
ಹುಬ್ಬಳ್ಳಿ: ನಗರದ ಪ್ರಮುಖ ವೃತ್ತಗಳು, ರಸ್ತೆ ಬದಿಯ ಮರ, ವಿದ್ಯುತ್ ಕಂಬಗಳು, ಪಾದಚಾರಿ ಮಾರ್ಗಗಳಲ್ಲಿ ರಾರಾಜಿಸುವ ಬ್ಯಾನರ್‌ಗಳು, ಫ್ಲೆಕ್ಸ್‌ಗಳು, ಬಾವುಟಗಳು, ನೇತಾಡುವ ಕೇಬಲ್‌ಗಳು ನಗರದ ಅಂದವನ್ನು ಕೆಡಿಸುವ ಜೊತೆಗೆ ಸಾರ್ವಜನಿಕರಿಗೂ ಸಮಸ್ಯೆ ತಂದೊಡ್ಡಿವೆ.
ವಾಣಿಜ್ಯ, ಧಾರ್ಮಿಕ ಹಾಗೂ ರಾಜಕೀಯ ಚಟುವಟಿಕೆಗಳು ನಗರದಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಹೊಸ ಹೊಸ ಮಳಿಗೆಗಳು ತಲೆ ಎತ್ತುತ್ತಿವೆ. ಪಿಜಿಗಳು, ಕೋಚಿಂಗ್ ಸೆಂಟರ್‌ಗಳೂ ಹೆಚ್ಚಾಗಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಜನರನ್ನು ಸೆಳೆಯುವ ಪ್ರಚಾರ ತಂತ್ರವಾಗಿ ಎಲ್ಲೆಂದರಲ್ಲಿ ಜಾಹೀರಾತುಗಳನ್ನು ಅಂಟಿಸಲಾಗುತ್ತಿದೆ. ಜನಪ್ರಿಯ ರಾಜಕಾರಣಿಗಳಿಂದ ಹಿಡಿದು ಸ್ಥಳೀಯ ಪ್ರಮುಖರ ಜನ್ಮದಿನಕ್ಕೆ ಶುಭಕೋರುವ, ಸಭೆ ಸಮಾರಂಭಕ್ಕೆ ಬೆಂಬಲಿಗರನ್ನು ಆಹ್ವಾನಿಸುವ, ರಾಜ್ಯ– ರಾಷ್ಟ್ರೀಯ ನಾಯಕರು ಬರುತ್ತಾರೆಂದರೆ ಅವರನ್ನು ಸ್ವಾಗತಿಸಲು ನಗರದಾದ್ಯಂತ ಬ್ಯಾನರ್‌ಗಳ ಕಣ್ಣಿಗೆ ರಾಚುತ್ತವೆ.
ಕೆಲವೊಮ್ಮೆ ಬ್ಯಾನರ್‌ಗಳನ್ನು ಅಳವಡಿಸಲು ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯಲಾಗುತ್ತದೆಯಾದರೂ, ನಿಗದಿತ ಅವಧಿ ಬಳಿಕ ಅವುಗಳನ್ನು ತೆರವುಗೊಳಿಸುವ ಷರತ್ತನ್ನೂ ಒಳಗೊಂಡಿರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಅನುಮತಿ ಕೇಳುವ ಗೋಜಿಗೆ ಹೋಗುವುದೇ ಇಲ್ಲ. ಪ್ರಮುಖ ರಾಜಕಾರಣಿಗಳ ಬೆಂಬಲಿಗರು ಹಾಕುವ ಬ್ಯಾನರ್ ತೆರವುಗೊಳಿಸುವುದು ಕಷ್ಟ. ಅದರಲ್ಲಿ ನಾಯಕರ ಚಿತ್ರಗಳಿರುತ್ತವೆ. ಅವುಗಳನ್ನು ತೆಗೆಯಲು ಮುಂದಾದರೆ ಬೆಂಬಲಿಗರು ಬೆದರಿಕೆ ಹಾಕಲೂ ಹಿಂಜರಿಯುವುದಿಲ್ಲ.
ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಕಲಂ (3)ರ ಅಡಿ ಫ್ಲೆಕ್ಸ್‌ಗಳು, ಬಂಟಿಂಗ್‌ಗಳು, ಕಟೌಟ್‌ಗಳನ್ನು ಅಳವಡಿಸುವುದು ಶಿಕ್ಷಾರ್ಹ ಅಪರಾಧ. ಇವುಗಳನ್ನು ಹಾಕಲು ಯಾವ ಸ್ಥಳೀಯ ಸಂಸ್ಥೆಗಳೂ ಅನುಮತಿ ನೀಡುವುದಿಲ್ಲ. ಸ್ಥಳೀಯ ಸಂಸ್ಥೆಗಳು ನಿಗದಿತ ಕಾಲಮಿತಿಯ ನಿಬಂಧನೆಗಳೊಂದಿಗೆ ಬಟ್ಟೆ ಬ್ಯಾನರ್‌ಗಳಿಗೆ ಮಾತ್ರ ಅನುಮತಿ ನೀಡಬಹುದಾಗಿದೆ.
ಅಂದರೆ, ನಗರದಲ್ಲಿ ರಾರಾಜಿಸುವ ಯಾವ ಪ್ಲಾಸ್ಟಿಕ್ ಬ್ಯಾನರ್‌ಗಳೂ ಕಾನೂನು ಮಿತಿಯೊಳಗೆ ಬರುವುದಿಲ್ಲ. ಇವು ಪಾಲಿಕೆಗೆ ಸವಾಲಾಗಿ ಪರಿಣಮಿಸಿವೆ. ರಾತ್ರಿ ಬೆಳಗಾಗುವುದರಲ್ಲಿ ಬ್ಯಾನರ್‌ಗಳನ್ನು ಕಟ್ಟಿರುತ್ತಾರೆ. ಯಾರು ಕಟ್ಟಿದ್ದೆಂಬುದು ಗೊತ್ತೇ ಆಗುವುದಿಲ್ಲ. ಅವುಗಳನ್ನೆಲ್ಲ ದಿನದಿನವೂ ಗುರುತಿಸಿ, ತೆರವು ಮಾಡಿಸುತ್ತಲೇ ಇರುವುದು ಪಾಲಿಕೆಗೆ ಹೊರೆಯಾಗುವುದಷ್ಟೇ ಅಲ್ಲ, ಸಿಬ್ಬಂದಿ ಕೊರತೆಯೂ ಕಾಡುತ್ತಿದೆ.
ಬ್ಯಾನರ್ ಕೇಬಲ್‌ಗಳಲ್ಲಿ ಪಕ್ಷಿಗಳು ಸಿಲುಕಿಕೊಂಡು ಸಾವಿಗೀಡಾಗುತ್ತಿವೆ. ಮೊಳೆ ಹೊಡೆಯುವುದು ಬ್ಯಾನರ್ ಕಟ್ಟುವುದರಿಂದ ವೃಕ್ಷಮಾತೆಗೂ ಹಾನಿ. ಈ ಬಗ್ಗೆ ಜನರು ಚಿಂತನೆ ಮಾಡಬೇಕು.– ವೀರಪ್ಪ ಅರಕೇರಿ, ಅಕ್ಕ ಫೌಂಡೇಷನ್ ಅಧ್ಯಕ್ಷ
ನಗರದಾದ್ಯಂತ ಅಳವಡಿಸಿರುವ ಬಹುತೇಕ ಬ್ಯಾನರ್‌ಗಳ ಅವಧಿ ಮುಗಿದಿವೆ. ನಗರದಲ್ಲಿನ ಕಾನೂನು ಬಾಹಿರ ಬ್ಯಾನರ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.– ಪ್ರಶಾಂತ, ಪಾಲಿಕೆ ಮಾರುಕಟ್ಟೆ ವಿಭಾಗದ ಅಧಿಕಾರಿ
ಮಹಾನಗರ ಪಾಲಿಕೆಗೆ ಆದಾಯ ನಷ್ಟ
ಪಾಲಿಕೆಯ ಅನುಮತಿ ಪಡೆದು ಬ್ಯಾನರ್ ಕಟೌಟ್ ಅಳವಡಿಸಲು ನಿಗದಿತ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇದು ಪಾಲಿಕೆಗೆ ಆದಾಯ ತಂದು ಕೊಡುತ್ತದೆ. ಆದರೆ ಅನುಮತಿ ಪಡೆಯದೇ ಅಳವಡಿಸುವುದರಿಂದ ಪಾಲಿಕೆಗೆ ಬರಬೇಕಿದ್ದ ಆದಾಯ ನಷ್ಟವಾಗುತ್ತಿದೆ. ತೆರವುಗೊಳಿಸುವ ಫ್ಲೆಕ್ಸ್‌ಗಳು ಬಂಟಿಂಗ್ಸ್ ಬ್ಯಾನರ್‌ಗಳ ವಿಲೇವಾರಿಗೆ ನಿರ್ದಿಷ್ಟ ಕ್ರಮಗಳಿಲ್ಲ. ಅವುಗಳನ್ನು ಕೆಲವೊಮ್ಮೆ ಕಸ ಸಂಗ್ರಹಣೆ ವಾಹನಗಳಲ್ಲಿ ಒಯ್ಯಲಾಗುತ್ತದೆ ಮತ್ತೆ ಕೆಲವೊಮ್ಮೆ ಹರಿದು ರಸ್ತೆ ಮೇಲೆ ಎಲ್ಲೆಂದರೆಲ್ಲಿ ಚೆಲ್ಲಾಡುತ್ತಿರುತ್ತದೆ. ಮರ ಬೀದಿದೀಪಗಳ ಕಂಬಗಳಲ್ಲಿ ನೇತಾಡುತ್ತಿರುತ್ತವೆ. ಇದರಿಂದ ಪರಿಸರಕ್ಕೆ ಹಾನಿ ಉಂಟಾಗುವುದಲ್ಲದೆ ವಾಹನ ಸವಾರರಿಗೂ ಅಪಾಯವನ್ನು ತಂದೊಡ್ಡುತ್ತವೆ. ಮರಗಳಿಗೆ ಮೊಳೆ ಹೊಡೆದು ಅಳವಡಿಸುವ ಕಬ್ಬಿಣದ ತಗಡುಗಳ ಜಾಹೀರಾತುಗಳು ಮರಗಳ ಜೀವಕ್ಕೂ ಕುತ್ತು ತರುತ್ತವೆ.
‘ನಗರದಲ್ಲಿ ಯಾವುದೇ ಕೇಬಲ್ ಹಾಕುವುದಾದರೂ ರಸ್ತೆ ಅಡಿ ಪೈಪ್‌ಗಳ ವ್ಯವಸ್ಥೆ ಇರಬೇಕು ಅದರಲ್ಲೇ ಕೇಬಲ್ ಹಾಕಬೇಕು. ಮರಕ್ಕೆ ಕಂಬಕ್ಕೆ ಹಾಕುವ ಕೇಬಲ್‌ಗಳು ಕ್ರಮೇಣ ಜೋತುಬಿದ್ದು ರಸ್ತೆಗೆ ಬರುತ್ತವೆ. ವಾಹನ ಸವಾರರಿಗೆ ಇದು ಉರುಳಾಗಿ ಪರಿಣಮಿಸುವ ಆತಂಕವೂ ಇದೆ. ಪಕ್ಷಿಗಳಿಗೂ ಅಪಾಯಕಾರಿ. ನಿಷ್ಕ್ರಿಯಗೊಂಡ ಕೇಬಲ್‌ಗಳನ್ನು ತೆರವುಗೊಳಿಸಬೇಕು’ ಎಂದು ಪರಿಸರವಾದಿ ಶಂಕರ ಕುಂಬಿ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.