ADVERTISEMENT

ಬೀದಿ ನಾಯಿ ದತ್ತು ಅಭಿಯಾನ 24ರಿಂದ

‘ಮೇಯರ್ ಜೊತೆ ಮಾತುಕತೆ’ ಫೋನ್‌ಇನ್‌ ಕಾರ್ಯಕ್ರಮ; ಜ್ಯೋತಿ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 5:36 IST
Last Updated 7 ಆಗಸ್ಟ್ 2025, 5:36 IST
ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಬುಧವಾರ ನಡೆದ ಮೇಯರ್ ಜೊತೆ ಫೋನ್‌ಇನ್‌ ಕಾರ್ಯಕ್ರಮ ನಡೆಯಿತು
ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಬುಧವಾರ ನಡೆದ ಮೇಯರ್ ಜೊತೆ ಫೋನ್‌ಇನ್‌ ಕಾರ್ಯಕ್ರಮ ನಡೆಯಿತು   

ಹುಬ್ಬಳ್ಳಿ: ‘ಬೀದಿ ನಾಯಿಗಳ ನಿಯಂತ್ರಣಕ್ಕೆ ನಾಯಿ ಮರಿಗಳು ಮತ್ತು ನಾಯಿಗಳ ದತ್ತು ಅಭಿಯಾನವನ್ನು ಆಗಸ್ಟ್‌ 24ರಿಂದ ನಡೆಸಲಾಗುವುದು’ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಬುಧವಾರ ಏರ್ಪಡಿಸಿದ್ದ ‘ಮೇಯರ್ ಜೊತೆ ಮಾತುಕತೆ’ ಫೋನ್‌ಇನ್‌ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಆರು ತಿಂಗಳ ಒಳಗಿನ ಮರಿಗಳನ್ನು ಮಾತ್ರ ದತ್ತು ನೀಡಲಾಗುತ್ತಿತ್ತು. ಅದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಬಾರಿ ಮರಿಗಳ ಜತೆಗೆ ನಾಯಿಗಳನ್ನು ದತ್ತು ನೀಡಲಾಗುವುದು’ ಎಂದರು.

‘ದತ್ತು ಪಡೆದ ನಂತರ ಉಳಿಯುವ ನಾಯಿಗಳನ್ನು ಶಿವಳ್ಳಿಯಲ್ಲಿನ ಮಹಾನಗರ ಪಾಲಿಕೆಯ ಘಟಕಕ್ಕೆ ಸ್ಥಳಾಂತರಿಸಲಾಗುವುದು. ಅದರ ಜತೆಗೆ ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ, ಬೀಡಾಡಿ ದನಗಳ ಸ್ಥಳಾಂತರಕ್ಕೆ ಸಹ ಕ್ರಮ ಕೈಗೊಳ್ಳಲಾಗುವುದು. ಅವುಗಳ ನಿರ್ವಹಣೆಗೆ ಕೇರ್ ಟೇಕರ್‌ಗಳನ್ನು ನೇಮಕ‌ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

‘ವಲಯ ಆಯುಕ್ತರು ಪ್ರತಿ ವಾರ ಸಭೆ ನಡೆಸಿ ಆಯಾ ವಾರ್ಡ್‌ಗಳಲ್ಲಿನ ನೀರು, ಕಸ ವಿಲೇವಾರಿ, ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಹಿಂದಿನ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಬಂದ ದೂರುಗಳೇ ಮತ್ತೆ ಪುನರಾವರ್ತನೆಯಾಗಿವೆ. ಮುಂದಿನ ಫೋನ್‌ಇನ್‌ನಲ್ಲಿ ಇದು ಮರುಕಳಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಅಭಿವೃದ್ಧಿ ವಿಷಯದಲ್ಲಿ ಅಧಿಕಾರಿಗಳು, ಯಾವುದೇ ಗಡಿ ಹಾಕಿಕೊಳ್ಳದೇ ಕೆಲಸ ಮಾಡಬೇಕು. ವಲಯ ಆಯುಕ್ತರ ನಡುವೆ ಸಮನ್ವಯ ಇರಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದರು. 

‘ಇಂದಿನ ಫೋನ್‌ಇನ್‌ನಲ್ಲಿ 27 ಕರೆಗಳು ಬಂದಿದ್ದು, 45 ದೂರುಗಳು ಬಂದಿವೆ. ಹಿಂದಿನ ಫೋನ್‌ಇನ್‌ನಲ್ಲಿ 33 ದೂರುಗಳು ಬಂದಿದ್ದವು. ಅದರಲ್ಲಿ 21 ದೂರುಗಳನ್ನು ಪರಿಹರಿಸಲಾಗಿದೆ. ಇನ್ನುಳಿದ ದೂರಿಗಳಿಗೆ ಹೆಚ್ಚು ಅನುದಾನ ಬೇಕಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ಗೋಕುಲ ರಸ್ತೆ ಕಡೆಯಿಂದ ಹೆಚ್ಚು ನೀರು ಬರುವುದರಿಂದ ಆರ್‌.ಎನ್‌.ಶೆಟ್ಟಿ ಕಲ್ಯಾಣ ಮಂಟಪದ ಬಳಿ ನೀರು ಸಂಗ್ರಹವಾಗಿ ಸಮಸ್ಯೆಯಾಗುತ್ತಿದೆ. ಇಲ್ಲಿ ಉಪನಾಲಾ ನಿರ್ಮಿಸುವ ಅಗತ್ಯ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಜೂನ್‌ನಲ್ಲಿ ಸುರಿದ ಮಳೆಗೆ ರಾಜಕಾಲುವೆ ಪಕ್ಕದ 1347 ಮನೆಗಳಿಗೆ ನೀರು ನುಗ್ಗಿತ್ತು. ಶಾಶ್ವತವಾಗಿ ಕುಟುಂಬಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಬೇಕಿದೆ. ಮುಂದಿನ ದಿನಗಳಲ್ಲಿ ಆ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಸಾರ್ವಜನಿಕರ ದೂರು: ‘ವಾರ್ಡ್ 27ರ ನವನಗರದ ಐದನೇ ಕ್ರಾಸ್‌ನಲ್ಲಿ ಡಬ್ಬಾ ಅಂಗಡಿಗಳು ಹೆಚ್ಚಿವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಲಯ ಕಚೇರಿ 4ಕ್ಕೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ನಿವಾಸಿಯೊಬ್ಬರು ದೂರಿದರು.

‘ದಾಜಿಬಾನಪೇಟೆಯಲ್ಲಿ ತುಳಜಾಭವನಾನಿ ದೇವಸ್ಥಾನ ಬಳಿ ನಾಲಾದ ನೀರು ಅಂಗಡಿಗಳಿಗೆ ನುಗ್ಗುತ್ತಿದೆ. ಹಲವು ವರ್ಷಗಳಿಂದ ಸಮಸ್ಯೆ ಇದ್ದು, ಇದಕ್ಕೆ ಪರಿಹಾರ ಒದಗಿಸಬೇಕು’ ಎಂದು ವ್ಯಾಪಾರಿಯೊಬ್ಬರು ಮನವಿ ಮಾಡಿದರು.

‘ವಾರದಲ್ಲಿ ಎರಡು ದಿನ ಮಾತ್ರ ಕಸ ಸಂಗ್ರಹಿಸುತ್ತಾರೆ. ಹಿಂದಿನ ಫೋನ್‌ಇನ್‌ನಲ್ಲಿ ಕರೆ ಮಾಡಿದ್ದಾಗ ಸಮಸ್ಯೆ ಪರಿಹರಿಸುವ ಭರವಸೆ ನೀಡಲಾಗಿತ್ತು. ಈವರೆಗೂ ಕ್ರಮ ಕೈಗೊಂಡಿಲ್ಲ. ವಾರಗಟ್ಟಲೇ ಕಸ ಸಂಗ್ರಹಿಸದಿದ್ದರೆ ಜನರು ಅನಿವಾರ್ಯವಾಗಿ ರ‌ಸ್ತೆ ಬದಿ ಕಸ ಎಸೆಯುತ್ತಾರೆ. ದಿನ ಬಿಟ್ಟು ದಿನ ಕಸ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು’ ಎಂದು ವಾರ್ಡ್ ಸಂಖ್ಯೆ 49ರ ಮಹಿಳೆಯೊಬ್ಬರು ಒತ್ತಾಯಿಸಿದರು.

ಸ್ಟಾಲ್‌ಗಳ ಬಾಡಿಗೆ ನೀಡಲು ಟೆಂಡರ್‌’

ಪಾಲಿಕೆಯ ಸ್ಟಾಲ್‌ಗಳ ತೆರಿಗೆ ಪಾವತಿಸಲು ಚಲನ್ ನೀಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೂ ಸ್ಪಂದಿಸುತ್ತಿಲ್ಲ ಎಂದು ಗಾಂಧಿ ಮಾರುಕಟ್ಟೆಯ ಶ್ರೀನಿವಾಸ ಇಂಗಳಹಳ್ಳಿ ದೂರಿದರು.  ‘ಲೀಸ್ ಅವಧಿ ಮುಗಿದಿರುವ ಕಾರಣ ಚಲನ್ ನೀಡಿಲ್ಲ. ಸ್ಟಾಲ್‌ಗಳನ್ನು ಬಾಡಿಗೆ ನಿಡಲು ಮತ್ತೆ ಟೆಂಡರ್ ಕರೆಯಲಾಗುತ್ತದೆ’ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು. ‘ವಿದ್ಯಾನಗರದ ತಿಮ್ಮಸಾಗರ ಗುಡಿ ಹಿಂಭಾಗದ ಪ್ರದೇಶದಲ್ಲಿ ಎಂಟು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ವಾರಕ್ಕಾಗುವಷ್ಟು ನೀರು ಸಂಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ನಾಲ್ಕು ವರ್ಷಗಳಿಂದ ಸಮಸ್ಯೆ ಇದೆ‘ ಎಂದು ಮಹಿಳೆಯೊಬ್ಬರು ದೂರಿದರು. ‘ಸಿದ್ಧಲಿಂಗೇಶ್ವರ ಕಾಲೊನಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ನೆಲಮಟ್ಟದಿಂದ ಎತ್ತರದಲ್ಲಿ ನಾಲಾ ನಿರ್ಮಿಸಲಾಗಿದೆ. ಇದರಿಂದ ಮನೆಗಳಿಗೆ ನೀರು ನುಗ್ಗುತ್ತದೆ. ಸಮಸ್ಯೆ ಪರಿಹರಿಸಬೇಕು’ ನಿವಾಸಿಯೊಬ್ಬರು ಆಗ್ರಹಿಸಿದರು.  

- ‘ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ

’ ಪಿಒಪಿ ಮತ್ತು ಮಣ್ಣಿನ ಗಣೇಶ ಮೂರ್ತಿಗಳನ್ನು ಗುರುತಿಸಲು ಪ್ರತಿ ವಲಯದಲ್ಲಿ ರಚಿಸಲಾಗಿರುವ ಟಾಸ್ಕ್‌ಫೋರ್ಸ್‌  ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ನಡೆಸಲಾಗುವುದು ಎಂದು ಅಯುಕ್ತ ರುದ್ರೇಶ ಘಾಳಿ ಹೇಳಿದರು. ಪಿಒಪಿ ಮೂರ್ತಿಗಳನ್ನು ತಯಾರಿಸದಂತೆ ಕಲಾವಿದರಿಗೆ ಜಾಗೃತಿ ಮೂಡಿಸಲಾಗುವುದು. ಪಿಒಪಿ ಮೂರ್ತಿ ತಯಾರಿಸುವುದು ಕಂಡು ಬಂದರೆ ಸಾರ್ವಜನಿಕರು ವಾಟ್ಸ್ಆ್ಯಪ್‌ ಮೂಲಕ ದೂರು ನೀಡಿದರೆ ಅದನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಪ್ರತಿ ಜೋನ್‌ಗೆ ಒಂದು ಜೆಸಿಬಿ ಯಂತ್ರ ನೀಡಲಾಗಿದೆ. ಸ್ವಚ್ಛತಾ ಅಭಿಯಾನವನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.