ್ಷ್ಮಣ ಕೋಡಿಹಳ್ಳಿ ಕಳಸೂರಿನ ಅನ್ನಪೂರ್ಣ ಚಿಗರಿ ಗದಗ ಜಿಲ್ಲೆಯ ಕುರ್ತಕೋಟಿಯ ಅಶೋಕ ಹಾಳಕೇರಿ ಕಬಲಾಯದಕಟ್ಟಿಯ ಗೀತಾ ದೊಡ್ಡಮನಿ ವಿಜಯಪುರ ಜಿಲ್ಲೆ ಹೆಗಡಿವಾಳದ ಕಾಸಿರಾಯನಗೌಡ ಬಿರಾದಾರ ನಂದಿಹಾಳದ ಕಲ್ಪನಾ ದೊಡ್ಡಮನಿ ಬಾಗಲಕೋಟೆ ಜಿಲ್ಲೆ ಬಂಕನೇರಿಯ ಬಸಪ್ಪ ಬೂದಿ ಕುಳಲಿಯ ಕಾವೇರಿ ಗಣಿ ಹಾಗೂ ಉತ್ತರ ಕನ್ನಡ ಜಿಲ್ಲೆ ಹುಲಿಕೊಂಡದ ಬಸವರಾಜ ನಡುವಿನಮನಿ ಮತ್ತು ಕೊಪ್ಪದ ಅನ್ನಪೂರ್ಣ ಬೆಣ್ಣೆ. ಚನ್ನವೀರ ಕಣವಿ ಲೇಖನ ಪುರಸ್ಕಾರ: ಬೆಂಗಳೂರಿನ ವೆಂಕಟ್ರಮಣ ಹೆಗಡೆ ಅವರ ‘ರಸಗೊಬ್ಬರ ಬಳಸಿದರೆ ಮಣ್ಣು ಹಾಳಾಗುತ್ತಾ?’ ಲೇಖನ 2023ನೇ ಸಾಲಿನ ಚನ್ನವೀರ ಕಣವಿ ಲೇಖನ ಪ್ರಶಸ್ತಿಗೆ ಆಯ್ಕೆಯಾಗಿದೆ.

ಸಿರಿಧಾನ್ಯಗಳ ವರ್ಷ

ಕೃಷಿಕರಿಗೆ ಮಾಹಿತಿ ಪ್ರಸ್ತುತ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಆಚರಿಸಲಾಗುತ್ತಿದೆ. ಸಾವಯವ ಕೃಷಿಯಲ್ಲಿ ಸಿರಿ ಧಾನ್ಯಗಳ ಉತ್ಪಾದನೆ ಅವುಗಳ ಮೌಲ್ಯವರ್ಧನೆಗೆ ಮೇಳದಲ್ಲಿ ಒತ್ತು ನೀಡಲಾಗುವುದು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್‌.ಪಾಟೀಲ ತಿಳಿಸಿದರು. ಸಿರಿಧಾನ್ಯ ಮಾರುಕಟ್ಟೆ ನೈಸರ್ಗಿಕ ಮತ್ತು ಸಾವಯವ ಕೃಷಿ ಮಣ್ಣಿನ ಫಲವತ್ತತೆ ರಕ್ಷಣೆ ಮಳೆ ನೀರು ಸಂಗ್ರಹ ಮತ್ತು ಅಂತರ್ಜಲ ಮರುಪೂರಣ ಕಿಸಾನ್ ಡ್ರೋನ್ ಬಳಕೆ ರೈತರ ಆವಿಷ್ಕಾರಗಳು ಸಾಧಕ ರೈತ ಹಾಗೂ ರೈತ ಮಹಿಳೆಯರೊಂದಿಗೆ ಸಂವಾದ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಕೃಷಿ ಮೇಳಕ್ಕೆ ಮಳಿಗೆಗಳನ್ನು ಸಜ್ಜುಗೊಳಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.