ADVERTISEMENT

ಹುಬ್ಬಳ್ಳಿ | ಹಿಂಗಾರು: 13‌ ಸಾವಿರ ಹೆಕ್ಟೇರ್‌ ಗುರಿ ಹೆಚ್ಚಳ

2,15,725 ಹೆಕ್ಟೇರ್‌ ಬಿತ್ತನೆ ಗುರಿ: ಕಡಲೆ, ಜೋಳ, ಗೋಧಿ ಬೆಳೆ ಹೆಚ್ಚಳ ಸಾಧ್ಯತೆ

ಎಲ್‌.ಮಂಜುನಾಥ
Published 16 ಅಕ್ಟೋಬರ್ 2025, 6:33 IST
Last Updated 16 ಅಕ್ಟೋಬರ್ 2025, 6:33 IST
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಸೂಳಿಕಟ್ಟಿ ಗ್ರಾಮದ ಜಮೀನಿನಲ್ಲಿ ರೈತ ಮಹಿಳೆಯರು ಹಿಂಗಾರು ಬಿತ್ತನೆ ಮಾಡಿದರು
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಸೂಳಿಕಟ್ಟಿ ಗ್ರಾಮದ ಜಮೀನಿನಲ್ಲಿ ರೈತ ಮಹಿಳೆಯರು ಹಿಂಗಾರು ಬಿತ್ತನೆ ಮಾಡಿದರು    

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಅತಿಯಾದ ಮುಂಗಾರು ಮಳೆಯಿಂದ ಬೆಳೆ ಕಳೆದುಕೊಂಡ ಜಿಲ್ಲೆಯ ರೈತರು ಇದೀಗ ಹಿಂಗಾರು ಬೆಳೆ ಮೇಲೆ ಆಶಾಭಾವ ಹೊಂದಿ, ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. 

ಕಳೆದ ಮುಂಗಾರು ಹಂಗಾಮಿನಲ್ಲಿ ಆದ ಬೆಳೆ ಹಾನಿಯಿಂದ ಕಂಗೆಟ್ಟಿದ್ದ ರೈತರು, ಈ ಬಾರಿಯ ಹಿಂಗಾರಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿ ಮುಂಗಾರಿನ ನಷ್ಟವನ್ನು ಹಿಂಗಾರಿನಲ್ಲಿ ಸರಿದೂಗಿಸಿಕೊಳ್ಳಲು ಮುಂದಾಗಿದ್ದಾರೆ. 

2.15 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ: ಜಿಲ್ಲೆಯ ಕೃಷಿ ಇಲಾಖೆಯು ಈ ಬಾರಿ 2,15.725 ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಬಿತ್ತನೆಯ ಗುರಿ ಹೊಂದಿದ್ದು, ಕಳೆದ 2024–25ನೇ ಸಾಲಿನಲ್ಲಿ 2,01,805 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ನಿಗದಿಪಡಿಸಿ, ಸಾಧಿಸಲಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ 13,920 ಹೆಕ್ಟೇರ್‌ ಹಿಂಗಾರು ಬಿತ್ತನೆ ಗುರಿ ಪ್ರದೇಶ ಹಿಗ್ಗಿದೆ.

ADVERTISEMENT

ಜಿಲ್ಲೆಯಲ್ಲಿ ಈಗಾಗಲೇ ಹಿಂಗಾರು ಬಿತ್ತನೆ ಕೃಷಿ ಚಟುವಟಿಕೆಗಳ ಗರಿಗೆದರಿದೆ. ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಹಿಂಗಾರಿನ ಬೆಳೆಗಳಿಗೆ ಸಂಬಂಧಿಸಿದ ಕಡಲೆ, ಗೋಧಿ, ಜೋಳ, ಮೆಕ್ಕೆಜೋಳ, ಶೇಂಗಾ, ಹೆಸರು, ಕುಸುಬೆ, ಸೋಯಾಅವರೆ, ಸೂರ್ಯಕಾಂತಿ, ಮಡಿಕಿ, ಅಲಸಂಧಿ, ಹುರುಳಿ ಬಿತ್ತನೆ ಬೀಜಗಳ ವಿತರಣೆ ಕಾರ್ಯ ಭರದಿಂದ ಸಾಗಿದೆ. 

39 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು: ‘ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆಗಾಗಿ 39 ಸಾವಿರ ಕ್ವಿಂಟಲ್‌ ಹಿಂಗಾರು ಬಿತ್ತನೆಯ ಬೀಜಗಳ ಸಂಗ್ರಹವಿದ್ದು, 9ಸಾವಿರ ಕ್ವಿಂಟಲ್‌ ಬಿತ್ತನೆ ಬೀಜಗಳನ್ನು ಈಗಾಗಲೇ ಜಿಲ್ಲೆಯ 14 ರೈತ ಸಂಪರ್ಕ ಕೇಂದ್ರ ಹಾಗೂ 13 ಹೆಚ್ಚುವರಿ ಉಪ ಕೇಂದ್ರಗಳ ಮೂಲಕ ರೈತರಿಗೆ ಅಗತ್ಯವಿರುವ ಕಡಲೆ, ಜೋಳ, ಮೆಕ್ಕೆಜೋಳ, ಶೇಂಗಾ, ಹೆಸರು ಹಾಗೂ ಸೂರ್ಯಕಾಂತಿ ಸೇರಿದಂತೆ ಹಿಂಗಾರಿನ ಬಿತ್ತನೆ ಬೀಜಗಳ ಪಾಕೇಟ್‌ಗಳನ್ನು ರಿಯಾಯ್ತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಅಗತ್ಯ ಬಿದ್ದರೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲಾಗುವುದು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದರು.

‘ಹಿಂಗಾರಿಗಾಗಿ ಡಿಸೆಂಬರ್‌ ಅಂತ್ಯದವರೆಗೆ ನಮಗೆ 24 ಸಾವಿರ ಟನ್‌ ರಸಗೊಬ್ಬರದ ಅವಶ್ಯವಿದೆ. ಈಗಾಗಲೇ ನಮ್ಮಲ್ಲಿ 19 ಸಾವಿರ ಟನ್‌ ರಸಗೊಬ್ಬರದ ದಾಸ್ತಾನಿದೆ. ಡಿಸೆಂಬರ್‌ ತನಕ ಇನ್ನೂ ಬರಲಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ಅಗತ್ಯ ಮುಂಜಾಗ್ರತೆ ಕ್ರಮವಹಿಸಲಾಗಿದೆ’ ಎಂದು ಅವರು ಹೇಳಿದರು.

ಹೆಚ್ಚು ಮಳೆ ಅವಶ್ಯವಿಲ್ಲ: ‘ಹಿಂಗಾರು ಹಂಗಾಮಿನಲ್ಲಿ ಕಡಲೆ, ಜೋಳ, ಗೋಧಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಬೆಳೆಗಳಿಗೆ ದೊಡ್ಡ ಮಳೆ ಅಗತ್ಯವಿರುವುದಿಲ್ಲ. ಸಣ್ಣ ಮಳೆ, ಇಬ್ಬನಿ ಮತ್ತು ಚಳಿ ವಾತಾವರಣ ಈ ಬೆಳೆಗಳಿಗೆ ಸಾಕು. ನವೆಂಬರ್‌ ಅಂತ್ಯದವರೆಗೆ ಹಿಂಗಾರು ಬಿತ್ತನೆಗೆ ಅನುಕೂಲ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ತಜ್ಞ ರವಿ ಪಾಟೀಲ ತಿಳಿಸಿದರು.

ಕಡಲೆ ಜೋಳ ಗೋಧಿ ಮೆಕ್ಕೆಜೋಳ ಹೆಸರು ಶೇಂಗಾ ಸೇರಿ ಏಕದಳ ದ್ವಿದಳ ಧಾನ್ಯಗಳ ಬೆಳೆಗಳ ಬಿತ್ತನೆಗೆ ಆದ್ಯತೆ ನೀಡಲಾಗಿದೆ. 1.22 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಮತ್ತು 40 ಸಾವಿರ ಹೆಕ್ಟೇರ್‌ನಲ್ಲಿ ಬಿಳಿಜೋಳ ಬಿತ್ತನೆ ಗುರಿಯಿದೆ.
ಮಂಜುನಾಥ ಅಂತರವಳ್ಳಿ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಈ ಬಾರಿಯ ಹಿಂಗಾರಿನಲ್ಲಿ ಹುಬ್ಬಳ್ಳಿ ಗ್ರಾಮೀಣದಲ್ಲಿ 26146 ಹೆಕ್ಟೇರ್‌. ಹುಬ್ಬಳ್ಳಿ ನಗರದಲ್ಲಿ 6019 ಹೆಕ್ಟೇರ್‌ನಲ್ಲಿ ಕಡಲೆ ಜೋಳ ಗೋಧಿ ಹಾಗೂ ಕುಸುಬೆ ಸೇರಿದಂತೆ ಹಿಂಗಾರು ಬೆಳೆಗಳ ಬಿತ್ತನೆಯ ಗುರಿ ಹೊಂದಲಾಗಿದೆ
ಮಂಜುಳಾ ತೆಂಬದ ಸಹಾಯಕ ನಿರ್ದೇಶಕಿ ತಾಲ್ಲೂಕು ಕೃಷಿ ಇಲಾಖೆ ಹುಬ್ಬಳ್ಳಿ  
ಮುಂಗಾರು ಬೆಳೆ ಕಟಾವು ಮಾಡಿ ಈಗಾಗಲೇ ಜೋಳ ಮಡಿಕೆ ಹೆಸರು ಉದ್ದು ಬಿತ್ತನೆ ಮಾಡಿದ್ದೇನೆ. ಹಿಂಗಾರಿನ ಸಣ್ಣ ಮಳೆಗಾಗಿ ಕಾಯುತ್ತಿರುವೆ
ಪರಶುರಾಮ್‌ ಎತ್ತಿನಗುಡ್ಡ ರೈತ ಸೂಳಿಕಟ್ಟಿ ಗ್ರಾಮ ಕಲಘಟಗಿ
ಮುಂಗಾರು ಬೆಳೆಗಳ ಕಟಾವು ಮುಗಿಸಿರುವ ರೈತರು ಮಳೆ ಕಾಯದೇ ಭೂಮಿ ತೇವಾಂಶ ಇರುವಾಗಲೇ ಹಸನು ಮಾಡಿಕೊಂಡು ಹಿಂಗಾರಿನ ಬೆಳೆಗಳ ಬಿತ್ತನೆ ಆರಂಭಿಸಬೇಕು
ರವಿ ಪಾಟೀಲ, ಹವಾಮಾನ ತಜ್ಞ, ಧಾರವಾಡ ಕೃಷಿ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.