ಹುಬ್ಬಳ್ಳಿ: ಧಾರವಾಡ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಮಾ. 26 ಮತ್ತು 27ರಂದು ನಡೆಯಲಿದೆ ಎಂದು ಕಸಪಾ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಲಿಂಗರಾಜ ಅಂಗಡಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಮಾ. 28 ಮತ್ತು 29 ರಂದು ಸಮ್ಮೇಳನ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಮಾ. 28ರಿಂದ ಪಿಯುಸಿ ಮೊದಲ ವರ್ಷದ ಪರೀಕ್ಷೆ ಆರಂಭವಾಗುವುದರಿಂದ ಮತ್ತು ಅಂದು ಕೆ.ಎಸ್.ಆರ್.ಟಿ.ಸಿ ಯೂನಿಯನ್ ಮುಷ್ಕರ ಇರುವ ಹಿನ್ನೆಲೆಯಲ್ಲಿ ಮುಂಚಿತವಾಗಿ ಹಮ್ಮಿಕೊಳ್ಳುತ್ತಿದ್ದೇವೆ. ಜಿಲ್ಲೆಯ ಎಂಟು ತಾಲ್ಲೂಕಿನ ಎಲ್ಲ ಸದಸ್ಯರಿಗೆ ಆಹ್ವಾನ ಪತ್ರಿಕೆ ತಲುಪಿಸುವ ಕಾರ್ಯ ನಡೆದಿದೆ ಎಂದರು.
ಡಾ. ರಮಾಕಾಂತ ಜೋಶಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಡಾ. ಗುರುಲಿಂಗ ಕಾಪಸೆ ಉದ್ಘಾಟಿಸಲಿದ್ದಾರೆ. ನಾಲ್ಕು ಸಾಹಿತ್ಯ ಗೋಷ್ಠಿ, ಎರಡು ಕವಿಗೋಷ್ಠಿ, ಉಪನ್ಯಾಸ, ಬಹಿರಂಗ ಅಧಿವೇಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎರಡು ದಿನದ ಸಮ್ಮೇಳನಕ್ಕೆ ಐದು ಸಾವಿರ ಮಂದಿ ಬರುವ ನಿರೀಕ್ಷೆಯಿದ್ದು, ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ಕಸಾಪದಿಂದ ಸಮ್ಮೇಳನಕ್ಕೆ ₹5ಲಕ್ಷ ನೆರವು ದೊರೆಯಲಿದ್ದು, ಅಂದಾಜು ₹7ಲಕ್ಷ ವೆಚ್ಚವಾಗುವ ನಿರೀಕ್ಷೆಯಿದೆ ಎಂದರು.
ಪ್ರೊ. ಕೆ.ಎಸ್. ಕೌಜಲಗಿ, ಗುರುಸಿದ್ದಪ್ಪ ಬಡಿಗೇರ, ಡಾ. ಜಿನದತ್ತ ಹಡಗಲಿ, ಡಾ. ಎಸ್.ಎಸ್. ದೊಡಮನಿ, ಚನ್ನಬಸಪ್ಪ ಧಾರವಾಡಶೆಟ್ರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.