ADVERTISEMENT

ಏಕೀಕರಣ ಚಳವಳಿಯ ಮೂಲ ಧಾರವಾಡ: ಸಂತೋಷ್ ಲಾಡ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 4:53 IST
Last Updated 2 ನವೆಂಬರ್ 2025, 4:53 IST
ಧಾರವಾಡದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತವಾದಾಗ ಸಚಿವ ಸಂತೋಷ ಲಾಡ್‌ ಅವರು ಭಾಷಣ ನಿಲ್ಲಿಸಿ ಕೆಲ ನಿಮಿಷ ಕಾದರು ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತವಾದಾಗ ಸಚಿವ ಸಂತೋಷ ಲಾಡ್‌ ಅವರು ಭಾಷಣ ನಿಲ್ಲಿಸಿ ಕೆಲ ನಿಮಿಷ ಕಾದರು ಪ್ರಜಾವಾಣಿ ಚಿತ್ರ   

ಧಾರವಾಡ: ‘ಕರ್ನಾಟಕ ಏಕೀಕರಣದ ಚಳವಳಿ ಹುಟ್ಟುಹಾಕಿದ್ದು ಧಾರವಾಡ ಜಿಲ್ಲೆ, ಆಲೂರು ವೆಂಕಟರಾವ್‌ ಅವರು ಈ ಚಳವಳಿಯ ಮೂಲ ಪುರುಷ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 70ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ರಾ.ಹ.ದೇಶಪಾಂಡೆ, ಡೆಪ್ಯೂಟಿ ಚನ್ನಬಸಪ್, ಅದರಗುಂಚಿ ಶಂಕರಗೌಡ ಪಾಟೀಲ ಮೊದಲಾದವರು ಏಕೀಕರಣ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕನ್ನಡ ಭಾಷಿಕರ ವಿವಿಧ ಭಾಗಗಳು ಒಗ್ಗೂಡಿ 1956ರಲ್ಲಿ ಮೈಸೂರು ರಾಜ್ಯವು ಉದಯವಾಯಿತು’ ಎಂದರು.

ADVERTISEMENT

‘ಕನ್ನಡ ಭಾಷೆಯು ಸುಮಾರು 2,500 ವರ್ಷ ಹಳೆಯದ್ದು. ಹಲವಾರು ಉಪಭಾಷೆಗಳನ್ನು ಹೊಂದಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದ ಕವಿಗಳು, ಸಾಹಿತಿಗಳು, ಸಂಗೀತಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

‘ರಾಜ್ಯೋತ್ಸವವು ನಮ್ಮ ಬೇರುಗಳನ್ನು ನೆನಪಿಸಿಕೊಳ್ಳುವ ಮತ್ತು ರಾಜ್ಯದ ಸಾಧನೆಗಳನ್ನು, ಗೌರವಿಸುವ ಸಂದರ್ಭವಾಗಿದೆ. ನಾಡು ನುಡಿ ಪ್ರೀತಿಯು ನವೆಂಬರ್‌ಗೆ ಸೀಮಿತವಾಗಬಾರದು. ಕನ್ನಡದಲ್ಲೇ ಮಾತನಾಡುತ್ತೇವೆ, ಬರೆಯುತ್ತೇವೆ, ನಿತ್ಯ ವ್ಯವಹಾರವನ್ನು ಕನ್ನಡದಲ್ಲೇ ಮಾಡುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇವೆ ಎಂದು ನಾವೆಲ್ಲರೂ ಪಣತೊಡಬೇಕು’ ಎಂದರು.

ಪಥ ಸಂಚಲನ–ಬಹುಮಾನ: ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆ ತಂಡ: ಪ್ರಥಮ ಸ್ಥಾನ, ಸೀನಿಯರ್ ಎನ್.ಸಿ.ಸಿ 24 ಬಟಾಲಿಯನ್ ತಂಡ: ದ್ವಿತೀಯ ಹಾಗೂ ಸಮಾಜಕಲ್ಯಾಣ ಇಲಾಖೆ ಬಾಲಕಿಯರ ಎರಡನೇ ತಂಡ: ತೃತೀಯ ಸ್ಥಾನ ಪಡೆಯಿತು.

ವಿಧಾನ ಪರಿಷತ್ತಿನ ಸದಸ್ಯ ಎಫ್.ಎಚ್.ಜಕ್ಕಪ್ಪನವರ, ಬಾಲವಿಕಾಸ ಅಕಾಡಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾಧಿಕಾರಿ ದಿವ್ಯಪ್ರಭು, ಮಹಾನಗರ ಪೊಲೀಸ್‌ ಕಮಿಷನರ್‌ ಎನ್.ಶಶಿಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ ಇದ್ದರು.

ಧಾರವಾಡದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಲಾಡ್‌ ಅವರು ಕನ್ನಡಾಂಭೆ ಭಾವವಚಿತ್ರಕ್ಕೆ ನಮಿಸಿದರು ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‌ಪಥ ಸಂಚಲನ ನಡೆಯಿತು ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ

ಕೈಕೊಟ್ಟ ವಿದ್ಯುತ್‌; ಧ್ವನಿವರ್ಧಕವಿಲ್ಲದೆ ಭಾಷಣ

ಸಚಿವ ಸಂತೋಷ ಲಾಡ್‌ ಧ್ವಜಾರೋಹಣ ನೆರವೇರಿಸಿ ಭಾಷಣ ಓದುವಾಗ ವಿದ್ಯುತ್‌ ಪೂರೈಕೆ ಸ್ಥಗಿತವಾಯಿತು. ಕೆಲ ನಿಮಿಷ ಕಾದರೂ ಸಮಸ್ಯೆ ಪರಿಹಾರವಾಗಲಿಲ್ಲ. ನಂತರ ಲಾಡ್‌ ಅವರು ಭಾಷಣ ಮುಂದುವರಿಸಿದರು. ಜನರೇಟರ್ ಸಹ ಕಾರ್ಯನಿರ್ವಹಿಸಲಿಲ್ಲ. ಮಾರ್ಗೋಪಾಯ ತೋಚದೆ ಅಧಿಕಾರಿಗಳು ಸಿಬ್ಭಂದಿ ಅತ್ತಿತ್ತ ಓಡಾಡಿದರು. ಅರ್ಧಗಂಟೆ ನಂತರ ಜನರೇಟರ್‌ ವ್ಯವಸ್ಥೆ ಮಾಡಿ ವಿದ್ಯುತ್‌ ಪೂರೈಕೆ ಕಲ್ಪಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಚಿವ ಲಾಡ್ ಅವರು ಮೈದಾನದಲ್ಲಿದ್ದ ವಿದ್ಯಾರ್ಥಿಗಳು ಸಾರ್ವಜನಿಕರನ್ನು ಮಾತನಾಡಿಸಿದರು. ಹಲವರು ಸಚಿವರಿಗೆ ಹಸ್ತಲಾಘವ ನೀಡಿ ಅವರ ಜತೆ ‘ಸೆಲ್ಫಿ’ ಕ್ಲಿಕ್ಕಿಸಿಕೊಂಡರು.

ಪರಿಶೀಲಿಸಿ ಶಿಸ್ತುಕ್ರಮ: ಡಿ.ಸಿ

‘ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿ ತೊಂದರೆಯಾಗಿದೆ. ಈ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಪಾಲಿಕೆ ಅಧಿಕಾರಿ ಮತ್ತು ಎಂಜನಿಯರ್‌ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ. ‘ರಾಜ್ಯೋತ್ಸವ ಆಚರಣೆ ನಿಟ್ಟಿನಲ್ಲಿ ಒಂದು ತಿಂಗಳ ಮೊದಲೇ ಪೂರ್ವಭಾವಿ ಸಭೆ ನಡೆಸಲಾಗಿತ್ತು. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಕಾರ್ಯಕ್ರಮ ವೇದಿಕೆ ಅಲಂಕಾರ ಹಾಗೂ ಧ್ವನಿವರ್ಧಕ ವೇದಿಕೆ ಸಿದ್ದತೆ ಜವಾಬ್ದಾರಿ ವಹಿಸಲಾಗಿತ್ತು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.